ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌನ್ಸೆಲಿಂಗ್ ವಿಳಂಬ, ವಿದ್ಯಾರ್ಥಿಗಳಿಗೆ ಸಂಕಷ್ಟ: ಯು.ಟಿ.ಖಾದರ್‌ ಆಕ್ರೋಶ

ಅರೆವೈದ್ಯಕೀಯ ಕೋರ್ಸ್‌ ಅವ್ಯವಸ್ಥೆ
Last Updated 2 ನವೆಂಬರ್ 2022, 13:42 IST
ಅಕ್ಷರ ಗಾತ್ರ

ಮಂಗಳೂರು: ‘ರಾಜ್ಯದಲ್ಲಿ ದ್ವಿತೀಯ ಪಿ.ಯು ಪರೀಕ್ಷೆ ಫಲಿತಾಂಶ ಪ್ರಕಟಣೆ ಹಾಗೂ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಕೌನ್ಸೆಲಿಂಗ್ ವಿಳಂಬದಿಂದಾಗಿ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಅರೆ ವೈದ್ಯಕೀಯ ಕೋರ್ಸ್‌ಗಳ ತರಗತಿಗಳು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಸರ್ಕಾರಿ ಕೋಟಾದ ಸೀಟುಗಳ ಕೌನ್ಸೆಲಿಂಗ್‌ ಮುಗಿದಿಲ್ಲ’ ಎಂದು ವಿಧಾನಸಭೆಯ ವಿರೋಧಪಕ್ಷದ ಉಪನಾಯಕ ಯು.ಟಿ.ಖಾದರ್‌ ಟೀಕಿಸಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ವಿಳಂಬ ನೀತಿಯಿಂದಾಗಿ ವಿದ್ಯಾರ್ಥಿಗಳಿಗೆ ಒಂದೂವರೆ ತಿಂಗಳ ಕಲಿಕಾ ಅವಧಿಯೇ ನಷ್ಟವಾಗಿದೆ. ಸಿಇಟಿಯಲ್ಲಿ ಉತ್ತಮ ಅಂಕ ಪಡೆದ ಕೆಲವು ವಿದ್ಯಾರ್ಥಿಗಳು ನಿರ್ದಿಷ್ಟ ಕಾಲೇಜಿನಲ್ಲಿ ಸೀಟು ಸಿಗಬಹುದು ಎಂಬ ನಿರೀಕ್ಷೆಯಿಂದ ಭಾಗಶಃ ಶುಲ್ಕ ‍ಪಾವತಿಸಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಅದೇ ಕಾಲೇಜಿನಲ್ಲಿ ಸೀಟು ಖಚಿತವಾಗದಿದ್ದರೆ ಅವರು ಶುಲ್ಕವನ್ನು ಕಳೆದುಕೊಳ್ಳಬೇಕಾಗುತ್ತದೆ. ಸಾಲ ಮಾಡಿ ಮಕ್ಕಳ ಶುಲ್ಕ ಹೊಂದಿಸಿದ ಪೋಷಕರೂ ಇದರಿಂದ ಕಳವಳಗೊಂಡಿದ್ದಾರೆ’ ಎಂದರು.

‘ಕೋವಿಡ್‌ ಸಂದರ್ಭದಲ್ಲಿ ದ್ವಿತೀಯ ಪಿ.ಯು. ಪರೀಕ್ಷೆಗೆ ಹಾಜರಾಗದೆಯೇ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿಇಟಿ ಅಂಕ ಹಂಚಿಕೆಯಲ್ಲೂ ಸರ್ಕಾರ ಎಡವಿದೆ. ಸಿಇಟಿ ಕೌನ್ಸೆಲಿಂಗ್ ವಿಳಂಬವಾಗುವುದಕ್ಕೆ ಸರ್ಕಾರ ಮುಂದಾಲೋಚನೆ ಇಲ್ಲದ ನಿರ್ಧಾರಗಳೇ ಕಾರಣ. ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸದ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪಿ.ಯು. ಪರೀಕ್ಷೆಯ ಫಲಿತಾಂಶ ವಿಳಂಬದಿಂದಾಗಿ ನಮ್ಮ ರಾಜ್ಯದ ಕಾಲೇಜುಗಳ ಅರೆವೈದ್ಯಕೀಯ ಕೋರ್ಸ್‌ಗಳ ಮ್ಯಾನೇಜ್‍ಮೆಂಟ್ ಕೋಟಾ ಸೀಟ್‍ಗಳು ಅನ್ಯ ರಾಜ್ಯದ ವಿದ್ಯಾರ್ಥಿಗಳ ಪಾಲಾಗುತ್ತಿವೆ. ಪಿ.ಯು ಫಲಿತಾಂಶ ಹಾಗೂ ಸಿಇಟಿ ಕೌನ್ಸೆಲಿಂಗ್ ಸೂಕ್ತ ಸಮಯದಲ್ಲಿ ಪ್ರಕಟಿಸಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT