ಮಂಗಳವಾರ, ಸೆಪ್ಟೆಂಬರ್ 27, 2022
27 °C
ಶಿಕ್ಷಣ ಸಂಸ್ಥೆಯ ಸಂಚಾಲಕ ಕೈಗೆ ರಾಖಿ ಕಟ್ಟಿದ ಪೋಷಕರು

ಕಾಟಿಪಳ್ಳ: ವಿದ್ಯಾರ್ಥಿಗಳ ರಾಖಿ ಕೀಳಿಸಿದ್ದಕ್ಕೆ ಪೋಷಕರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರತ್ಕಲ್ (ದಕ್ಷಿಣ ಕನ್ನಡ): ನಗರದ ಹೊರವಲಯದ ಕಾಟಿಪಳ್ಳದ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಕೈಯಲ್ಲಿದ್ದ ರಾಖಿ ತೆಗೆಸಿದ್ದಕ್ಕೆ ಪೋಷಕರು ಹಾಗೂ ಬಿಜೆಪಿ ಕಾರ್ಯಕರ್ತರು ಶಾಲೆಗೆ ಶುಕ್ರವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. 

ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಕೆಲವು ವಿದ್ಯಾರ್ಥಿಗಳು ಗುರುವಾರ ಕೈಗೆ ರಾಖಿ ಕಟ್ಟಿಕೊಂಡು ತರಗತಿಗೆ ಬಂದಿದ್ದರು. ಶಾಲೆಯ ಶಿಕ್ಷಕರು ಮಕ್ಕಳ ಕೈಯಲ್ಲಿದ್ದ ರಾಖಿ ತೆಗೆಸಿ ಕಸದ ಬುಟ್ಟಿಗೆ ಎಸೆದಿದ್ದರು ಎಂಬ ಆರೋಪ ವ್ಯಕ್ತವಾಗಿದೆ. ರಾಖಿ ತೆಗೆಸಿದ್ದನ್ನು ವಿರೋಧಿಸಿ ವಿದ್ಯಾರ್ಥಿಗಳ ಪೋಷಕರು‌ ಮತ್ತು ಬಿಜೆಪಿ ಕಾರ್ಯಕರ್ತರು ಶಾಲೆಗೆ ಭೇಟಿ ನೀಡಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

‘ವಿದ್ಯಾರ್ಥಿಗಳು ‘ಫ್ರೆಂಡ್ ಶಿಪ್ ಬ್ಯಾಂಡ್’ ಧರಿಸಿದ್ದಾರೆ ಎಂದುಕೊಂಡು ಅದನ್ನು ತೆಗೆಸಿದ್ದೇವೆ’ ಎಂದು ಶಿಕ್ಷಕರು ಪೋಷಕರಿಗೆ ಸಮಜಾಯಿಷಿ ಹೇಳಿದರು. ಇದಕ್ಕೊಪ್ಪದ ಪೋಷಕರು, ‘ಫ್ರೆಂಡ್ ಶಿಪ್ ಡೇ ಕಳೆದು ಅನೇಕ ದಿನಗಳೇ ಕಳೆದಿದೆ. ಶಿಕ್ಷಕಿ ಫ್ರೆಂಡ್‌ ಶಿಪ್ ಬ್ಯಾಂಡ್ ತೆಗೆಸಿಲ್ಲ. ಉದ್ದೇಶಪೂರ್ವಕವಾಗಿ ಮಕ್ಕಳ ಕೈಯಲ್ಲಿದ್ದ ರಾಖಿಯನ್ನು ಕಿತ್ತು ಕಸದ ಬುಟ್ಟಿಗೆ ಎಸೆದಿದ್ದಾರೆ’ ಎಂದು ದೂರಿದರು. ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುವುದಾಗಿ ಶಾಲೆಯ ಮುಖ್ಯಶಿಕ್ಷಕರು ತಿಳಿಸಿದರೂ ಪೋಷಕರ ಆಕ್ರೋಶ ತಣಿಯಲಿಲ್ಲ. ರಾಖಿ ತೆಗೆಸಿದ ಶಿಕ್ಷಕಿಯೇ ಮಕ್ಕಳ ಕೈಗೆ ಮತ್ತೆ ರಾಖಿ ಕಟ್ಟಬೇಕು ಎಂದು ಪೋಷಕರು ಪಟ್ಟು ಹಿಡಿದರು. ಪರಿಸ್ಥಿತಿ ಹದ್ದು ಮೀರದಂತೆ ತಡೆಯಲು ಸುರತ್ಕಲ್ ಠಾಣೆಯ ಪೊಲೀಸರು ಆಡಳಿತ ಮಂಡಳಿ ಹಾಗೂ ಪೋಷಕರ ಜೊತೆ ಮಾತುಕತೆ ನಡೆಸಿದರು. ಬಳಿಕ ಶಾಲಾ ಮುಖ್ಯ ಶಿಕ್ಷಕರ ಕೈಗೂ ಪೋಷಕರು ರಾಖಿ ಕಟ್ಟಿದರು.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಲೆಯ ಸಂಚಾಲಕ ಫಾ.ಸಂತೋಷ್ ಲೋಬೊ, ‘ಕೆಲವರು ತಿಳಿಯದೇ ಬೇಜವಾಬ್ದಾರಿಯಿಂದ ವರ್ತಿಸಿ ವಿವಾದ ಸೃಷ್ಟಿಸಿದ್ದಾರೆ. ಈ ಬಗ್ಗೆ ಪೋಷಕರು ‌ಮತ್ತು ಶಿಕ್ಷಕರ ಜೊತೆ ಸಭೆ ಮಾಡಿದ್ದೇವೆ. ತಪ್ಪು ಮಾಡಿದವರು ಪಶ್ಚಾತಾಪ ವ್ಯಕ್ತಪಡಿಸಿ ಕ್ಷಮೆ ಕೇಳಿದ್ದಾರೆ. ವಿವಾದ ಸುಖಾಂತ್ಯ ಕಂಡಿದೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು