ಮಂಗಳೂರು: ‘ಲೈಂಗಿಕ ಕಿರುಕುಳ ಹಾಗೂ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆಸಿರುವ ಚರ್ಚ್ ಆಫ್ ಸೌತ್ ಇಂಡಿಯಾದ (ಸಿಎಸ್‌ಐ) ಕರ್ನಾಟಕ ದಕ್ಷಿಣ ಸಭಾಪ್ರಾಂತ ಮಂಗಳೂರಿನ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿ, ಸಂತ್ರಸ್ತರು, ನಗರದ ಸಿಎಸ್‌ಐ ಬಿಷಪ್ ಹೌಸ್ ಎದುರು ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಮೈಸೂರಿನ ‘ಒಡನಾಡಿ’ ಸಂಸ್ಥೆ, ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಸಂತ್ರಸ್ತರು ಧರಣಿ ಕುಳಿತಿದ್ದು, ನ್ಯಾಯ ಸಿಗುವವರೆಗೂ ಹೋರಾಡುವುದಾಗಿ ತಿಳಿಸಿದ್ದಾರೆ.
‘ಸಂಸ್ಥೆಯಲ್ಲಿ 10 ವರ್ಷಗಳಿಂದ ಕಾಯಂ ಉದ್ಯೋಗಿಯಾಗಿದ್ದ ನನಗೆ ಮಾನಸಿಕ, ಲೈಂಗಿಕ ಕಿರುಕುಳ ನೀಡಿದ್ದಾರೆ. ಇದರ ವಿರುದ್ಧ ಸಾಕಷ್ಟು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ನಂತರ ಮೈಸೂರಿನ ‘ಒಡನಾಡಿ’ ಸಂಸ್ಥೆ ನೆರವು ಪಡೆದು, ಮಂಗಳೂರು ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ಆರೋಪಿಗಳ ಮೇಲೆ ಇನ್ನೂ ಕ್ರಮವಾಗಿಲ್ಲ. ದೂರು ನೀಡಿದ ಕಾರಣಕ್ಕೆ ಒಂದು ವಾರದ ಹಿಂದೆ ನನ್ನನ್ನು ಕೆಲಸದಿಂದ ಅಮಾನತುಗೊಳಿಸಿದ್ದಾರೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವವರೆಗೆ ಹೋರಾಟ ಮಾಡುತ್ತೇನೆ’ ಎಂದು ಬಿಷಪ್ ಅವರ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತ್ರಸ್ತ ಮಹಿಳೆ ಹೇಳಿದರು.
‘ಸಿಐಎಸ್-ಕೆಎಸ್‍ಡಿ ಧರ್ಮ ಪ್ರಾಂತ್ಯವು 25 ವರ್ಷ ದುಡಿಸಿಕೊಂಡು ಏಕಾಏಕಿ ನನ್ನನ್ನು ಹಾಗೂ ನನ್ನ ಪತ್ನಿಯನ್ನು ಉದ್ಯೋಗದಿಂದ ಕಿತ್ತು ಹಾಕಿದೆ. ಮನೆ ಖಾಲಿ ಮಾಡುವಂತೆ ಸೂಚಿಸಿದೆ. ಮನೆ ಎದುರು ತಡೆಗೋಡೆ ನಿರ್ಮಿಸಿ ನಮಗೆ ಬಹಿಷ್ಕಾರ ಹಾಕಿದ್ದಾರೆ. ಉದ್ಯೋಗ ಇಲ್ಲದೆ ಜೀವನ ನಡೆಸುವುದೂ ಕಷ್ಟವಾಗಿದೆ. ಮಗಳ ಕಾಲೇಜು ಶುಲ್ಕ ಪಾವತಿಸಲೂ ತೊಂದರೆಯಾಗಿದೆ’ ಎಂದು ಹಾಸನ ಸಿಎಸ್‍ಐ ಆಸ್ಪತ್ರೆಯಲ್ಲಿ ಉದ್ಯೋಗ ಕಳೆದುಕೊಂಡ ಸಂತ್ರಸ್ತ ಚಂದ್ರಬಾಬು ಆರೋಪಿಸಿದರು.
ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮಾತನಾಡಿ, ‘ಆರೋಪಕ್ಕೆ ಒಳಗಾದವರೇ, ಸಮಿತಿ ರಚಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದರೆ, ಆರೋಪಿಗಳು ನ್ಯಾಯಾಲಯದಿಂದ ತಡೆ ತಂದಿದ್ದಾರೆ. ಪೊಲೀಸರು ಪ್ರಕರಣದ ಕೂಲಂಕಷ ತನಿಖೆ ನಡೆಸಬೇಕು. ನ್ಯಾಯ ಸಿಗದಿದ್ದರೆ, ನ್ಯಾಯಾಲಯದ ಮೊರೆ ಹೋಗಲಾಗುವುದು’ ಎಂದರು.
ಒಡನಾಡಿ ಸಂಸ್ಥೆಯ ಪರಶುರಾಮ ಮಾತನಾಡಿ, ‘ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಪ್ರಶ್ನಿಸಿದರೆ ವಿಚಾರಣೆ ಪ್ರಗತಿಯಲ್ಲಿದೆ ಎನ್ನುತ್ತಾರೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದವರು ಅದೇ ಹುದ್ದೆಯಲ್ಲಿ ಮುಂದುವರಿದಿರುವುದು ನಾಚಿಕೆಗೇಡು. ಸಮುದಾಯದ ಜನರು ಇದನ್ನು ಪ್ರಶ್ನಿಸಲಿ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.