ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಲಿಕುಳ ಜೈವಿಕ ಉದ್ಯಾನ: ಹಾವುಗಳು ಸುರಕ್ಷಿತ’

Last Updated 7 ಅಕ್ಟೋಬರ್ 2022, 15:52 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಪಿಲಿಕುಳ ಜೈವಿಕ ಉದ್ಯಾನದ ಹಾವಿನ ಗೂಡಿನಲ್ಲಿ ಇರುವೆಗಳು ಹಾವನ್ನು ಕಚ್ಚುತ್ತಿರುವ ವೀಡಿಯೊ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇರುವೆ ಕಚ್ಚಿದ್ದ ಹಾವಿನ ಆರೋಗ್ಯ ಸ್ಥಿರವಾಗಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.

‘ಹಾವಿಗೆ ಇರುವ ಕಚ್ಚಿದ ವಿಷಯ ತಿಳಿದ ಕೂಡಲೇ ಹಿರಿಯ ವೈಜ್ಞಾನಿಕ ಅಧಿಕಾರಿ, ಪಶುಪಾಲನಾ ವೈದ್ಯಾಧಿಕಾರಿ ಮತ್ತು ಬಯಾಲಾಜಿಸ್ಟ್‌ ಅವರನ್ನು ಒಳಗೊಂಡ ತಂಡವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಇರುವೆಗಳು ಕಚ್ಚಿದ ಹಾವಿನ ಆರೋಗ್ಯವು ಸ್ಥಿರವಾಗಿದೆ ಎಂದು ಪಶುಪಾಲನಾ ವೈದ್ಯಾಧಿಕಾರಿಯವರು ದೃಢೀಕರಿಸಿದ್ದಾರೆ’ ಎಂದು‌ ಅವರು ತಿಳಿಸಿದ್ದಾರೆ.

‘ಈ ಲೋಪಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಲುವಾಗಿ ಜೈವಿಕ ಉದ್ಯಾನವನದ ನಿರ್ದೇಶಕರು ಉರಗ ಪಾಲಕರಿಗೆ ನೋಟೀಸು ನೀಡಿ ವಿವರಣೆ ಪಡೆಯಲಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ‌ಲು ಜೈವಿಕ ಉದ್ಯಾನವನದ ನಿರ್ದೇಶಕರು, ಹಿರಿಯ ವೈಜ್ಞಾನಿಕ ಅಧಿಕಾರಿ ಮತ್ತು ಪಶುಪಾಲನಾ ವೈದ್ಯಾಧಿಕಾರಿಯವರ ವಿಶೇಷ ಸಭೆಯನ್ನು ನಡೆಸಿದ್ದೇನೆ. ಇರುವೆಗಳ ಬಾಧೆಗೊಳಗಾದ ಆ ಉರಗದ ಆರೋಗ್ಯವನ್ನು ಪ್ರತೀ 2 ಗಂಟೆಗಳಿಗೊಮ್ಮೆ ಪರಿಶೀಲನೆ ನಡೆಸಿ ವರದಿಯನ್ನು ನೀಡಲು ಸೂಚಿಸಿದ್ದೇನೆ’ ಎಂದೂ ಅವರು ತಿಳಿಸಿದ್ದಾರೆ.

‘ಉರಗ ವಿಭಾಗಕ್ಕೆ ಹೆಚ್ಚುವರಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ರಾತ್ರಿ ಹಗಲು ಕಣ್ಗಾವಲು ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು. ಉರಗಗಳ ಆವರಣದ ಒಳಗೆ ಪ್ರವಾಸಿಗರು ಯಾವುದೇ ತಿಂಡಿ ತಿನಸುಗಳನ್ನು ಒಯ್ಯದಂತೆ ಎಚ್ಚರ ವಹಿಸಲು ಭದ್ರತಾ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಉರಗ ವಿಭಾಗದ ಆವರಣದ ಹೊರಭಾಗದ ಸ್ವಚ್ಛತೆ ಕಾಪಾಡಲು ವ್ಯವಸ್ಥೆ ಮಾಡಲಾಗಿದೆ. ಇದರ ಮೇಲುಸ್ತುವಾರಿಯನ್ನು ಭದ್ರತಾ ಅಧಿಕಾರಿಯವರು ನೋಡಿಕೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ.

‘ಜೈವಿಕ ಉದ್ಯಾನದಲ್ಲಿ ತಿಂಡಿ ತಿನಿಸುಗಳ ಪೊಟ್ಟಣ, ಪ್ಲಾಸ್ಟಿಕ್ ಬಾಟಲಿ ಇನ್ನಿತರ ಸಾಮಾಗ್ರಿಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಪ್ರಾಣಿಗಳ ಆವರಣಗಳಿಗೆ ಹಾನಿ ಉಂಟು ಮಾಡಬಾರದು. ಸಂದರ್ಶಕರಿಗೆ ಈ ಬಗ್ಗೆ ಅರಿವು ಮೂಡಿಸಲು ಹೆಚ್ಚುವರಿ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ‘ ಎಂದೂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT