ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಡಂದಲೆ | ಅಂಚೆ ಪಾಲಕನಿಂದ ₹13.50 ಲಕ್ಷ ವಂಚನೆ 

Published 11 ಜನವರಿ 2024, 15:43 IST
Last Updated 11 ಜನವರಿ 2024, 15:43 IST
ಅಕ್ಷರ ಗಾತ್ರ

ಮೂಡುಬಿದಿರೆ: ಇಲ್ಲಿಗೆ ಸಮೀಪದ ಕಡಂದಲೆ ಗ್ರಾಮೀಣ ಅಂಚೆ ಕಚೇರಿಯಲ್ಲಿ ಗ್ರಾಹಕರಿಂದ ಸಂಗ್ರಹಿಸಿದ್ದ ₹ 13.50 ಲಕ್ಷ ಹಣ ದುರ್ಬಳಕೆ ಮಾಡಿದ ಆರೋಪದ ಮೇರೆಗೆ ಅಂಚೆ ಪಾಲಕ ಅಶೋಕ್ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

‘2010ರಿಂದ 2021ರ ಅವಧಿಯಲ್ಲಿ ಅಶೋಕ್ ಕಡಂದಲೆ ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ 22 ಅಂಚೆ ಗ್ರಾಹಕರ ಉಳಿತಾಯ ಖಾತೆ ಮತ್ತು ನಾಲ್ವರು  ಗ್ರಾಹಕರ ವಿವಿಧ ವಿಮಾ ಪಾಲಿಸಿಗಳ ಸುಮಾರು ₹13.50 ಲಕ್ಷ ಹಣವನ್ನು ವಂಚಿಸಿದ ಆರೋಪ ಹೊತ್ತಿದ್ದಾನೆ. ಈ ವಂಚನೆ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಬಂಟ್ವಾಳ ಉಪವಿಭಾಗದ ಸಹಾಯಕ  ಅಧೀಕ್ಷಕ  ಲೋಕನಾಥ್, ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರಿಗೆ ವರದಿಯನ್ನು ಸಲ್ಲಿಸಿದ್ದರು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಬಂಟ್ವಾಳ ಉಪವಿಭಾಗದ ಈಗಿನ ಸಹಾಯಕ  ಅಧೀಕ್ಷಕ ಪ್ರಹ್ಲಾದ ನಾಯಕ್ ಅವರು ಆರೋಪಿ ಅಶೋಕ್ ವಿರುದ್ಧ ಬುಧವಾರ ದೂರು ನೀಡಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

’ಗ್ರಾಹಕರು ಅಂಚೆ ಇಲಾಖೆಗೆ ಕಟ್ಟಿದ ಹಣವನ್ನು ಅವರ ಪಾಸ್ ಪುಸ್ತಕದಲ್ಲಿ ಮಾತ್ರ ನಮೂದಿಸುತ್ತಿ ಅಶೋಕ್‌, ಇಲಾಖೆಯ ದಾಖಲಾತಿಯಲ್ಲಿ ನಮೂದಿಸುತ್ತಿರಲಿಲ್ಲ. ಗ್ರಾಹಕರಿಂದ ಸಂಗ್ರಹವಾದ ಹಣವನ್ನು ಹತ್ತಿರದ ಮಿತ್ತಬೈಲು ಉಪ ಅಂಚೆ ಕಚೇರಿಗೆ ದಿನಂಪ್ರತಿ ನೀಡಬೇಕಾಗಿತ್ತು. ಆದರೆ ಆರೋಪಿ ಕೆಲವು ಗ್ರಾಹಕರ ಹಣವನ್ನು ಇಲಾಖೆಯ ಲೆಕ್ಕಕ್ಕೆ ತೋರಿಸಿಯೇ ಇಲ್ಲ.  ಹಳ್ಳಿಯ ಜನರಿಗೆ ಈತನ ವಂಚನೆ ಬಗ್ಗೆ ಅರಿವಿಲ್ಲದೆ ತಮ್ಮ ಪಾಸ್ ಪುಸ್ತಕಗಳನ್ನು ಕೂಡ ಅಂಚೆ ಕಚೇರಿಯಲ್ಲೇ ಬಿಟ್ಟು ಹೋಗುತ್ತಿದ್ದರು. ಇದನ್ನು ಆತ ದುರ್ಬಳಕೆ ಮಾಡಿಕೊಂಡಿದ್ದ’ ಎಂದು ಅವರು ತಿಳಿಸಿದ್ದಾರೆ.

‘ಆರೋಪಿಯಿಂದ ಈಗಾಗಲೇ ₹ 8 ಲಕ್ಷ ವಸೂಲಿ ಮಾಡಲಾಗಿದೆ. ಬಾಕಿ ಹಣವನ್ನು ಅಂಚೆ ಇಲಾಖೆಯೇ ಭರಿಸಿ ಗ್ರಾಹಕರಿಗೆ ಹಿಂತಿರುಗಿಸಿದೆ. ಆರೋಪಿ ಅಶೋಕನನ್ನು ಕೆಲಸದಿಂದ ವಜಾ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT