ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ತಪ್ಪಿದರೆ ಸಿಎಂ ಮುಖಕ್ಕೆ ಮಸಿ: ಪ್ರಮೋದ್ ಮುತಾಲಿಕ್‌ ಎಚ್ಚರಿಕೆ

ಪ್ರವೀಣ್‌ ನೆಟ್ಟಾರು ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಪ್ರಮೋದ್ ಮುತಾಲಿಕ್‌ ಎಚ್ಚರಿಕೆ
Last Updated 20 ಸೆಪ್ಟೆಂಬರ್ 2022, 4:41 IST
ಅಕ್ಷರ ಗಾತ್ರ

ಪುತ್ತೂರು/ಸುಳ್ಯ: ಹತ್ಯೆಗೊಳಗಾ‌ದ ಬಿಜೆಪಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಮನೆಗೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೋಮವಾರ ಭೇಟಿ ನೀಡಿದರು. ಪ್ರವೀಣ್ ಸಮಾಧಿಗೆ ನಮನ ಸಲ್ಲಿಸಿದ ಬಳಿಕ ಅವರ ತಂದೆ, ತಾಯಿ ಹಾಗೂ ಪತ್ನಿಗೆ ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುತಾಲಿಕ್, ‘ಪ್ರವೀಣ್‌ ಅವರ ಪತ್ನಿಗೆ ಉದ್ಯೋಗ ನೀಡುವ ಭರವಸೆಯನ್ನು ಸರ್ಕಾರ ಶೀಘ್ರ ಈಡೇರಿಸಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಯವರ ಮುಖಕ್ಕೆ ಮಸಿ ಬಳಿಯತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಪುತ್ತೂರಿನಲ್ಲಿ ಮಾತನಾಡಿದ ಅವರು, ‘ರಾಜಕೀಯ ಲಾಭಕ್ಕಾಗಿ ಬಿಜೆಪಿಯೇ ಪಿಎಫ್ಐ ಮತ್ತು ಎಸ್‌ಡಿಪಿಐಯನ್ನು ಬೆಳೆಸುತ್ತಿದೆ. ಮುಂದೊಂದು ದಿನ ಬಿಜೆಪಿಗೆ ಇದು ಕ್ಯಾನ್ಸರ್ ಆಗಿ ಪರಿಣಮಿಸಲಿದೆ. ಈ ಎರಡೂ ಸಂಘಟನೆಗಳನ್ನು ನಿಷೇಧಿಸ‌ದಿದ್ದರೆ ಮುಂದಿನ ತಿಂಗಳು ರಾಜ್ಯ ವ್ಯಾಪಿ ಆಂದೋಲನ ನಡೆಸುತ್ತೇವೆ’ ಎಂದರು.

‘ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಅಂಗೀಕರಿಸಿರುವುದು ಸ್ವಾಗತಾರ್ಹ. ದೇಶದಲ್ಲಿ ಸಾವಿರಾರು ಅನಧಿಕೃತ ಚರ್ಚ್‌ಗಳಿದ್ದು, ಅವುಗಳ ಮೂಲಕ ಬುಡಕಟ್ಟು ಜನಾಂಗ, ದಲಿತರ, ಹಿಂದುಳಿದ ವರ್ಗಗಳವರ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ. ಇಂತಹ ಚರ್ಚ್‌ಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಮತಾಂತರಗೊಂಡವರಿಗೆ ದೀಪಾವಳಿ, ಗಣೇಶನ ಪೂಜೆ ಮುಂತಾದ ಹಿಂದೂ ನಂಬಿಕೆಗಳನ್ನು ಪಾಲಿಸಲು ಅವಕಾಶ ಮಾಡಿಕೊಟ್ಟರೆ ಅಂತಹ ಮತಾಂತರಕ್ಕೆ ನಮ್ಮ ವಿರೋಧವಿಲ್ಲ’ ಎಂದರು.

ಮಂಗಳೂರಿನಲ್ಲಿ ಮಾತನಾಡಿದ ಅವರು, ‘ನಮಗೆ ಹಿಂದುತ್ವ ಮುಖ್ಯವೇ ವಿನಾ ಯಾವ ಪಕ್ಷವೂ ಅಲ್ಲ.ಹಿಂದುತ್ವ ರಕ್ಷಣೆಗಾಗಿ ಕೆಲಸ ಮಾಡಿದವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಕನಿಷ್ಠ 25 ಸೀಟುಗಳನ್ನು ನೀಡಿದರೆ, 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ. ಇಲ್ಲದಿದ್ದರೆ, ಪಕ್ಷದ ಪ್ರಮುಖ ನಾಯಕರ ವಿರುದ್ಧವೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರನ್ನು ಸೋಲಿಸುತ್ತೇವೆ’ ಎಂದರು.

ಪುತ್ತೂರು: ‘ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವವರೆಗೆ, ಅವರ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ನಾವು ವಿರಮಿಸುವುದಿಲ್ಲ. ಈ ಕೊಲೆ ವ್ಯರ್ಥ ಮಾಡಲು ಬಿಡುವುದಿಲ್ಲ’ ಎಂದುಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮೀನಿನ ವ್ಯಾಪಾರ ಹಾಗೂ ಅಡಕೆ ವ್ಯಾಪಾರದ ಲಾಭಿ ಕೆಲಸ ಮಾಡಿದೆ. ಮುಸ್ಲಿಂ ಸಮುದಾಯದವರೊಟ್ಟಿಗೆ ವ್ಯಾಪಾರ ಮುಕ್ತವಾದರೆ ಮಾತ್ರ ಹಿಂದೂ ಸಮಾ ಜಕ್ಕೆ ಒಳಿತು ಸಾಧ್ಯ‍’ ಎಂದು ಹೇಳಿದರು.

‘ಲವ್ ಜಿಹಾದ್‌ ಹೆಸರಲ್ಲಿ ಹಿಂದೂ ಯುವತಿಯರನ್ನು ಬಲೆಗೆ ಬೀಳಿಸುತ್ತಿರುವ ಮುಸ್ಲಿಂ ಯುವಕರನ್ನು ಅವರ ಸಮುದಾಯದವರು ಹಸ್ತುಬಸ್ತಿನಲ್ಲಿಡಬೇಕು. ಇಲ್ಲವಾದಲ್ಲಿ ತಿರುಗೇಟು ನೀಡುವುದು ಅನಿವಾರ್ಯವಾಗುತ್ತದೆ’ ಎಂದರು.

‘ಕೆಲವೊಂದು ತಪ್ಪುಗಳು ಬಿಜೆಪಿಯಿಂದ ಆಗುತ್ತಿದೆ. ಹಿಂದೂ ಸಂಘಟನೆಗಳ ಬೆವರು- ಪರಿಶ್ರಮದ ಫಲವಾಗಿ ಬಂದಿರುವ ಬಿಜೆಪಿ ಸರ್ಕಾರ ಮುಂದಿನ 6 ತಿಂಗಳೊಳಗೆ ಹಂತಹಂತವಾಗಿ ಸುಧಾರಿಸಿಕೊಳ್ಳಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಹಿಂದೂ ವಿರೋಧಿ ಮಾತ್ರವಲ್ಲದೆ ದೇಶ ವಿರೋಧಿಗಳಾಗಿವೆ. ದೇಶ ದ್ರೋಹಿಗಳನ್ನು ನಿರ್ಮಾಣ ಮಾಡುತ್ತಿರುವ ಕಾಂಗ್ರೆಸನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ’ ಎಂದರು.

ಹಿಂದುತ್ವದ ಸರ್ಕಾರವಿದ್ದರೂ ಜಿಲ್ಲಾ ಪ್ರವೇಶ ನಿಷೇಧ: ಹಿಂದುತ್ವದ ಪರವಾದ ಸರ್ಕಾರ ರಾಜ್ಯದಲ್ಲಿರುವಾಗಲೂ ನಾನು ನ್ಯಾಯಾಲಯ ಮೆಟ್ಟಿಲೇರುವ ಮೂಲಕ ಬೇರೆ ಜಿಲ್ಲೆಗಳಿಗೆ ಪ್ರವೇಶ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ‘ ಎಂದು ಮುತಾಲಿಕ್ ಬೇಸರ ತೋಡಿಕೊಂಡರು.

‘ನನ್ನನ್ನು ತಡೆಯುವ ಕೆಲಸವನ್ನು ಸರ್ಕಾರವೇ ಮಾಡುತ್ತಿದೆಯೋ ಅಥವಾ ಪೊಲೀಸ್ ಇಲಾಖೆ ಮಾಡುತ್ತಿದೆಯೋ ಗೊತ್ತಿಲ್ಲ. ಇದಕ್ಕೆ ಅವರೇ ಉತ್ತರಿಸಬೇಕು’ ಎಂದರು.

ಶ್ರೀರಾಮಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರು, ವಿಭಾಗಾಧ್ಯಕ್ಷ ಮೋಹನ್ ಭಟ್, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಜಯರಾಮ್ ಅಂಬೆಕಲ್ಲು, ಧನ್ಯಕುಮಾರ್ ಬೆಳಂದೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT