ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಪ್ರತಿ ತಿಂಗಳು ‘ಸಪ್ತಪದಿ’

ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 13 ಫೆಬ್ರುವರಿ 2021, 12:07 IST
ಅಕ್ಷರ ಗಾತ್ರ

ಮಂಗಳೂರು: ‘ಇನ್ನು ಪ್ರತಿ ತಿಂಗಳು ಲಭ್ಯವಿರುವ ಮುಹೂರ್ತದಂದು, ಪ್ರಾದೇಶಿಕ ಆಚರಣೆಗೆ ಅನುಗುಣವಾಗಿ ‘ಸಪ್ತಪದಿ’ ವಿವಾಹ ನಡೆಸಲು ನಿರ್ಧರಿಸಲಾಗಿದೆ. ಒಂದು ಜೋಡಿ ಇದ್ದರೂ, ಮುಹೂರ್ತದಂದು ಮದುವೆ ನಡೆಸಬೇಕು ಎಂದು ಸೂಚಿಸಲಾಗಿದೆ’ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಾದೇಶಿಕ ಆಚರಣೆಗೆ ಅನುಗುಣವಾಗಿ, ವಧುವಿನ ತಾಳಿ ಮತ್ತಿತರ ವ್ಯವಸ್ಥೆಗಳನ್ನು ಒದಗಿಸಲು ತಿಳಿಸಲಾಗಿದೆ’ ಎಂದರು.

ವಿತ್ತೀಯ ಕೊರತೆ ಕಳೆದ ಬಾರಿಗಿಂತ ಹೆಚ್ಚಿದ್ದರೂ, ಮೂಲ ಸೌಕರ್ಯಕ್ಕೆ ಹೆಚ್ಚು ಬಂಡವಾಳ ಹೂಡಿರುವ ಕೇಂದ್ರ ಬಜೆಟ್, ಸರಕು ಸೇವಾ ಕ್ಷೇತ್ರ, ಆರೋಗ್ಯ ಕ್ಷೇತ್ರ ಹಾಗೂ ವಿವಿಧ ರಂಗಗಳಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದೆ. ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡಿರುವ ಕೇಂದ್ರ ಬಜೆಟ್‌ನಿಂದಾಗಿ, 2025ರ ವೇಳೆಗೆ ಭಾರತವು 5 ಟ್ರಿಲಿಯನ್ ಆರ್ಥಿಕ ವ್ಯವಸ್ಥೆಗೆ ತಲುಪಲಿದೆ. ಭಾರತವು ಆರೋಗ್ಯದ ಹಬ್ ಆಗುವತ್ತ ಮುನ್ನಡೆದಿದೆ. ಕಳೆದ ಸಾಲಿನ ₹ 94 ಸಾವಿರ ಕೋಟಿ ಬದಲಾಗಿ, ಈ ಬಾರಿ ಆರೋಗ್ಯ ಕ್ಷೇತ್ರದ ಹೂಡಿಕೆಯನ್ನು ₹ 2.23 ಲಕ್ಷ ಕೋಟಿಗೆ ಏರಿಕೆ ಮಾಡಲಾಗಿದೆ’ ಎಂದರು.

ಹಳ್ಳಿಗಳಲ್ಲಿ ಆಸ್ತಿ ಮಾಲೀಕರಿಗೆ ಹಕ್ಕುಪತ್ರ ನೀಡುವ ಸ್ವಾಮಿತ್ವ ಯೋಜನೆಯನ್ನು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಣೆ ಮಾಡಲಾಗಿದೆ. ಹೈನುಗಾರರು, ಮೀನುಗಾರರಿಗೆ ಹೆಚ್ಚಿನ ಸಾಲ ಸೌಲಭ್ಯ ಒದಗಿಸುವ ಮೂಲಕ ರೈತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಶುದ್ಧ ಕುಡಿಯುವ ನೀರು, ರೈಲ್ವೆ ವ್ಯವಸ್ಥೆ ಸುಧಾರಣೆ, ದೇಶೀಯ ಉತ್ಪಾದನೆ ಉತ್ತೇಜನಕ್ಕೆ ಒತ್ತು ನೀಡಿದೆ ಎಂದು ವಿವರಿಸಿದರು.

‘ಎ ವರ್ಗದ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ರಚನೆ ಬಹುತೇಕ ಮುಗಿದಿದೆ. ‘ಬಿ’ ಮತ್ತು ‘ಸಿ’ ವರ್ಗಗಳ ದೇವಾಲಯಗಳ ವ್ಯವಸ್ಥಾಪನಾ ಸಮಿತಿಯನ್ನು ಜಿಲ್ಲಾ ಧಾರ್ಮಿಕ ಪರಿಷತ್ ರಚನೆ ಮಾಡುತ್ತದೆ. ಇದರ ಅಧ್ಯಕ್ಷರಾಗಿರುವ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ, ಕೆಲಸದ ಒತ್ತಡದಲ್ಲಿ ಸಭೆ ನಡೆಸುವುದು ವಿಳಂಬವಾಗುತ್ತದೆ ಎಂಬ ದೂರು ಇದೆ. ಈ ಹಿನ್ನೆಲೆಯಲ್ಲಿ ಪ್ರತಿ ತಿಂಗಳು 5ನೇ ತಾರೀಕಿಗೆ ಪರಿಷತ್ ಸಭೆ ಕರೆಯುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗೆ ಸಾಧ್ಯವಾಗದಿದ್ದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಈ ಕಾರ್ಯ ನಡೆಸಬೇಕು’ ಎಂದು ತಿಳಿಸಿದರು.

ಶಾಸಕ ಡಾ. ಭರತ್‌ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಪ್ರಮುಖರಾದ ರಾಧಾಕೃಷ್ಣ, ಸತೀಶ ಇದ್ದರು.

2011ರ ಕಾಯ್ದೆಯಂತೆ ರಾಜ್ಯದ ಎಲ್ಲ ಖಾಸಗಿ ದೇವಾಲಯಗಳನ್ನೂ ನೋಂದಣಿ ಮಾಡಬೇಕು ಎಂದು ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ.
– ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT