ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು ನಗರಸಭೆ | ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ

Published 11 ಮೇ 2024, 13:38 IST
Last Updated 11 ಮೇ 2024, 13:38 IST
ಅಕ್ಷರ ಗಾತ್ರ

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕೊಳವೆ ಬಾವಿ ನಿರ್ವಹಣೆಗೆ ಈ ಹಿಂದೆ ನೇಮಿಸಿದ್ದ 31 ಪಂಪ್ ಆಪರೇಟರ್‌ಗಳನ್ನು ಮರು ನಿಯೋಜನೆಗೊಳಿಸಿ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ನಗರಸಭೆ ಹಾಗೂ ಜಲಸಿರಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ನಗರ ಕಾಂಗ್ರೆಸ್ ಅಧ್ಯಕ್ಷ, ನಗರಸಭೆಯ ವಿರೋಧ ಪಕ್ಷದ ಮಾಜಿ ನಾಯಕ ಎಚ್.ಮಹಮ್ಮದ್ ಅಲಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆಗಾಗಿ 274 ಕೊಳವೆ ಬಾವಿ ನಿರ್ಮಿಸಲಾಗಿತ್ತು. ಈ ಕೊಳವೆ ಬಾವಿಗಳ ನಿರ್ವಹಣೆಗಾಗಿ 31 ಮಂದಿ ಪಂಪ್ ಆಪರೇಟರ್‌ಗಳನ್ನು ನೇಮಿಸಲಾಗಿತ್ತು. ಇದೀಗ ಕೊಳವೆ ಬಾವಿಗಳ ನಿರ್ವಹಣೆಯನ್ನು ನಗರಸಭೆ ಜಲಸಿರಿ ಸುಪರ್ದಿಗೆ ನೀಡಿದ್ದು, ಬಹುತೇಕ ಪಂಪ್ ಆಪರೇಟರ್ಗಳನ್ನು ಕೈಬಿಡಲಾಗಿದೆ. ಇದರಿಂದಾಗಿ ನಗರಸಭೆಯಲ್ಲಿ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಅವರು ಹೇಳಿದರು.

ಜಲಸಿರಿ ಯೋಜನೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ನೀರಿನ ಸಮಸ್ಯೆಯ ಸಾಧಕ-ಬಾಧಕಗಳನ್ನು ಪರಿಶೀಲಿಸದೆ ನಗರಸಭೆ ನೀರು ಸರಬರಾಜು ನಿರ್ವಹಣೆಯನ್ನು ಸುಯೇಜು ಕಂಪನಿ (ಜಲಸಿರಿ)ಯವರಿಗೆ ಪ್ರಾಯೋಗಿಕವಾಗಿ ನೀಡಿದೆ. ಜಲಸಿರಿಯವರು 170 ಕೊಳವೆ ಬಾವಿಗಳ ನೀರು ಒದಗಿಸುವ ನಿರ್ವಹಣೆ ಮಾಡುತ್ತಿದ್ದ 31 ಆಪರೇಟರ್‌ಗಳನ್ನು ಕೈಬಿಟ್ಟು ನಾಲ್ಕೈದು ಪಂಪ್ ಆಪರೇಟರ್‌ಗಳನ್ನು ಬಳಸಿಕೊಂಡು ನೀರು ಸರಬರಾಜು ಮಾಡುತ್ತಿದ್ದಾರೆ. ಇದರಿಂದಾಗಿ ನಗರಸಭೆಯ ಯಾವುದೇ ವಲಯಗಳಿಗೆ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ ಎಂದರು.

ಜಲಸಿರಿಯ ಹೊಸ ಯೋಜನೆಯಿಂದಲೂ ನೀರು ವಿತರಣೆ ಆಗುತ್ತಿಲ್ಲ. ಜನರಿಗೆ ಕೊಳವೆ ಬಾವಿಯಿಂದಲೂ ಜಲಸಿರಿ ಯೋಜನೆಯಿಂದಲೂ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಈ ಹಿಂದಿನ ಶಾಸಕರು ಮತ್ತು ನಗರಸಭೆಯ ಆಡಳಿತದಿಂದ ಆಗಿರುವ ಸಮಸ್ಯೆ ಇದಕ್ಕೆ ಕಾರಣವಾಗಿದೆ. ನೀರಿನ ಸಮಸ್ಯೆಗೆ ಕಾರಣವಾದ ಸಂಬಂಧಪಟ್ಟ ಆಧಿಕಾರಿಗಳು, ಡಿಪಿಆರ್ ಮಾಡಿದವರು ಮತ್ತು ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.

ಜಲಸಿರಿ ಯೋಜನೆಯಿಂದ ಮನೆ ಮನೆಗೆ 24X7 ಕುಡಿಯಲು ನೀರು ಸರಬರಾಜು ಮಾಡುತ್ತೇವೆ ಎಂದು ಜಲಸಿರಿಯ ಅಧಿಕಾರಿಗಳು ಹೇಳಿದ್ದರು. ಇದೀಗ ದಿನಕ್ಕೆ ಒಂದು ಗಂಟೆ ನೀರು ಕೊಡಿ ಎಂದು ಜನ ಅಲವತ್ತುಕೊಳ್ಳುತ್ತಿದ್ದಾರೆ. ಜಲಸಿರಿ ಯೋಜನೆ ಸಂಪೂರ್ಣಗೊಂಡಿದೆ ಎಂದು ಹೇಳಿರುವ ಅಧಿಕಾರಿಗಳು, ಇದೀಗ ಇನ್ನೂ 46 ಕಿ.ಮೀ. ಉದ್ದಕ್ಕೆ ಪೈಪ್ ಲೈನ್ ಅಳವಡಿಸಬೇಕಾಗಿದೆ. ಇದಕ್ಕೆ ಅನುದಾನ ಒದಗಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಮಾಹಿತಿಯಂತೆ ಜಲಸಿರಿ ಯೋಜನೆಯ 10 ವಲಯಗಳಲ್ಲಿ ಆಗುವ ವ್ಯವಸ್ಥೆ ಕೇವಲ ಮೂರು ವಲಯಗಳಲ್ಲಿ ಮಾತ್ರ ನೀರು ಸರಬರಾಜು ಆಗುತ್ತಿದ್ದು, ಉಳಿದ ಏಳು ವಲಯಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಹಿಂದೆ ಎಡಿಬಿ ಯೋಜನೆಯಲ್ಲಿ ಅನುಷ್ಠಾನಗೊಂಡ ಕುಡಿಯುವ ನೀರು ಯೋಜನೆ ವಿಫಲವಾಗಿದ್ದು, ಈಗಿನ ಜಲಸಿರಿ ಯೋಜನೆಯೂ ವಿಫಲವಾದಂತಾಗಿದೆ ಎಂದರು.

‘₹ 113 ಕೋಟಿ ವೆಚ್ಚದ ಜಲಸಿರಿ ಯೋಜನೆ ವಿಫಲಗೊಂಡರೆ ಅದರ ಸಂಪೂರ್ಣ ಜವಾಬ್ದಾರಿ ಬಿಜೆಪಿಯದ್ದಾಗಿದೆ ಎಂದು ಆರೋಪಿಸಿದ ಅವರು, ತಕ್ಷಣ ನೀರಿನ ಅಂಶ ಕಡಿಮೆ ಇರುವಲ್ಲಿ ಹೊಸದಾಗಿ ಕೊಳವೆಬಾವಿ ತೆರೆದು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಜಲಸಿರಿ ಹಾಗೂ ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯ ರಿಯಾಝ್ ಪರ್ಲಡ್ಕ, ಮಾಜಿ ಸದಸ್ಯ ಮುಕೇಶ್ ಕೆಮ್ಮಿಂಜೆ, ನಗರ ಕಾಂಗ್ರೆಸ್ ಮುಖಂಡ ವಿಕ್ಟರ್ ಪಾಯಸ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT