ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯಗಳ ಪ್ರಾಣಿ–ಪಕ್ಷಿ ವಿನಿಮಯ: ಪಿಲಿಕುಳಕ್ಕೆ ಬಂದ ರಿಯಾ, ಕೇರಳಕ್ಕೆ ಕಾಳಿಂಗ

ಮೃಗಾಲಯಗಳ ಪ್ರಾಣಿ–ಪಕ್ಷಿ ವಿನಿಮಯ ಶುರು
Last Updated 10 ಮಾರ್ಚ್ 2021, 14:42 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್ ಲಾಕ್‌ಡೌನ್‌ ಕಾರಣ ಸ್ಥಗಿತಗೊಂಡಿದ್ದ ಪ್ರಾಣಿಗಳ ಕೊಡುಕೊಳ್ಳುವಿಕೆಯು ಮತ್ತೆ ಆರಂಭಗೊಂಡಿದ್ದು, ಮಂಗಳೂರಿನ ಪಿಲಿಕುಳದ ಜೈವಿಕ ಉದ್ಯಾನವನಕ್ಕೆ ಎರಡು ಬಿಳಿ ರಿಯಾ, ಎರಡು ಕಂದು ರಿಯಾ ಮತ್ತು ಮೂರು ಬಾರಸಿಂಗ (ಸ್ವಾಂಪ್ ಜಿಂಕೆ) ಬಂದಿವೆ.

ಪ್ರವಾಸಿಗರ ಆಕರ್ಷಣೆಯಾಗಿರುವ ಇವುಗಳನ್ನು ಕೇರಳದ ತಿರುವನಂತಪುರ ಮೃಗಾಲಯದಿಂದ ತರಲಾಗಿದೆ. ಅಲ್ಲಿಗೆ ಕಾಳಿಂಗ ಸರ್ಪ ಹಾಗೂ ವಿಟೇಕರ್ಸ್‌ಗಳನ್ನು ಹಾವುಗಳನ್ನು ನೀಡಲಾಗಿದೆ ಎಂದು ಉದ್ಯಾನದ ನಿರ್ದೇಶಕ ಜಯಪ್ರಕಾಶ್‌ ಭಂಡಾರಿ ತಿಳಿಸಿದರು.

ರಿಯಾ ಹಕ್ಕಿಯು ದಕ್ಷಿಣ ಅಮೆರಿಕಾ, ಬ್ರೆಜಿಲ್, ಅರ್ಜಂಟೈನಾ ಮತ್ತಿತರ ದೇಶಗಳಲ್ಲಿ ಕಂಡುಬರುವ ಹಾರಾಡದ ಅತಿದೊಡ್ಡ ಪಕ್ಷಿಯಾಗಿದೆ. ಇದು ಉಷ್ಟ್ರಪಕ್ಷಿ ಜಾತಿಗೆ ಸೇರಿದ್ದು, ವೇಗವಾಗಿ ಓಡುವುದು ಇದರ ವಿಶೇಷತೆ. ಹುಳುಹುಪ್ಪಟೆ, ದವಸ–ಧಾನ್ಯ ಇತ್ಯಾದಿಗಳೇ ಇದರ ಆಹಾರ.

ಹೆಣ್ಣು ರಿಯಾ ಮೊಟ್ಟೆ ಇಟ್ಟರೆ, ಗಂಡು ರಿಯಾ ಕಾವು ಕೊಡುತ್ತದೆ. ಅಲ್ಲದೇ, ಗಂಡು ರಿಯಾ ನೋಡಿಕೊಳ್ಳುತ್ತದೆ. ಹೀಗಾಗಿ, ಮರಿಗಳ ಬಳಿ ಯಾರೇ ಬಂದರೂ ಗಂಡು ರಿಯಾ ದಾಳಿ ನಡೆಸುತ್ತದೆ.

ಉತ್ತರ ಭಾರತ ಹಾಗೂ ಹಿಮಾಲಯ ಸುತ್ತಲ ಪ್ರದೇಶದಲ್ಲಿ ಕಂಡುಬರುವ ಸ್ವಾಂಪ್ ಜಿಂಕೆಯನ್ನು ಬಾರಸಿಂಗ ಎಂದೂ ಕರೆಯುತ್ತಾರೆ. ಸುರುಳಿ ಸುತ್ತಿದ ಕೊಂಬಿನಲ್ಲಿ ತಲಾ ಆರು ಕವಲುಗಳಿದ್ದು, ಒಟ್ಟು 12 (ಹಿಂದಿಯಲ್ಲಿ ಬಾರಹ್) ಇರುವುದರಿಂದ ಬಾರಸಿಂಗ ಎನ್ನುತ್ತಾರೆ. ನೋಡಲು ಆಕರ್ಷಕ ಮೈಕಟ್ಟು, ಮೈ ಮೇಲೆ ನವಿರಾದ ಕೂದಲು, ನೋಟಗಳಿಂದ ಕಣ್ಮನ ಸೆಳೆಯುತ್ತವೆ.

ಉತ್ತರ ಭಾರತ ಹಾಗೂ ನೇಪಾಳದ ಕೆಲವು ಪ್ರದೇಶಗಳಲ್ಲಿ ಹೊರತು ಪಡಿಸಿದರೆ ಇದು ವಿರಳವಾಗಿದೆ. ಇದನ್ನು ಅಳಿವಿನಂಚಿನಲ್ಲಿರುವ ಪ್ರಭೇದವಾಗಿ ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT