ಅರ್ಹತೆ ಇಲ್ಲದವರು ಕಾರ್ಮಿಕ ಕಾರ್ಡ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಇಲಾಖೆ ಯಾವ ಕ್ರಮ ಕೈಗೊಂಡಿದೆ?
ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಗುರುತಿನ ಚೀಟಿ ಪಡೆದಿರುವ ಅನರ್ಹರ ಕಾರ್ಮಿಕ ಕಾರ್ಡ್ ರದ್ದುಪಡಿಸಲಾಗುತ್ತಿದೆ. ನಕಲಿ ದಾಖಲೆ ಸೃಷ್ಟಿಸಿ, ಗುರುತಿನ ಚೀಟಿ ಪಡೆದಿದ್ದ ಕಟ್ಟಡ ಕಾರ್ಮಿಕರಲ್ಲದವರ ಕಾರ್ಡ್ ರದ್ದುಗೊಳಿಸಲು ಕಾರ್ಮಿಕ ಇಲಾಖೆ ರಾಜ್ಯದಾದ್ಯಂತ ‘ಬೋಗಸ್ ಕಾರ್ಡ್ ರದ್ದತಿ ಅಭಿಯಾನ’ ಹಮ್ಮಿಕೊಂಡಿದ್ದು, ಕೊಡಗು ಜಿಲ್ಲೆಯಲ್ಲೂ ಈ ಅಭಿಯಾನ ನಡೆದಿದೆ. ಒಂದು ವರ್ಷದಲ್ಲಿ ಕನಿಷ್ಠ 90 ದಿನ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಿದವರು, ಕೆಲಸ ಮಾಡಿರುವ ದೃಢೀಕರಣ ಪತ್ರ, ಅರ್ಜಿದಾರ ಹಾಗೂ ಅವಲಂಬಿತರ ಆಧಾರ್ ಕಾರ್ಡ್ ಪ್ರತಿ ಮತ್ತಿತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಕಾರ್ಮಿಕ ಕಾರ್ಡ್ ಪಡೆದುಕೊಳ್ಳಬಹುದು.
ಕೂಲಿ ಕೆಲಸ ಮಾಡುವ ಹಿರಿಯ ನಾಗರಿಕರೊಬ್ಬರು ನಮ್ಮ ಮನೆ ಪಕ್ಕದಲ್ಲಿದ್ದಾರೆ. ಅವರಿಗೆ ಕಾರ್ಮಿಕ ಕಾರ್ಡ್ ಪಡೆಯಲು ಅರ್ಹತೆ ಇದೆಯೇ? ಹಂತದ ಬಹುಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಕಾರ್ಮಿಕರು ಯಾವುದೇ ಸುರಕ್ಷಾ ವ್ಯವಸ್ಥೆ ಇಲ್ಲದೆ ಕೆಲಸ ಮಾಡುತ್ತಾರೆ. ಅವರ ಜೀವಕ್ಕೆ ಅಪಾಯವಾದರೆ ಯಾರು ಹೊಣೆ?
18ರಿಂದ 60 ವರ್ಷದೊಳಗಿನ ಕಟ್ಟಡ ಕಾರ್ಮಿಕರಿಗೆ ಮಾತ್ರ ಕಾರ್ಮಿಕ ಕಾರ್ಡ್ ನೀಡಲಾಗುತ್ತದೆ. ಕೂಲಿ ಕೆಲಸ ಮಾಡುವವರು ಹಿರಿಯ ನಾಗರಿಕರಾಗಿದ್ದರೆ, ಸರ್ಕಾರದ ಪಿಂಚಣಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು.
ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷೆ ಆಯಾ ಕಟ್ಟಡದ ಮಾಲೀಕರ ಹೊಣೆ. ಕಾಮಗಾರಿಯ ವೇಳೆ ಕಡ್ಡಾಯವಾಗಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ನಿರ್ದಿಷ್ಟ ಕಟ್ಟಡದ ಬಗ್ಗೆ ಮಾಹಿತಿ ಒದಗಿಸಿದರೆ, ಅಧಿಕಾರಿಗಳು ಸ್ಥಳ ಭೇಟಿ ನೀಡಿ ಪರಿಶೀಲಿಸುತ್ತಾರೆ.
ಕಾರ್ಮಿಕ ಇಲಾಖೆಯಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಪೂರಕವಾಗುವ ಯಾವ ಯೋಜನೆಗಳಿವೆ?
ಕೃಷಿ ಕೂಲಿ ಕಾರ್ಮಿಕರು ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯಡಿ ಸೌಲಭ್ಯ ಪಡೆದುಕೊಳ್ಳಬಹುದು. ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಯೋಜನೆ ಅನುಕೂಲ.
ಅಸಂಘಟಿತ ವಲಯದ ಕಾರ್ಮಿಕರಿಗೆ ಇರುವ ಯೋಜನೆಗಳ ಬಗ್ಗೆ ಇಲಾಖೆ ಯಾವ ರೀತಿಯಲ್ಲಿ ಅರಿವು ಮೂಡಿಸುತ್ತಿದೆ?
ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಇಲಾಖೆ ಪ್ರತಿ ತಾಲ್ಲೂಕು ಮಟ್ಟದಲ್ಲಿ ಹಲವಾರು ಚಟುವಟಿಕೆಗಳನ್ನು ನಡೆಸುತ್ತದೆ. ಜಾಗೃತಿ ಕಾರ್ಯಕ್ರಮದ ಭಾಗವಾಗಿ ಮೂರು ತಿಂಗಳುಗಳಲ್ಲಿ 2,000 ಜನರು ನೋಂದಣಿ ಮಾಡಿಕೊಂಡಿದ್ದಾರೆ. ರೇಡಿಯೊ ಕಾರ್ಯಕ್ರಮಗಳ ಮೂಲಕವೂ ಪ್ರಚಾರ ಮಾಡಲಾಗಿದೆ.
ಉಡುಪಿ ಜಿಲ್ಲೆಯ ಕೆಲವು ಕಡೆ ಯಂತ್ರಗಳು, ನಿರ್ಮಾಣ ಸಾಮಗ್ರಿ ಸಾಗಿಸುವ ಟೆಂಪೊಗಳಲ್ಲಿ ಕಾರ್ಮಿಕರನ್ನು ತುಂಬಿಕೊಂಡು ಹೋಗುತ್ತಾರೆ. ಏನಾದರೂ ಅವಘಡ ಸಂಭವಿಸಿ ಕಾರ್ಮಿಕರು ಜೀವ ಕಳೆದುಕೊಂಡರೆ ಯಾರು ಹೊಣೆ?
ವಾಹನದಲ್ಲಿ ಕಾರ್ಮಿಕರನ್ನು ಕರೆದೊಯ್ಯಬಹುದು, ಆದರೆ ನಿರ್ಮಾಣ ಸಾಮಗ್ರಿ ಇರುವ ವಾಹನದಲ್ಲಿ ಕಾರ್ಮಿಕರನ್ನೂ ಕರೆದುಕೊಂಡು ಹೋಗುವುದು ಅಪರಾಧ. ಈ ಬಗ್ಗೆ ನಿರ್ದಿಷ್ಟ ಸ್ಥಳ ಅಥವಾ ಕಟ್ಟಡದ ಮಾಹಿತಿ ಒದಗಿಸಿದರೆ, ಸ್ಥಳ ತನಿಖೆ ನಡೆಸಿ, ಮಾಲೀಕರಿಗೆ ಎಚ್ಚರಿಕೆ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
ಕಾರ್ಮಿಕರ ಮಕ್ಕಳಿಗೆ ದೊರೆಯುವ ಶೈಕ್ಷಣಿಕ ಧನ ಸಹಾಯ ಒಂದು ಮಗುವಿಗೆ ದೊರೆತಿದೆ. ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ಇನ್ನೊಂದು ಮಗುವಿಗೆ ಹಣ ಬಂದಿಲ್ಲ.
ಅರ್ಜಿ ಸಲ್ಲಿಸಿ ಒಂದು ವರ್ಷ ಆಗಿದ್ದರೆ, ಮುಂದಿನ ಪ್ರಕ್ರಿಯೆ ನಡೆದಿರುತ್ತದೆ. ತಾಂತ್ರಿಕ ಕಾರಣದಿಂದ ಉಳಿಕೆಯಾಗಿರಬಹುದು. ಸ್ಥಳೀಯ ಕಾರ್ಮಿಕ ಇಲಾಖೆ ಕಚೇರಿಗೆ ಭೇಟಿ ನೀಡಿ, ವಿಚಾರಿಸಿ. ಸಕಾಲ ನಂಬರ್ ನೀಡಿದರೆ, ಪರಿಶೀಲಿಸಲಾಗುವುದು.
ಕಾಫಿ ಕೊಯಿಲಿಗೆ ಬರುವ ಕಾರ್ಮಿಕರಲ್ಲಿ ಕಾರ್ಮಿಕ ಕಾನೂನುಗಳ ಅರಿವಿನ ಕೊರತೆ ಇದೆ.
ಈಗ ಕಾಫಿ ಕೊಯಿಲಿನ ಹಂಗಾಮು ಆಗಿದ್ದು, ಇದು ಜಾಗೃತಿ ಕಾರ್ಯಕ್ರಮ ನಡೆಸಲು ಸೂಕ್ತ ಸಮಯ. ಅಸ್ಸಾಂ, ಝಾರ್ಖಂಡ್ ಭಾಗದ ಕಾರ್ಮಿಕರು ಈಗ ಎಸ್ಟೇಟ್‌ಗಳಲ್ಲಿ ಇರುತ್ತಾರೆ. ಕೊಡಗು ಜಿಲ್ಲೆಯ ಕಾರ್ಮಿಕ ಅಧಿಕಾರಿ ಬಳಿ ಮಾತನಾಡಿ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ತಿಳಿಸುತ್ತೇನೆ.
5–10 ಎಕರೆ ವಿಸ್ತೀರ್ಣದ ಕಾಫಿ ಎಸ್ಟೇಟ್‌ಗಳು ಇರುತ್ತವೆ. ಕಾರ್ಮಿಕರಿಗೆ ಏನಾದರೂ ಅವಘಡಗಳಾದರೆ, ಮಾಲೀಕರ ಮೇಲೆ ಕ್ರಮ ಕೈಗೊಳ್ಳುವುದು ಎಷ್ಟರ ಮಟ್ಟಿಗೆ ಸರಿ?
ಎಸ್ಟೇಟ್‌ಗಳ ಮಾಲೀಕರು, ಕಡ್ಡಾಯವಾಗಿ ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆಯಡಿ ಕಾರ್ಮಿಕರ ನೋಂದಣಿ ಮಾಡಿಸಬೇಕು. ಈ ಪರವಾನಗಿಯು ಮಾಲೀಕರಿಗೆ ಸುರಕ್ಷೆ ಒದಗಿಸುತ್ತದೆ. ಇದಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ವಿಳಂಬವಾಗುತ್ತಿದೆ.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯ ಆರ್‌ಟಿಜಿಎಸ್ ಮೂಲಕ ನೇರವಾಗಿ ಫಲಾನುಭವಿಯ ಖಾತೆಗೆ ಜಮಾ ಆಗುತ್ತದೆ. ಹೊಸ ತಂತ್ರಾಂಶ ಅಳವಡಿಸುತ್ತಿರುವ ಕಾರಣಕ್ಕೆ ವಿಳಂಬ ಆಗಿರುವ ಸಾಧ್ಯತೆ ಇದ್ದು, ಆದಷ್ಟು ಶೀಘ್ರ ಬರುತ್ತದೆ.
ಮಂಗಳೂರಿನ ಉರ್ವ ಸ್ಟೋರ್, ಕಾವೂರು, ತೊಕ್ಕೊಟ್ಟು ಮೊದಲಾದ ಕಡೆ ನಿಲ್ಲುವ ಕೂಲಿ ಕಾರ್ಮಿಕರನ್ನು ಗೂಡ್ಸ್ ವಾಹನಗಳಲ್ಲಿ ತುಂಬಿಸಿಕೊಂಡು ಹೋಗಲಾಗುತ್ತದೆ. ಕಟ್ಟಡ ಕಾರ್ಮಿಕರಿಗೆ ನಿರ್ಮಾಣ ಸ್ಥಳದಲ್ಲಿ ಮೂಲ ಸೌಕರ್ಯ ದೊರೆಯುತ್ತಿಲ್ಲ.
ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸುತ್ತೇನೆ.
ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತಿತರ ಹೊರ ರಾಜ್ಯಗಳ ಕಾರ್ಮಿಕರಿಗೆ ಮೂಲ ಸೌಕರ್ಯ ಇಲ್ಲ, ಮಕ್ಕಳು ಶಿಕ್ಷಣ ಇಲ್ಲದೆ, ಬೀದಿಯಲ್ಲಿ ಆಟವಾಡಿಕೊಂಡು ಇರುತ್ತಾರೆ. ಬಂಧಿತ ಕಾರ್ಮಿಕ ಪದ್ಧತಿಯನ್ನು ಈಗಲೂ ವಿರಾಜಪೇಟೆ ತಾಲ್ಲೂಕಿನ ಕೆಲವು ಕಡೆ ಕಾಣಬಹುದು. ಈ ಬಗ್ಗೆ ಇಲಾಖೆ ಪರಿಶೀಲಿಸಬೇಕು.
ಹೊರ ರಾಜ್ಯಗಳಿಂದ ಎಷ್ಟು ಸಂಖ್ಯೆಯಲ್ಲಿ ಕಾರ್ಮಿಕರು ಬರುತ್ತಾರೆ ಮತ್ತು ಅವರಿಗೆ ಯಾವೆಲ್ಲ ಸೌಲಭ್ಯಗಳು ಸಿಗುತ್ತವೆ ಎಂಬುದನ್ನು ಪರಿಶೀಲಿಸಲಾಗುವುದು. ಬಂಧಿತ ಕಾರ್ಮಿಕ ಪದ್ಧತಿ ಇರುವುದು ಖಾತ್ರಿಯಾದರೆ, ಕ್ರಮ ಕೈಗೊಳ್ಳಲಾಗುವುದು. 15 ದಿನ ಬಿಟ್ಟು ನಮ್ಮ ಇಲಾಖೆಯ ಸ್ಥಳೀಯ ಅಧಿಕಾರಿ ಭೇಟಿ ಮಾಡಿ, ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಿ.
ಕಟ್ಟಡ ನಿರ್ಮಾಣ ಕಾರ್ಮಿಕರು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಇಲಾಖೆಯಿಂದ ಸೌಲಭ್ಯಗಳು ಸಿಗಬಹುದೇ?
ಕಾರ್ಮಿಕ ಕಲ್ಯಾಣ ಮಂಡಳಿಗೆ ಯಾದಿ ಕಳುಹಿಸಲಾಗುತ್ತದೆ. ಸ್ಲಮ್ ಬೋರ್ಡ್ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಯ ಜಂಟಿ ನೆರವು ಕೆಲವು ಕಡೆಗಳಲ್ಲಿ ಕಾರ್ಮಿಕರಿಗೆ ಅನುಕೂಲವಾಗಿದೆ.
ಹೊರ ರಾಜ್ಯಗಳಿಂದ ಅಕ್ರಮವಾಗಿ ವಲಸೆ ಬಂದು ಇಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಹಿತಕರ ಘಟನೆ ಸಂಭವಿಸಿದರೆ ಯಾರು ಹೊಣೆ?
ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆಯಡಿ ಕಡ್ಡಾಯವಾಗಿ ಕಾರ್ಮಿಕ ನೋಂದಣಿ ಮಾಡಬೇಕು. ಕಾರ್ಮಿಕ ದಾಖಲೆಯನ್ನು ಪೊಲೀಸ್ ಇಲಾಖೆ ಜೊತೆಗೆ ಕಾರ್ಮಿಕ ಇಲಾಖೆಗೂ ನೀಡಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಕಾರದಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆಯುತ್ತೇನೆ.
ಕೆಲಸ ಮಾಡುವ ಸ್ಥಳದಲ್ಲಿ ನೌಕರನಿಗೆ ಮಾಲೀಕನಿಂದ ತೊಂದರೆಯಾದ ಸಂದರ್ಭದಲ್ಲಿ ಆತ ಮಾಲೀಕನ ವಿರುದ್ಧ ದೂರು ನೀಡಿದರೆ, ಇಲಾಖೆಯಿಂದ ರಕ್ಷಣೆ ಸಿಗಬಹುದಾ?
ನೊಂದವರ ಪರ ಕಾನೂನು ಇರುತ್ತದೆ, ಕಾನೂನು ಹೋರಾಟ ನಡೆಸಬಹುದು. ಯಾವುದೇ ವ್ಯಕ್ತಿಯನ್ನು ಒಮ್ಮೆಲೇ ಕೆಲಸದಿಂದ ತೆಗೆಯಲು ಬರುವುದಿಲ್ಲ. ಪೂರ್ವಸೂಚನೆ ಜೊತೆಗೆ ಸಕಾರಣದೊಂದಿಗೆ ಮೂರು ನೋಟಿಸ್ ನೀಡಬೇಕಾಗುತ್ತದೆ.
ಮೋಟಾರು ಸಾರಿಗೆ ಕಾರ್ಮಿಕ ಕಾಯ್ದೆ ಸೌಲಭ್ಯ ಪಡೆಯುವುದು ಹೇಗೆ?
ಅರ್ಹ ಫಲಾನುಭವಿಗಳು ನೋಂದಣಿ ಮಾಡಿಕೊಂಡರೆ, ಅವರಿಗೆ ಸ್ಮಾರ್ಟ್ ಕಾರ್ಡ್ ದೊರೆಯುತ್ತದೆ. ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು.
ಕಾರ್ಮಿಕರ ಇಲಾಖೆ ಅಧಿಕಾರಿಗಳು ಗ್ರಾಮಸಭೆಗಳಿಗೆ ಬರುತ್ತಿಲ್ಲ. ಗ್ರಾಮಸಭೆಗಳಲ್ಲಿ ಇಲಾಖೆ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರೆ, ಹೆಚ್ಚು ಜನರಿಗೆ ತಲುಪುತ್ತದೆ.
ಗ್ರಾಮಸಭೆಗಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ಕೊಡಗು ಜಿಲ್ಲೆಯ ಕಾರ್ಮಿಕ ಅಧಿಕಾರಿ ಮೂಲಕ ಸಂಬಂಧಪಟ್ಟವರಿಗೆ ತಿಳಿಸಲಾಗುವುದು.
ಅಸಂಘಟಿತ ಕಾರ್ಮಿಕರಿಗೆ ಯಾವೆಲ್ಲ ಯೋಜನೆಗಳು ಇವೆ?
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಯೋಜನೆಯಡಿ 11 ಅಸಂಘಟಿತ ವಲಯ ಕಾರ್ಮಿಕರನ್ನು ಸೇರಿಸಲಾಗಿದೆ. ಅರ್ಹರಿಗೆ ಗುರುತಿನ ಚೀಟಿ ವಿತರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.