ಭಾನುವಾರ, ಆಗಸ್ಟ್ 1, 2021
21 °C
ಕೇರಳದಲ್ಲಿ ಝಿಕಾ ವೈರಸ್‌ ಸೋಂಕಿತರ ಹೆಚ್ಚಳ

ಪುತ್ತೂರು: ಕೇರಳ- ಕರ್ನಾಟಕ ಗಡಿ ಪ್ರದೇಶದಲ್ಲಿ ಕಟ್ಟುನಿಟ್ಟಿನ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುತ್ತೂರು: ಕೇರಳದಲ್ಲಿ ಝಿಕಾ ವೈರಸ್‌ ಸೋಂಕಿತರ ಹೆಚ್ಚಳಗೊಂಡಿರುವ ಕಾರಣ ಕೇರಳ- ಕರ್ನಾಟಕ ಗಡಿ ಪ್ರದೇಶವಾದ ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲ ಮತ್ತು ಪಡುವನ್ನೂರು ಗ್ರಾಮದ ಸುಳ್ಯಪದವಿನಲ್ಲಿ ಪೊಲೀಸರು ಮತ್ತು ಆರೋಗ್ಯ ಇಲಾಖೆಯ ವತಿಯಿಂದ ಕಟ್ಟುನಿಟ್ಟಿನ ತಪಾಸಣಾ ಕಾರ್ಯ ನಡೆಯುತ್ತಿದೆ.

ಈ ಎರಡು ತಪಾಸಣಾ ಕೇಂದ್ರಗಳಲ್ಲಿ ದಿನದ 24 ಗಂಟೆಯೂ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಕೇರಳ ಕಡೆಯಿಂದ ಬರುವವರು ಕೋವಿಡ್ ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದರೆ, ಇಲ್ಲವೇ ಕೋವಿಡ್‌ ನೆಗೆಟಿವ್‌ ಪ್ರಮಾಣ ಪತ್ರ ಹೊಂದಿದ್ದರೆ ಮಾತ್ರ ಗಡಿ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ಇಲ್ಲದಿದ್ದಲ್ಲಿ ಸ್ಥಳದಲ್ಲೇ ಆ್ಯಂಟಿಜನ್‌ ಪರೀಕ್ಷೆ ನಡೆಸಿ, ನೆಗೆಟಿವ್ ವರದಿ ಬಂದವರಿಗೆ ಮಾತ್ರ ಕರ್ನಾಟಕಕ್ಕೆ ಬರಲು ಅವಕಾಶ ನೀಡಲಾಗುತ್ತಿದೆ. ಪಾಸಿಟಿವ್ ವರದಿ ಬಂದವರನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ.

ಈಶ್ವರಮಂಗಲ ಹೊರಠಾಣೆಯ ಪೊಲೀಸ್ ಸಿಬ್ಬಂದಿ ವಾಹನ ತಪಾಸಣಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಚಾರ ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ.ಶರಣ್ ಆಳ್ವ ಮತ್ತು ಸಿಬ್ಬಂದಿ ಹಾಗೂ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸ್ಥಳದಲ್ಲಿ ಆ್ಯಂಟಿಜನ್ ಮತ್ತು ಗಂಟಲ ದ್ರವ ಸಂಗ್ರಹ ನಡೆಸುವ ಕಾರ್ಯ ಮಾಡುತ್ತಿದ್ದಾರೆ.

‘ಕೇರಳದಿಂದ ಗಡಿ ದಾಟಿ ಕರ್ನಾಟಕಕ್ಕೆ ಬರುವವವರ ಮತ್ತು ಕರ್ನಾಟಕದಿಂದ ಕೇರಳಕ್ಕೆ ಹೋಗಿ ಹಿಂತಿರುಗುವವರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಎರಡು ಡೋಸ್ ಲಸಿಕೆ ಹಾಕಿಸಿಕೊಂಡ ಇಲ್ಲವೆ ಕೋವಿಡ್ ಪರೀಕ್ಷೆಯ ನೆಗೆಟಿವ್‌ ಪ್ರಯಾಣಪತ್ರ ತೋರಿಸಿದಲ್ಲಿ ತಪಾಸಣಾ ಕೇಂದ್ರದಲ್ಲಿ ಯಾವುದೇ ಸಮಸ್ಯೆಯಿಲ್ಲ. ಬಿಗಿ ವಾಹನ ತಪಾಸಣೆ ನಡೆಸಲಾಗುತ್ತಿದ್ದರೂ ಸ್ಥಳೀಯ ರಿಗೆ ಯಾವುದೇ ನಿರ್ಬಂಧ ಮಾಡಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು