ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೇಜಾವರ ಸ್ವಾಮೀಜಿ ರಾಜಕೀಯ ಹಸ್ತಕ್ಷೇಪ ಕೈಬಿಡಲಿ: ಪದ್ಮರಾಜ್‌

Published 7 ಜುಲೈ 2024, 5:07 IST
Last Updated 7 ಜುಲೈ 2024, 5:07 IST
ಅಕ್ಷರ ಗಾತ್ರ

ಮಂಗಳೂರು: 'ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ರಾಜಕೀಯ ಹಸ್ತಕ್ಷೇಪ ಮಾಡುವುದನ್ನು ಬಿಟ್ಟು  ಧಾರ್ಮಿಕ ಕಾರ್ಯಗಳ ಬಗ್ಗೆ, ಹಿಂದೂ ಸಮಾಜದ ಸಾಮಾಜಿಕ ತಾರತಮ್ಯ ನಿವಾರಣೆಯತ್ತ ಗಮನ ಹರಿಸಲಿ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌.  ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಬಿಜೆಪಿ ಅಂದರೆ ಹಿಂದೂ ಸಮಾಜ ಅಂತ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಹಿಂದೂ ಸಮಾಜವನ್ನು ಬಿಜೆಪಿಯವರಿಗೆ ಯಾರೂ ಒತ್ತೆ ಇಟ್ಟಿಲ್ಲ. ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ. ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ  ಪ್ರಸ್ತಾಪಿಸಿದ ವಿಚಾರಗಳ ಬಗ್ಗೆ ಸ್ವಾಮೀಜಿ ಟೀಕೆ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದರು.

‘ಲೋಕಸಭೆ ಚುನಾವಣೆಯಲ್ಲಿ ಬಡವರಿಗೆ ಕಾಂಗ್ರೆಸ್‌ ಆಸೆ ಆಮಿಷ ಒಡ್ಡಿದ್ದರಿಂದ ಬಿಜೆಪಿಗೆ ನಿರೀಕ್ಷಿತ ಸ್ಥಾನಗಳು ಬಂದಿಲ್ಲ ಎಂದೂ ಪೇಜಾವರ ಸ್ವಾಮೀಜಿ ಹೇಳಿದ್ದಾರೆ. ಅಯೋಧ್ಯೆಯ  ಶ್ರೀರಾಮ ಮಂದಿರದ  ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ  ನೀರು ಸೋರಿಕೆ ಆಗಿದೆ ಎಂದು ಅವರೇ ಹೇಳಿಕೆ ನೀಡಿದ್ದರು. ಕಾಮಗಾರಿ ಪೂರ್ಣಗೊಳ್ಳದೇ ತರಾತುರಿಯಲ್ಲಿ ಚುನಾವಣಾ ಪೂರ್ವದಲ್ಲಿ ರಾಮಮಂದಿರವನ್ನು ಉದ್ಘಾಟನೆ ಮಾಡಿದ್ದು ರಾಜಕೀಯ ಆಮಿಷ ಅಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಪಕ್ಷದ ವಕ್ತಾರ ಎಂ.ಜಿ.ಹೆಗಡೆ, ‘ಹಿಂದೂ ಧರ್ಮದ ಉದಾತ್ತ ಧ್ಯೇಯಗಳನ್ನು ರಾಹುಲ್‌ ಗಾಂಧಿಯವರು ಲೋಕಸಭೆಯಲ್ಲಿ ಉಲ್ಲೇಖಿಸಿದ್ದಾರೆ. ಇದು  ಹಿಂದೂಗಳೆಲ್ಲರೂ ಹೆಮ್ಮೆಪಡಬೇಕಾದ ವಿಚಾರ. ಪೇಜಾವರ ಸ್ವಾಮೀಜಿ ಒಂದು ಪಕ್ಷದ ಪರ ಮಾತನಾಡುವುದನ್ನು ಒಪ್ಪಲಾಗದು. ಜನರಿಗೆ ಸತ್ಯ- ಧರ್ಮದ ಮಾರ್ಗದರ್ಶನ ನೀಡಿ.  ಗುರು ಪರಂಪರೆಯನ್ನು‌ ಬಿಜೆಪಿಮಯ ಮಾಡಬೇಡಿ’ ಎಂದರು.

ಪಕ್ಷದ ಮುಖಂಡರಾದ ಮನೋರಾಜ್‌, ಪ್ರಕಾಶ್‌ ಸಾಲ್ಯಾನ್‌, ನಜೀರ್ ಬಜಾಲ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT