ಶನಿವಾರ, 27 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕ: ಆಮ್ಲಜನಕ ಸ್ವಾವಲಂಬನೆ

ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ಉತ್ಪಾದನಾ ಘಟಕಗಳ ಕಾರ್ಯಾರಂಭ
Last Updated 12 ಅಕ್ಟೋಬರ್ 2021, 1:59 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಇದೀಗ ವೈದ್ಯಕೀಯ ಆಮ್ಲಜನಕದ ಸ್ವಾವಲಂಬನೆ ಸಾಧಿಸಲಾಗಿದೆ. ಪರಿಶುದ್ಧ ಆಮ್ಲಜನಕ ಉತ್ಪಾದನೆಯ ಜೊತೆಗೆ ತಾಲ್ಲೂಕುಗಳಲ್ಲೂ ಕೊರತೆ ಆಗದಂತೆ ಎಚ್ಚರ ವಹಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳೇ ಇದೀಗ ವೈದ್ಯಕೀಯ ಆಮ್ಲಜನಕದ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಬಡರೋಗಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.

ಮುಂಬರುವ ದಿನದಲ್ಲಿ ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ ನಗರದ ವೆನ್ಲಾಕ್‌ ಜಿಲ್ಲಾ ಆಸ್ಪತ್ರೆ, ಲೇಡಿಗೋಶನ್‌ ಆಸ್ಪತ್ರೆ, ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ವಿವಿಧ ಕಂಪನಿಗಳ ಪ್ರಾಯೋಜಕತ್ವದಲ್ಲಿ ಆರಂಭಿಸಲು ನಿರ್ಧರಿಸಲಾಗಿತ್ತು. ಸಂಸದ ನಳಿನ್‌ಕುಮಾರ್ ಕಟೀಲ್‌ ಅವರು ಸಭೆ ನಡೆಸಿ, ವಿವಿಧ ಕಂಪನಿಗಳಿಗೆ ಆಮ್ಲಜನಕ ಉತ್ಪಾದನಾ ಘಟಕಗಳ ನಿರ್ಮಾಣದ ಜವಾಬ್ದಾರಿ ವಹಿಸಿದ್ದರು.

ಅದರಂತೆ ಒಟ್ಟು 5,844 ಎಲ್‌ಪಿಎಂ ಸಾಮರ್ಥ್ಯದ 16 ಆಮ್ಲಜನಕ ಉತ್ಪಾದನಾ ಘಟಕಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಈ ಪೈಕಿ 12 ಘಟಕಗಳು ಕಾರ್ಯಾರಂಭಿಸಿದ್ದು, 4 ಘಟಕಗಳ ಅಳವಡಿಕೆ ನಡೆಯುತ್ತಿದೆ.

ವೆನ್ಲಾಕ್‌ ಆಸ್ಪತ್ರೆಯಲ್ಲೇ ಮೂರು ಘಟಕ:

ವೆನ್ಲಾಕ್‌ ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅಳವಡಿಸಲಾಗಿದೆ. ಇದರಲ್ಲಿ 1000 ಎಲ್‌ಪಿಎಂ ಸ್ಥಾವರವನ್ನು ಪಿಎಂ ಕೇರ್ಸ್‌ ಫಂಡ್‌, 930 ಎಲ್‌ಪಿಎಂ ಸ್ಥಾವರವನ್ನು ಎಂಆರ್‌ಪಿಎಲ್‌ನಿಂದ ಹಾಗೂ ರಾಜ್ಯ ಸರ್ಕಾರದಿಂದ 500 ಎಲ್‌ಪಿಎಂನ ಸ್ಥಾವರ ಅಳವಡಿಸಲಾಗಿದೆ.

ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಕ್ರೆಡೈ ಸಂಸ್ಥೆ ವತಿಯಿಂದ 500 ಎಲ್‌ಪಿಎಂ ಸಾಮರ್ಥಯದಲ್ಲಿ ಆಕ್ಸಿಜನ್‌ ಸ್ಥಾವರ ನಿರ್ಮಿಸಲಾಗುತ್ತಿದೆ. ಬೆಳ್ತಂಗಡಿ ತಾಲ್ಲೂಕು ಆಸ್ಪತ್ರೆಯಲ್ಲಿ 390 ಎಲ್‌ಪಿಎಂ, ಬಂಟ್ವಾಳ ಆಸ್ಪತ್ರೆಯಲ್ಲಿ 500 ಎಲ್‌ಪಿಎಂ, ಪುತ್ತೂರು ತಾಲ್ಲೂಕು ಆಸ್ಪತ್ರೆಯಲ್ಲಿ ಕ್ಯಾಂಪ್ಕೊ ಸಹಯೋಗದಲ್ಲಿ 450 ಎಲ್‌ಪಿಎಂ, ಸುಳ್ಯದಲ್ಲಿ ಕೆಐಒಸಿಎಲ್‌ನಿಂದ 250 ಎಲ್‌ಪಿಎಂ, ಉಳ್ಳಾಲ ಸಮುದಾಯ ಆಸ್ಪತ್ರೆಯಲ್ಲಿ ಸೋನು ಸೂದ್‌ ಫೌಂಡೇಷನ್‌ನಿಂದ 500 ಎಲ್‌ಪಿಎಂ, ಮೂಡುಬಿದಿರೆ ಸಮುದಾಯ ಆಸ್ಪತ್ರೆಯಲ್ಲಿ ಕೆಐಒಸಿಎಲ್‌ನಿಂದ 250 ಎಲ್‌ಪಿಎಂ ಸಾಮರ್ಥ್ಯದ ಘಟಕಗಳನ್ನು ನಿರ್ಮಿಸಲಾಗಿದೆ.

ಕಡಬ ಸಮುದಾಯ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆ, ವಿಟ್ಲ ಸಮುದಾಯ ಆಸ್ಪತ್ರೆ, ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗಳಲ್ಲಿ ತಲಾ 81 ಎಲ್‌ಪಿಎಂ ಸಾಮರ್ಥ್ಯದ ಘಟಕಗಳನ್ನು ಎಸ್‌ಬಿಐ, ಎಂಸಿಎಫ್, ಕೆನರಾ ಬ್ಯಾಂಕ್‌ ನಿರ್ಮಿಸಿಕೊಟ್ಟಿವೆ. ಮೂಲ್ಕಿ ಸಮುದಾಯ ಆಸ್ಪತ್ರೆಯಲ್ಲಿ 200 ಎಲ್‌ಪಿಎಂ ಹಾಗೂ ವಾಮದಪದವು ಸಮುದಾಯ ಆಸ್ಪತ್ರೆಯಲ್ಲಿ 50 ಎಲ್‌ಪಿಎಂ ಘಟಕಗಳು ನಿರ್ಮಾಣವಾಗುತ್ತಿದೆ.

‘ಜಿಲ್ಲೆಯಲ್ಲಿ ಕೋವಿಡ್–19 ಆತಂಕ ಸದ್ಯಕ್ಕೆ ಇಲ್ಲ. ಎಂತಹ ಸಂದರ್ಭದಲ್ಲಿ ಆಮ್ಲಜನಕದ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ವಿವಿಧ ಕಂಪನಿಗಳ ನೆರವಿನಿಂದ ಜಿಲ್ಲಾ, ತಾಲ್ಲೂಕು ಆಸ್ಪತ್ರೆ ಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ನಿರ್ಮಿಸಲಾಗಿದ್ದು, ಬಾಕಿ ಉಳಿದ ಘಟಕಗಳೂ ಶೀಘ್ರ ಕಾರ್ಯಾರಂಭ ಮಾಡಲಿವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

ಆಮ್ಲಜನಕದ ಬೇಡಿಕೆ ಕುಸಿತ

ಸದ್ಯಕ್ಕೆ ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ದೈನಂದಿನ ಆಮ್ಲಜನಕದ ಬೇಡಿಕೆ ಪ್ರಮಾಣ ಇಳಿಕೆಯಾಗಿದೆ.

ಕೋವಿಡ್–19 ಉಲ್ಬಣಿಸಿದ್ದ ಸಂದರ್ಭದಲ್ಲಿ ನಿತ್ಯ 28-30 ಕಿ.ಲೀ. ಆಮ್ಲಜನಕದ ಅಗತ್ಯ ಎದುರಾಗಿತ್ತು. ಸದ್ಯ ಬೇಡಿಕೆಯು 12-13 ಕಿ.ಲೀ.ಗೆ ಇಳಿದಿದೆ. ದ್ರವೀಕೃತ ಆಮ್ಲಜನಕವನ್ನು ಬಳ್ಳಾರಿ, ಕೇರಳದಿಂದ ತಂದು ರಿಫಿಲ್ಲಿಂಗ್‌ ಮಾಡುವ ಒಂದು ಘಟಕ ಹಾಗೂ ನೈಸರ್ಗಿಕ ಆಮ್ಲಜನಕವನ್ನು ಕಂಪ್ರೆಸ್‌ ಮಾಡಿ ಪ್ರತ್ಯೇಕಿಸಿ ಆಮ್ಲಜನಕ ತಯಾರಿಸುವ, ರೀಫಿಲ್ಲಿಂಗ್‌ ಮಾಡುವ ಎರಡು ಘಟಕಗಳು ಜಿಲ್ಲೆಯಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿವೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಎಲ್ಲ ಆಸ್ಪತ್ರೆಗಳಿಗೆ ಇಲ್ಲಿಂದಲೇ ಆಮ್ಲಜನಕ ಸರಬರಾಜು ಮಾಡಲಾಗುತ್ತಿತ್ತು. ಜತೆಗೆ ಖಾಸಗಿ ಆಸ್ಪತ್ರೆಗಳಿಗೆ ಬಳ್ಳಾರಿಯಿಂದ ಆಮ್ಲಜನಕ ತರಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT