ಮಂಗಳೂರು: ರಾಜ್ಯ ಸರ್ಕಾರ ಸಾಂಪ್ರದಾಯಿಕ ಕರಾವಳಿಯ ಸಮುದಾಯಗಳಿಗೆ ಮರಳು ದಿಬ್ಬ ತೆರವಿಗೆ ಸಂಬಂಧಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯವು ಕರಡು ಮಾರ್ಗಸೂಚಿ ರಚಿಸಿದ್ದು, ಈ ಕುರಿತು ಸಂಬಂಧಿಸಿದ ರಾಜ್ಯ ಸರ್ಕಾರ ಹಾಗೂ ಕರಾವಳಿ ನಿಯಂತ್ರಣ ವಲಯ ನಿರ್ವಹಣಾ ಪ್ರಾಧಿಕಾರಗಳಿಂದ 2023 ಮೇ 8ರಲ್ಲಿ ಪ್ರತಿಕ್ರಿಯೆ ಕೇಳಿತ್ತು. ಇದಾಗಿ ಎರಡೂವರೆ ವರ್ಷಗಳು ಕಳೆದರೂ ಈ ಮಾರ್ಗಸೂಚಿ ಅಂತಿಮಗೊಂಡಿಲ್ಲ.

ನಿರ್ದಿಷ್ಟ ಪ್ರದೇಶದಲ್ಲಿ, ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಪ್ರಮಾಣದ ಮರಳನ್ನು ಮಾತ್ರ ತೆರವುಗೊಳಿಸಲು ರಾಜ್ಯ ಸರ್ಕಾರ ಅನುಮತಿ ನೀಡಬಹುದು. ಅನುಮತಿ ನೀಡುವಾಗಲೂ, ಈ ಕಾರ್ಯದಲ್ಲಿ ತೊಡಗುವ ಸ್ಥಳೀಯ ಸಮುದಾಯಗಳ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಅದನ್ನು ಪ್ರತಿವರ್ಷ ನವೀಕರಿಸಬೇಕು ಎಂದು ಸಚಿವಾಲಯವು ರಾಜ್ಯಪತ್ರದಲ್ಲಿ ಅಧಿಸೂಚನೆಯನ್ನು 2022ರ ನ.24ರಂದು ಪ್ರಕಟಿಸಿದೆ. ಆ ಬಳಿಕ ಆರಂಭವಾದ ಮಾರ್ಗಸೂಚಿ ರಚಿಸುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.

ಕರ್ನಾಟಕ ರಾಜ್ಯ ಸರ್ಕಾರ ಈ ಕರಡು ಮಾರ್ಗಸೂಚಿಗೆ ಆಗಲೇ ಪ್ರತಿಕ್ರಿಯೆ ಸಲ್ಲಿಸಿದೆ. ಕರಡು ಮಾರ್ಗಸೂಚಿಗೆ ಇತರ ಕೆಲವು ರಾಜ್ಯ ಸರ್ಕಾರಗಳು ಇನ್ನೂ ಪ್ರತಿಕ್ರಿಯೆ ನೀಡದ ಕಾರಣ ಅದರ ಮಾರ್ಗಸೂಚಿ ಇನ್ನೂ ಅಂತಿಮ ರೂಪ ಪಡೆದಿಲ್ಲ ಎಂದು ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಸಿಆರ್ಜೆಡ್ ಪ್ರದೇಶದಲ್ಲಿ ಮರಳು ತೆಗೆಯುವುದಕ್ಕೆ ಸಂಬಂಧಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ 2011ರಲ್ಲಿ ಮಾರ್ಗಸೂಚಿಯನ್ನು ಜಾರಿ ಮಾಡಿತ್ತು. ಅದರ ಪ್ರಕಾರ ಜಿಲ್ಲಾಧಿಕಾರಿ ನೇತೃತ್ವದ ಏಳು ಮಂದಿ ಸದಸ್ಯರ ಸಮಿತಿಯ ಶಿಫಾರಸಿನ ಆಧಾರದಲ್ಲಿ ಸಿಆರ್ಜೆಡ್ ಪ್ರದೇಶದಲ್ಲಿ ಮರಳು ದಿಬ್ಬವನ್ನು ಸಾಂಪ್ರದಾಯಿಕ ವಿಧಾನದಲ್ಲಿ ತೆರವುಗೊಳಿಸಲು ಜಿಲ್ಲಾಧಿಕಾರಿ ಅನುಮತಿ ನೀಡಬಹುದಿತ್ತು. ಪ್ರತಿ ವರ್ಷ ಆ ಅನುಮತಿಯನ್ನು ನವೀಕರಿಸಬೇಕಿತ್ತು. ಮರಳು ತೆಗೆಯುವ ಪ್ರಕ್ರಿಯೆಯ ಮೇಲೆ ಜಿಲ್ಲಾ ಪರಿಸರ ಅಧಿಕಾರಿ ನಿಗಾ ಇಟ್ಟು, ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಮರಳು ತೆರವುಗೊಳಿಸಲಾಗಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕಿತ್ತು. ಜಿಪಿಎಸ್ ಹಾಗೂ ಉಪಗ್ರಹ ಚಿತ್ರಗಳ ಆಧಾರದಲ್ಲಿ ಈ ಮರಳುಗಾರಿಕೆಯ ಬಗ್ಗೆ ಸರ್ಕಾರ ಅಧ್ಯಯನ ನಡೆಸಬೇಕಿತ್ತು. ಪರಿಸರ ಸೂಕ್ಷ್ಮ ವಲಯ, ಸಮುದ್ರದ ಮೀನುಗಳು ವಲಸೆ ಬರುವ ತಾಣ, ಮೀನುಗಳ ಸಂತಾನೋತ್ಪತ್ತಿ ತಾಣಗಳಿಗೆ ಮರಳು ತೆರವುಗೊಳಿಸುವುದರಿಂದ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿತ್ತು. ಆದರೆ ಅವು ಯಾವುವೂ ಪಾಲನೆ ಆಗಿರಲಿಲ್ಲ.

ಈಗ ರೂಪಿಸಿರುವ ಕರಡು ಮಾರ್ಗಸೂಚಿಗಳಲ್ಲಿ ಹಿಂದಿನ ಮಾರ್ಗಸೂಚಿಯಲ್ಲಿದ್ದ ಕೆಲವು ಅಂಶಗಳಿಗೆ ಮಾರ್ಪಾಟು ಮಾಡಲಾಗಿದೆ. ಉಬ್ಬರ ಇಳಿತ ಪ್ರದೇಶದಲ್ಲಿ ಶೇಖರಣೆಗೊಳ್ಳುವ ಮರಳನ್ನು ಕರಾವಳಿಯ ಸಾಂಪ್ರದಾಯಿಕ ಸಮುದಾಯಗಳು ಮಾತ್ರ ತೆರವುಗೊಳಿಸಬೇಕು ಅದಕ್ಕೆ ಯಂತ್ರ ಬಳಕೆ ಮಾಡುವಂತಿಲ್ಲ ಎಂಬಿತ್ಯಾದಿ ಷರತ್ತುಗಳು ಈಗಿನ ಕರಡು ಮಾರ್ಗಸೂಚಿಯಲ್ಲೂ ಇವೆ. ಆದರೆ ನಿರ್ದಿಷ್ಟ ಪ್ರಕರಣಗಳಲ್ಲಿ ಮರಳಿನ ಬಳಕೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ನೀಡಲಾಗಿದೆ. ಹೊಸ ಮಾರ್ಗಸೂಚಿ ಇನ್ನೂ ಅಂತಿಮಗೊಳ್ಳದ ಕಾರಣ ಸಿಆರ್ಜೆಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳ ತೆರವಿಗೆ ಸಂಬಂಧಿಸಿದ ಗೊಂದಲಗಳು ಮುಂದುವರಿದಿವೆ.

ಕರಡು ಮಾರ್ಗಸೂಚಿಯಲ್ಲಿ ಏನಿದೆ?

* ಹವಳದ ದಂಡೆ, ಸಮುದ್ರ ಕಳೆ, ಕಾಂಡ್ಲಾ ಸಸ್ಯ, ಕಡಲಾಮೆ, ಡಾಲ್ಫಿನ್, ಹಕ್ಕಿಗಳು ಗೂಡು ಕಟ್ಟು ತಾಣಗಳು ಸೇರಿದಂತೆ ಕರಾವಳಿಯ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಇದರಿಂದ ಧಕ್ಕೆ ಆಗದಂತೆ ಯೋಜನೆಯಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕು.

* ಆಯಾ ಜಿಲ್ಲೆಯ ಜಿಲ್ಲಾಧಿಕಾರಿ/ ಹೆಚ್ಚುವರಿ ಜಿಲ್ಲಾಧಿಕಾರಿ/ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ 7–10 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು. ಅದರಲ್ಲಿ ಸಂಬಂಧಪಟ್ಟ ಅಧಿಕಾರಿಗಳು,ವೈಜ್ಞಾನಿಕ ಸಂಸ್ಥೆ ಅಥವಾ ವಿಶ್ವವಿದ್ಯಾಲಯದ ತಾಂತ್ರಿಕ ಪ್ರತಿನಿಧಿಗಳು, ಸಿಆರ್ಜೆಡ್ ಅಧಿಸೂಚನೆ ಪ್ರಕಾರ ರಚಿಸಲಾದ ಜಿಲ್ಲಾ ಮಟ್ಟದ ಸಮಿತಿಯ ಇಬ್ಬರು ಪ್ರತಿನಿಧಿಗಳು, ಕರಾವಳಿಯ ಸಾಂಪ್ರದಾಯಿಕ ಸಮುದಾಯದ ಇಬ್ಬರು ಪ್ರತಿನಿಧಿಗಳನ್ನು ಸಮಿತಿಯು ಹೊಂದಿರಬೇಕು. ಮತ್ತು ಈ ಸಮಿತಿ ನಿಗಾ ವಹಿಸಬೇಕು.

* ರಾಜ್ಯ ಕರಾವಳಿ ನಿಯಂತ್ರಣ ನಿರ್ವಹಣಾ ಪ್ರಾಧಿಕಾರದ ಸಲಹೆ ಪಡೆದೇ ಯೋಜನೆ ರೂಪಿಸುವುದರಿಂದ ಮರಳು ತೆಗೆಯಲು ಮತ್ತೆ ಪ್ರತ್ಯೇಕವಾಗಿ ಈ ಪ್ರಾಧಿಕಾರದ ಅನುಮತಿ ಪಡೆಯಬೇಕಿಲ್ಲ

* ಮರಳು ತೆಗೆಯಲು ಯಂತ್ರ ಬಳಕೆಗೆ ಅನುಮತಿ ನೀಡುವಂತಿಲ್ಲ.

* ತೆಗೆಯುವ ಮರಳನ್ನು ಕರಾವಳಿಯಲ್ಲಿ ಸವಕಳಿ ಉಂಟಾದ ಪ್ರದೇಶದಲ್ಲಿ ಮರಳು ಮರುಪೂರಣದ ಉದ್ದೇಶಕ್ಕೆ ಮಾತ್ರ ಬಳಸಬೇಕು. ಆದರೂ ಆ ಮರಳನ್ನು ಅನ್ಯ ಉದ್ದೇಶಕ್ಕೆ ಬಳಸುವುದಿದ್ದರೆ, ಆ ಬಗ್ಗೆ ಸಮಿತಿ/ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ನಿರ್ಧರಿಸಬಹುದು.

* ಪ್ರತಿ ಪರವಾನಗಿಗೆ ಸಂಬಂಧಿಸಿದ ಮಾಹಿತಿ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿರಬೇಕು. ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತ ವೆಬ್ಸೈಟ್ಗಳಲ್ಲಿ ಅದನ್ನು ಪ್ರದರ್ಶಿಸಬೇಕು.

ಎನ್ಜಿಟಿ ಆದೇಶದ ಬಳಿಕ ನಿಷೇಧ

ಉಬ್ಬರ ಇಳಿತದ ಪ್ರದೇಶಗಳಲ್ಲಿ ಮರಳು ತೆಗೆಯುವಾಗ ಕೇಂದ್ರದ ಮಾರ್ಗಸೂಚಿ ಪಾಲನೆ ಆಗದ ಬಗ್ಗೆ ಪರಿಸರ ಹೋರಾಟಗಾರರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ)ಗೆ ಅರ್ಜಿ ಸಲ್ಲಿಸಿ ಗಮನ ಸೆಳೆದಿದ್ದರು.

‘ಸಿಆರ್ಜೆಡ್ ಪ್ರದೇಶದಿಂದ ತೆಗೆದ ಮರಳನ್ನು ಮಾರಾಟ ಮಾಡುವಂತಿಲ್ಲ. ಅದನ್ನು ನದಿ ದಂಡೆ ಬಲಪಡಿಸಲು, ನದಿ ತೀರದ ತಗ್ಗು ಪ್ರದೇಶ ಸಮತಟ್ಟುಗೊಳಿಸಲು ಅಥವಾ ಕಡಲ ಕಿನಾರೆಗಳನ್ನು ಬಲಪಡಿಸಲು ಮಾತ್ರ ಬಳಸಬಹುದು’ ಎಂದು ಎನ್ಜಿಟಿ 2022ರ ಆದೇಶದಲ್ಲಿ ತಿಳಿಸಿತ್ತು.

ಈ ಆದೇಶದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್ಜೆಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಹೇರಿದೆ. ಆದರೂ ಈ ನಿರ್ಬಂಧಿತ ಪ್ರದೇಶದಲ್ಲೂ ಮರಳು ತೆಗೆಯುವ ಕಾರ್ಯ ಕದ್ದು ಮುಚ್ಚಿ ನಡೆಯುತ್ತಲೇ ಇದೆ.

ಸಿಆರ್ಜೆಡ್ ಪ್ರದೇಶದಲ್ಲಿ ಮರಳಿನ ದಿಬ್ಬ ತೆರವುಗೊಳಿಸುವ ಕುರಿತ ಕರಡು ಮಾರ್ಗಸೂಚಿ ಸಲುವಾಗಿ ರಾಜ್ಯ ಸರ್ಕಾರ ಈಗಾಗಲೇ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆಯನ್ನು ಸಲ್ಲಿಸಿದೆ.
– ದರ್ಶನ್ ಎಚ್.ವಿ., ಜಿಲ್ಲಾಧಿಕಾರಿ ದಕ್ಷಿಣ ಕನ್ನಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.