ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಹಗರಣ | ಸಿಬಿಐ ತನಿಖೆಯೇ ಸೂಕ್ತ: ಪ್ರತಾಪ್ ಸಿಂಹ ನಾಯಕ್

Published 11 ಜುಲೈ 2024, 12:26 IST
Last Updated 11 ಜುಲೈ 2024, 12:26 IST
ಅಕ್ಷರ ಗಾತ್ರ

ಮಂಗಳೂರು: ಮೈಸೂರಿನ ಮುಡಾ ಹಗರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರವಾಗಿ ಶಾಮೀಲಾಗಿರುವುದು ಬಹಿರಂಗ ಆಗಲಿದೆ ಎಂದು ಅಭಿಪ್ರಾಯಪಟ್ಟ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಈ ಹಗರಣದಲ್ಲಿ  ಸಿಬಿಐ ತನಿಖೆಯೇ ಸೂಕ್ತ ಎಂದು ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಿಯಮದ ಪ್ರಕಾರ ಮುಖ್ಯಮಂತ್ರಿ ಪತ್ನಿ ಪಾರ್ವತಿ ಅವರಿಗೆ ಎರಡು ವಿವೇಶನ ಮಾತ್ರ ಪಡೆದುಕೊಳ್ಳಲು ಅರ್ಹತೆ ಇತ್ತು. ಹೀಗಿರುವಾಗ 14 ನಿವೇಶನ ಕೊಟ್ಟಿದ್ದಾದರೂ ಹೇಗೆ ಎಂದು ಪ್ರಶ್ನಿಸಿದರು.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ನೇರವಾಗಿ ಭಾಗಿಯಾಗಿದ್ದಾರೆ. ಅವರದೇ ಜಿಲ್ಲೆಯಲ್ಲಿ ಬಡವರು, ದಲಿತರು ಹಾಗೂ ವಿಶೇಷ ಸೇವೆ ಸಲ್ಲಿಸಿದವರಿಗೆ ಕೊಡಬೇಕಾದ ನಿವೇಶನಗಳನ್ನು ಅಕ್ರಮವಾಗಿ ಹಂಚಲಾಗಿದೆ. ಸಮಾಜವಾದಿ ಎಂದು ಹೇಳಿಕೊಳ್ಳುವ, ಭ್ರಷ್ಟಾಚಾರದ ಬಗ್ಗೆ ಬಹಳ ಮಾತನಾಡುತ್ತಿದ್ದ ಸಿದ್ದರಾಮಯ್ಯ ಈಗ ತಾವೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ‌ ಎಂದು ಅವರು ದೂರಿದರು.

ಮುಡಾ ಹಗರಣವನ್ನು ಮುಚ್ಚಿಹಾಕಲು ಸರ್ಕಾರದ ಮಟ್ಟದಲ್ಲಿ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಇದರ ಭಾಗವಾಗಿಯೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಮುಡಾದಲ್ಲಿ ಸಾವಿರಾರು ನಿವೇಶನಗಳನ್ನು ಅಕ್ರಮವಾಗಿ ಕೊಟ್ಟಿರುವ ಆರೋಪ ಕೇಳಿಬರುತ್ತಿದೆ. ಹಗರಣದ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ರಾಜಿನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದರು.

‘ಕಾಂಗ್ರೆಸ್‌ಗೆ ಸರ್ಕಾರ ನಡೆಸುವುದು ಮತ್ತು ಅಧಿಕಾರದಲ್ಲಿರುವುದು ಎಂದರೆ ದಂದೆ ಎಂಬಂತಾಗಿದೆ. ಈಚೆಗೆ ಒಂದರ ಮೇಲೊಂದು ಪ್ರಕರಣ ಬೆಳಕಿಗೆ ಬರುತ್ತಿದೆ. ಭ್ರಷ್ಟ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಎಟಿಎಂ ಸರ್ಕಾರ’ ನಡೆಸಲಿದೆ ಎಂದು ಚುನಾವಣೆಯ ಸಂದರ್ಭದಲ್ಲೇ ಬಿಜೆಪಿ ಹೇಳಿತ್ತು. ಆ ಮಾತು ಈಗ ನಿಜವಾಗಿದೆ. ವಾಲ್ಮೀಕಿ ನಿಗಮದಲ್ಲಿ ಆಗಿರುವ ಭ್ರಷ್ಟಾಚಾರದಲ್ಲಿ ಒತ್ತಡಕ್ಕೆ ಒಳಗಾದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ನಂತರ ಪ್ರಕರಣ ಹೊರಜಗತ್ತಿಗೆ ತಿಳಿದಿದೆ. ಈ ಹಗರಣದಲ್ಲಿ ಸಂಗ್ರಹಿಸಿದ ಹಣ ಚುನಾವಣೆ ವೆಚ್ಚಕ್ಕಾಗಿ ಹೊರಾಜ್ಯಗಳಿಗೆ ಹೋಗಿದೆ. ಆರ್ಥಿಕ ಇಲಾಖೆ ಮುಖ್ಯಮಂತ್ರಿ ಬಳಿಯಲ್ಲೇ ಇದ್ದು ಅವರ ಗಮನಕ್ಕೆ ಬಾರದೆ ಹಣ ಹೋಗಲು ಹೇಗೆ ಸಾಧ್ಯ’ ಎಂದು ಪ್ರತಾಪಸಿಂಹ ನಾಯಕ್ ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಪೂರ್ಣಿಮಾ, ಉಪಾಧ್ಯಕ್ಷೆ ಪೂಜಾ ಪೈ, ಖಜಾಂಚಿ ಸಂಜಯ ಪ್ರಭು, ಮಾಧ್ಯಮ ಸಂಚಾಲಕ ವಸಂತ ಜೆ ಪೂಜಾರಿ ಮತ್ತು ಮುಖಂಡ ರಮೇಶ್ ಕಂಡೆಟ್ಟು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT