ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೋಟ ಬೆಂಗ್ರೆ ಮೇಸ್ತ್ರಿ ಕೊಲೆ ಪ್ರಕರಣ: ಹೊಸ ಮೊಬೈಲ್‌ಗೆ ಹಾನಿ ಮಾಡಿದ್ದಕ್ಕೆ ಕೃತ್ಯ

Published : 27 ಸೆಪ್ಟೆಂಬರ್ 2024, 5:44 IST
Last Updated : 27 ಸೆಪ್ಟೆಂಬರ್ 2024, 5:44 IST
ಫಾಲೋ ಮಾಡಿ
Comments

ಮಂಗಳೂರು: ತೋಟ ಬೆಂಗ್ರೆ ಪ್ರದೇಶದಲ್ಲಿ ಇದೇ 21ರಂದು ನಡೆದಿದ್ದ ಮೇಸ್ತ್ರಿ ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ (39) ಕೊಲೆ ಪ್ರಕರಣವನ್ನು ಪಣಂಬೂರು ಠಾಣೆಯ ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಪರಿಚಿತರೊಬ್ಬರಿಂದ ಪಡೆದ ಹೊಸ ಮೊಬೈಲನ್ನು ಮರಳಿಸದೇ, ಅದಕ್ಕೆ ಹಾನಿ ಮಾಡಿರುವುದೇ ಈ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

‘ತೋಟ ಬೆಂಗ್ರೆ ನಿವಾಸಿ ಧರ್ಮರಾಜ್ ಸುವರ್ಣ (50) ಕೊಲೆ ಆರೋಪಿ. ಆತನನ್ನು ಕೇರಳದ ಕೊಯಿಕ್ಕೋಡ್‌ ಜಿಲ್ಲೆಯ ಚೊಂಪಾಳ ಠಾಣೆಯ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಆರೋಪಿಯು  ತೋಟ ಬೆಂಗ್ರೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ’ ಎಂದು ನಗರ ಪೊಲೀಸ್ ಕಮಿಷನರ್‌ ಅನುಪಮ್‌ ಅಗರ್ವಾಲ್‌ ತಿಳಿಸಿದ್ದಾರೆ.

‘ಆರೋಪಿ ಧರ್ಮರಾಜ್ ಸುವರ್ಣ ಮತ್ತು ಕೊಲೆಯಾದ ಬಸವರಾಜ್ ವಡ್ಡರ್‌ ಪರಸ್ಪರ ಪರಿಚಯದವರು. ಧರ್ಮರಾಜ್‌ ಈಚೆಗೆ ಹೊಸ ಮೊಬೈಲ್ ಖರೀದಿಸಿದ್ದ. ಅದನ್ನು ಬಸವರಾಜ್‌ ತೆಗೆದುಕೊಂಡು ಹೋಗಿದ್ದ. ಮೊಬೈಲನ್ನು ಮರಳಿಸದೇ ಇದ್ದುದರಿಂದ ಸಿಟ್ಟಾಗಿದ್ದ ಧರ್ಮರಾಜ್‌ ಮರದ ಬಡಿಗೆಯಿಂದ ತಲೆಗೆ ಬಡಿದು ಬಸವರಾಜ್‌ ಅವರನ್ನು ಕೊಲೆ ಮಾಡಿದ್ದ’ ಎಂದು ಅವರು ಮಾಹಿತಿ ನೀಡಿದರು.

ಬಸವರಾಜ ವಡ್ಡರ್‌ ಕೊಲೆಯಾದ ಬಗ್ಗೆ ಸಂಬಂಧಿಕ ಹನುಮಂತ ದುರುಗಪ್ಪ ವಡ್ಡರ್ ದೂರು ನೀಡಿದ್ದು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಗರ ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ.ಕೆ. ಮಾರ್ಗದರ್ಶನದಲ್ಲಿ ಪಣಂಬೂರು ಠಾಣೆಯ ಇನ್‌ಸ್ಪೆಕ್ಟರ್‌ ಮೊಹಮ್ಮದ್ ಸಲೀಂ ಅಬ್ಬಾಸ್ ನೇತೃತ್ದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಎಸ್‌.ಐ ಶ್ರೀಕಲಾ ಕೆ.ಟಿ, ಜ್ಞಾನಶೇಖರ ಹಾಗೂ ಎ.ಎಸ್.ಐ.ಗಳಾದ ಕೃಷ್ಣ, ಬಿ.ಕೆ.  ನಯನಾ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ಗಳಾದ ಸತೀಶ್ ಎಂ. ಆರ್, ಸಯ್ಯದ್ ಇಮ್ತಿಯಾಜ್, ಪ್ರೇಮಾನಂದ, ನವೀನ್ ಚಂದ್ರ. ಜೇಮ್ಸ್ ಪಿ.ಜೆ., ಕಾನ್‌ಸ್ಟೆಬಲ್‌ಗಳಾದ ಶಶಿಕುಮಾರ್, ರಾಕೇಶ್, ಮಾಣಿಕ್, ಸೋಮ್ಲಾ ನಾಯ್ಕ ಹಾಗೂ ಚಾಲಕ ಅಂಬಣ್ಣ ಅವರು ಆರೋಪಿಯ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT