ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನಂಗಡಿಯಲ್ಲಿ ತೋಡು ಮಾಯ, ಕೃತಕ ನೆರೆ

Published 14 ಮೇ 2024, 5:53 IST
Last Updated 14 ಮೇ 2024, 5:53 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಭಾನುವಾರ ಸುರಿದ ಮಳೆ ನೀರು ಸರಾಗವಾಗಿ ಹರಿಯದೆ ನಟ್ಟಿಬೈಲ್ ಪ್ರದೇಶದಲ್ಲಿ ನಿಂತು ಹಲವರ ಕೃಷಿ ಭೂಮಿ ಮುಳುಗಡೆಯಾಗಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯಲ್ಲಿ ಆಗಿರುವ ಲೋಪ ಹಾಗೂ ಹೆದ್ದಾರಿ ಬದಿಯ ದೊಡ್ಡ ತೋಡನ್ನು ಮುಚ್ಚಿರುವುದೇ ಇದಕ್ಕೆ ಕಾರಣ ಎಂಬ ಆರೋಪ ವ್ಯಕ್ತವಾಗಿದೆ.

ಕುಮಾರಧಾರಾ ನದಿ ಸೇರಬೇಕಾದ ಮಳೆ ನೀರು ಹರಿದು ಹೋಗಲಾರದೆ, ಕೃತಕ ನೆರೆ ಆವರಿಸಿದೆ. ಪ್ರಥಮ ಮಳೆಗೆ ಈ ಸ್ಥಿತಿಯಾದರೆ ಮುಂಗಾರು ಸಮಯದಲ್ಲಿ ನಟ್ಟಿಬೈಲ್ ಪರಿಸರ ಮುಳುಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ದೊಡ್ಡ ತೋಡು ಇತ್ತು. ನಟ್ಟಿಬೈಲ್, ರಾಮನಗರ, ಕುರ್ಪೇಕು ಪ್ರದೇಶದ ಮಳೆ ನೀರು ಈ ತೋಡಿನ ಮೂಲಕ ಕುಮಾರಧಾರಾ ನದಿ ಸೇರುತ್ತಿತ್ತು. ಹೆದ್ದಾರಿಯ ಇನ್ನೊಂದು ಭಾಗದಲ್ಲಿರುವ ಉಪ್ಪಿನಂಗಡಿ ಪೇಟೆ, ಗಾಂಧಿಪಾರ್ಕ್‌, ಸೂರಪ್ಪ ಕಾಂಪೌಂಡ್ ಪರಿಸರದ ನೀರು ಈ ಭಾಗದಲ್ಲಿ ಹರಿಯುತ್ತಿದ್ದ ತೋಡಿನ ಮೂಲಕ ಉಪ್ಪಿನಂಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿಯಿಂದ ರಾಷ್ಟ್ರೀಯ ಹೆದ್ದಾರಿಯ ಅಡಿಯಲ್ಲಿರುವ ಮೋರಿಗೆ ಕವಲೊಡೆದು ನದಿ ಸೇರುತ್ತಿತ್ತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿ ವೇಳೆ ಈ ಎರಡೂ ತೋಡುಗಳನ್ನು ಮಣ್ಣು ಹಾಕಿ ಮುಚ್ಚಲಾಗಿದೆ. ಬದಲಾಗಿ ಹೆದ್ದಾರಿ ಬದಿಯಲ್ಲಿ ಮೋರಿ ನಿರ್ಮಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಹೋಗುವ ಇಲ್ಲಿ ತೀರಾ ಸಣ್ಣದಾದ ಮೋರಿ ನಿರ್ಮಿಸಲಾಗಿದೆ.  ಅವೈಜ್ಞಾನಿಕ ರೀತಿಯ ಈ ಕಾಮಗಾರಿ ಎಲ್ಲಿಯೂ ಪೂರ್ಣಗೊಳ್ಳದೆ ಇರುವುದರಿಂದಾಗಿ ಮಳೆ ನೀರು ಸರಾಗವಾಗಿ ಹರಿದು ನದಿ ಸೇರಲಾಗದೆ ನಟ್ಟಿಬೈಲ್ ಪ್ರದೇಶದ ತೋಟದಲ್ಲಿ ನಿಂತು ನೆರೆಗೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿರು.

ನಟ್ಟಿಬೈಲ್ ಪರಿಸರದಲ್ಲಿ ಹೆದ್ದಾರಿಯವರು ಮಣ್ಣು ಹಾಕಿದ ಬಳಿಕ ಅಲ್ಲಿ ತಡೆಗೋಡೆ ನಿರ್ಮಿಸಿದ್ದರು. ತಡೆಗೋಡೆ ಬದಿಯಲ್ಲೇ ತೋಡಿನ ಪಥವೂ ಸಾಗಿತು. ಇದಕ್ಕೆ ತಾಗಿಕೊಂಡೇ ಕೃಷಿ ಭೂಮಿ ಇದೆ. ಮೂರು ವರ್ಷಗಳಿಂದ ಮಳೆಗಾಲದಲ್ಲಿ ನಟ್ಟಿಬೈಲ್‌ನ ಕೃಷಿ ಭೂಮಿ ಮುಳುಗಿರುತ್ತದೆ. ಕಳೆದ ಬಾರಿಯೂ ಇಲ್ಲಿ ಕೃಷಿ ಭೂಮಿ ಮುಳುಗಿದ್ದರೂ, ಬಳಿಕ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರು ಶಾಸಕರ ಒತ್ತಡಕ್ಕೆ ಮಣಿದು ಜೆಸಿಬಿ ಮೂಲಕ ತೋಡಿನ ಮಣ್ಣನ್ನು ತೆರವುಗೊಳಿಸಿ ನೀರು ಹರಿದು ಹೋಗುವಂತೆ ಮಾಡಿದ್ದರು.

ಕಳೆದ ಮಳೆಗಾಲದಲ್ಲಿ ಕೆಲ ಮೀಟರ್‌ನಷ್ಟು ತಡೆಗೋಡೆಯೂ ತೋಡಿನ ಬದಿಗೆ ವಾಲಿ ನಿಂತಿತ್ತು. ಈ ತೋಡು ಈಗ ಮತ್ತೆ ಕಟ್ಟಿಕೊಂಡಿದ್ದು, ಭಾನುವಾರದ ಮಳೆಗೆ ತೋಡಿನಲ್ಲಿ ನೀರು ಹರಿಯಲು ಸಾಧ್ಯವಾಗದೇ ಕೃಷಿ ಪ್ರದೇಶಕ್ಕೆ ನೀರು ನುಗ್ಗಿದೆ. ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿಯವರು ಹೆದ್ದಾರಿ ಯಲ್ಲಿ ನಿರ್ಮಿಸುತ್ತಿರುವ ಒಳಚರಂಡಿಯ ಕಾಮಗಾರಿ ಅಪೂರ್ಣವಾ ಗಿರುವುದರಿಂದ ಅದರಲ್ಲಿ ಬಂದ ನೀರು, ಹೆದ್ದಾರಿ ವಿಸ್ತರಣೆಗಾಗಿ ಹಾಕಿದ ಮಣ್ಣನ್ನು ಕೊಚ್ಚಿಕೊಂಡು ಹೋಗಿದ್ದು, ತಡೆಗೋಡೆಯ ಬದಿಯಿಂದ ನಟ್ಟಿಬೈಲ್‌ ಕೃಷಿ ಜಮೀನಿನತ್ತ ಹರಡಿದೆ.

ತಡೆಗೋಡೆ ಮತ್ತೆ ಕುಸಿಯುವ ಭೀತಿ: ಇಲ್ಲಿ ನಿರ್ಮಿಸಲಾದ ತಡೆಗೋಡೆಯ ಬದಿಗೆ ಹಾಕಿರುವ ಮಣ್ಣು ಮಳೆ ನೀರಿಗೆ ಕೊಚ್ಚಿ ಹೋಗಿದ್ದು, ಇನ್ನಷ್ಟು ಕೊಚ್ಚಿ ಹೋದರೆ ಈ ತಡೆಗೋಡೆಯೂ ಕುಸಿಯುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

34-ನೆಕ್ಕಿಲಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಅಭಿವೃದ್ಧಿ ಕಾಮಗಾರಿ ಸಲುವಾಗಿ ಮಣ್ಣು ಹಾಕಿ ನಿರ್ಮಿಸಿದ್ದ ಸರ್ವಿಸ್‌ ರಸ್ತೆ ಬಳಿ ಮಳೆಯ ಕೆಸರು ನೀರು ಮನೆ, ಅಂಗಡಿ, ಗ್ಯಾರೇಜ್, ಮಳಿಗೆಗಳಿಗೆ ನುಗ್ಗಿ ಹಾನಿಯಾಗಿದೆ. ನೆಕ್ಕಿಲಾಡಿಯಲ್ಲಿ ಜಯಂತಿ ಅವರ ಮನೆಯ ಚಾವಣಿಯ ಹೆಂಚುಗಳು ಗಾಳಿ ಮಳೆಯಿಂದಾಗಿ ಹಾರಿ ಹೋಗಿವೆ. ಅವರ ಮನೆ ಮತ್ತು ದನದ ಹಟ್ಟಿಯೊಳಗೆ ನೀರು ನುಗ್ಗಿದೆ.

ಡಿ.ಸಿ, ಶಾಸಕರ ಮಾತಿಗೂ ಸ್ಪಂದಿಸಿಲ್ಲ

ಇಲ್ಲಿನ ಸಮಸ್ಯೆ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಶಾಸಕ ಫೆ.7ರಂದು ಪರಿಶೀಲನೆ ನಡೆಸಿದ್ದರು. ಹೆದ್ದಾರಿ ಎಂಜಿನಿಯರ್ ಮತ್ತು ಕಾಮಗಾರಿ ನಿರ್ವಹಣೆಯ ಗುತ್ತಿಗೆದಾರರು ಸಮಸ್ಯೆ ನಿವಾರಿಸುವ ಭರವಸೆ ನೀಡಿದ್ದರು. ಆದರೆ, ಇಲ್ಲಿ ಕೆಲಸ ಮಾಡುವವರು ಸ್ಪಂದಿಸಲಿಲ್ಲ. ಅವರಿಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲ ಮಳೆಗೆ ಈ ಪರಿಸ್ಥಿತಿಯಾದರೆ ಇನ್ನು ಮುಂದಿನ ದಿನಗಳಲ್ಲಿ ಇಲ್ಲಿಯವರು ಬದುಕುವುದದರೂ ಹೇಗೆ? ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆಯ ಗಂಭೀರತೆಯನ್ನು ಅರಿತು ಶೀಘ್ರ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಧನಂಜಯ ನಟ್ಟಿಬೈಲ್ ಹೇಳಿದರು.

ಕೃಷಿಕರ ಸಂಕಷ್ಟ ಕೇಳುವವರೇ ಇಲ್ಲ

3 ವರ್ಷದಿಂದ ನಮಗೆ ಮಳೆಗಾಲದಲ್ಲಿ ಸಮಸ್ಯೆ ಎದುರಾಗುತ್ತಿದೆ. ಈ ಭಾಗದ ವರ ತೋಟದಲ್ಲಿ ಪ್ರತಿ ವರ್ಷ ಅಡಿಕೆ ಮರಗಳು ಕೊಳೆ ರೋಗಕ್ಕೆ ತುತ್ತಾಗುತ್ತಿವೆ. ಇಲ್ಲಿ ಸಮರ್ಪಕವಾದ ತೋಡಿನ ಕಾಮಗಾರಿ ಆಗದ ಹೊರತು ಈ ಸಮಸ್ಯೆಗೆ ಪರಿಹಾರ ಸಿಗದು. ಸಂಬಂಧಪಟ್ಟವರು ಶೀಘ್ರವೇ ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಬಗೆಹರಿಸಿ ಈ ಭಾಗದ ಕೃಷಿಕರನ್ನು ಸಂಕಷ್ಟದಿಂದ ಪಾರು ಮಾಡಬೇಕಾಗಿದೆ ಎಂದು ಸಂತ್ರಸ್ತ ಕೃಷಿಕ ಉಮೇಶ್ ನಟ್ಟಿಬೈಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT