ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | 1.43 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ಗುರಿ: ಡಿಎಚ್‌ಒ

ಮಾ.3ರಂದು ಪಲ್ಸ್ ಪೋಲಿಯೊ ಕಾರ್ಯಕ್ರಮ
Published 29 ಫೆಬ್ರುವರಿ 2024, 14:38 IST
Last Updated 29 ಫೆಬ್ರುವರಿ 2024, 14:38 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಮಾರ್ಚ್‌ 3ರಂದು ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ನಡೆಯುವ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ 0–5 ವರ್ಷದೊಳಗಿನ 1.43 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್‌.ಆರ್. ತಿಮ್ಮಯ್ಯ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘921 ಬೂತ್‌ಗಳು, 3,840 ಲಸಿಕೆ ನೀಡುವವರು, 193 ಮೇಲ್ವಿಚಾರಕರು, 1,344 ಆಶಾ ಕಾರ್ಯಕರ್ತೆಯರು ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಮಂಗಳೂರು ಗ್ರಾಮಾಂತರ ಮತ್ತು ಪಾಲಿಕೆಯ ವ್ಯಾಪ್ತಿಯಲ್ಲಿ ನಾಲ್ಕು ಮೊಬೈಲ್ ತಂಡಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣದಂತಹ 37 ಜಾಗಗಳಲ್ಲಿ ಟ್ರಾನ್ಸಿಟ್ ತಂಡ ಕಾರ್ಯನಿರ್ವಹಿಸಲಿವೆ. 2011ರ ನಂತರ ದೇಶದಲ್ಲಿ ಹೊಸ ಪೋಲಿಯೊ ಪ್ರಕರಣ ಕಂಡುಬಂದಿಲ್ಲ. ಆದರೆ, ನೆರೆಯ ರಾಷ್ಟ್ರಗಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿರುವ ಕಾರಣ ಮುಂಜಾಗ್ರತೆ ವಹಿಸಲಾಗಿದೆ’ ಎಂದರು.

ಮಂಗನ ಕಾಯಿಲೆ:

ನೆರೆಯ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಪ್ರಕರಣಗಳು ದಾಖಲಾಗಿರುವ ಕಾರಣ ಜಿಲ್ಲೆಯಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಶಂಕಿತ ಪ್ರಕರಣ ಕಂಡುಬಂದಲ್ಲಿ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುವುದು. ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಈ ಭೀತಿ ಇರುತ್ತದೆ. ಜಿಲ್ಲೆಯಲ್ಲಿ ಒಂದು ಮಂಗ ಸತ್ತಿರುವ ಪ್ರಕರಣ ಇದ್ದು, ಅದು ವಿಷಪ್ರಾಶನದಿಂದ ಸತ್ತಿರುವ ವರದಿ ಬಂದಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೊಸ ಕಾರ್ಡ್‌ ನೋಂದಣಿಯ ಗುರಿ 17 ಲಕ್ಷ ಇದ್ದು, ಸದ್ಯ 5 ಲಕ್ಷ ಕಾರ್ಡ್‌ಗಳ ನೋಂದಣಿಯಾಗಿದೆ. ಮೊಬೈಲ್‌ ಫೋನ್ ಮೂಲಕ ಕೂಡ ನೋಂದಣಿ ಮಾಡಿಕೊಳ್ಳಬಹುದು. ವಸತಿ ನಿಲಯಗಳಲ್ಲೂ ನೋಂದಣಿ ಮಾಡಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆಪ್ಪಟೆ ಬಾವು:

ಜಿಲ್ಲೆಯಲ್ಲಿ ಮಕ್ಕಳು ಸೇರಿದಂತೆ ಹಿರಿಯರಲ್ಲಿ ಕೆಪ್ಪಟೆ ಬಾವು ರೋಗ ಕಾಣಿಸಿಕೊಳ್ಳುತ್ತಿದ್ದು, ಇಂತಹ ಪ್ರಕರಣ ಕಂಡುಬಂದಲ್ಲಿ ಇಲಾಖೆಯ ಗಮನಕ್ಕೆ ತರುವಂತೆ ಎಲ್ಲ ಆಸ್ಪತ್ರೆ, ಆರೋಗ್ಯ ಕೇಂದ್ರಗಳಿಗೆ ಸುತ್ತೋಲೆ ಕಳುಹಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ರೋಗ ಕಂಡುಬಂದಲ್ಲಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಬೇಕು. ಶಾಲಾ ಮಟ್ಟದಲ್ಲಿ ಜಾಗೃತಿ ಮೂಡಿಸುವ ಜತೆಗೆ, ಮಕ್ಕಳಲ್ಲಿ ಈ ರೋಗ ಕಂಡುಬಂದಲ್ಲಿ, ಗುಣಮುಖರಾಗುವ ತನಕ ಶಾಲೆಗೆ ಬರದಂತೆ ತಿಳಿಸಬೇಕು ಎಂದು ಡಾ. ತಿಮ್ಮಯ್ಯ ಹೇಳಿದರು.

ಆರ್‌ಸಿಎಚ್ ಡಾ. ರಾಜೇಶ್, ಡಾ. ನವೀನ್‌ಚಂದ್ರ ಕುಲಾಲ್, ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೆಪಾಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT