ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸತೀಶ್ ಹೆಗಲಿಗೆ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಹೊಣೆ

Published 16 ಜನವರಿ 2024, 4:41 IST
Last Updated 16 ಜನವರಿ 2024, 4:41 IST
ಅಕ್ಷರ ಗಾತ್ರ

ಮಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಈಚೆಗೆ ಆಯ್ಕೆಯಾದ ಬಿ.ವೈ.ವಿಜಯೇಂದ್ರ ಅವರು ಬೂತ್ ಮಟ್ಟದ ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಕಾರ್ಯಚಟುವಟಿಕೆ ಆರಂಭಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಘಟಕದ ಹೊಸ ಅಧ್ಯಕ್ಷ ಸತೀಶ್ ಕುಂಪಲ ಅವರು ಕೂಡ ಅದೇ ಹಾದಿಯಲ್ಲಿ ನಡೆಯಲು ನಿರ್ಧರಿಸಿದ್ದಾರೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿರುವ ವಿಷಯ ತಿಳಿದ ಕೆಲವೇ ತಾಸುಗಳಲ್ಲಿ ಅವರು ಸೋಮೇಶ್ವರದ ಬೂತ್ ಒಂದರ ಅಧ್ಯಕ್ಷರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. 

ಸತೀಶ್ ಕುಂಪಲ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು (ಉಳ್ಳಾಲ) ಕ್ಷೇತ್ರದಿಂದ ಯು.ಟಿ.ಖಾದರ್ ವಿರುದ್ಧ ಸ್ಪರ್ಧಿಸಿದ್ದರು. ಚುನಾವಣೆಯ ಸಂದರ್ಭದಲ್ಲಿ ಸಂತೋಷ ಕುಮಾರ್ ರೈ ಬೋಳಿಯಾರು ಮತ್ತು ಸತೀಶ್‌ ಕುಂಪಲ ಮಧ್ಯೆ ಟಿಕೆಟ್‌ಗೆ ಪೈಪೋಟಿ ನಡೆದಿತ್ತು. ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಪಕ್ಷವು ಬಂಟ ಸಮುದಾಯದ ಸಂತೋಷ ಅವರನ್ನು ಕೈಬಿಟ್ಟು ಬಿಲ್ಲವ ಸಮುದಾಯದ ಸತೀಶ್‌ ಕುಂಪಲ ಅವರನ್ನು ಕಣಕ್ಕಿಳಿಸಿತ್ತು.

ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲೂ ಅದೇ ಮಾನದಂಡವನ್ನು ಪಾಲಿಸಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಈ ಭಾಗದ ಪ್ರಬಲ ಜಾತಿಯವರಲ್ಲಿ ಪಕ್ಷದ ಬಗ್ಗೆ ಒಲವು ಉಳಿಸಿಕೊಳ್ಳುವಂತೆ ಮಾಡುವುದು ಈ ಸಮೀಕರಣದ ಹಿಂದಿನ ಲೆಕ್ಕಾಚಾರ ಎನ್ನಲಾಗಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಸುದರ್ಶನ ಮೂಡುಬಿದಿರೆ ಕೂಡ ಇದೇ ಸಮುದಾಯದವರಾಗಿದ್ದರು. 

‘ರಾಜ್ಯ ನಾಯಕರು ಜಿಲ್ಲೆಗೆ ಭೇಟಿ ನೀಡಿ ಅಭಿಪ್ರಾಯ ಪಡೆದುಕೊಂಡಿದ್ದರು. ಒಟ್ಟು 16 ಮಂದಿಯ ಪಟ್ಟಿಯನ್ನು ತೆಗೆದುಕೊಂಡು ಹೋಗಿದ್ದರು. ಅರ್ಹತೆಯ ಆಧಾರದಲ್ಲಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆಯೇ ಹೊರತು ಸಮುದಾಯದ ವಿಷಯ ಮುನ್ನೆಲೆಗೆ ಬರಲಿಲ್ಲ’ ಎಂದು ಪಕ್ಷದ ಮುಖಂಡರೊಬ್ಬರು ಅಭಿಪ್ರಾಯಪಟ್ಟರು.

ಬೂತ್‌ ಕಾರ್ಯದರ್ಶಿ ಹುದ್ದೆಯಿಂದ ಆರಂಭ

ಸತೀಶ್ ಕುಂಪಲ ಅವರು ಬೂತ್ ಕಾರ್ಯದರ್ಶಿಯಾಗಿ ಪಕ್ಷದಲ್ಲಿ ಮೊದಲ ಬಾರಿ ಹುದ್ದೆ ಪಡೆದುಕೊಂಡಿದ್ದರು. ಉಳ್ಳಾಲ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು ಮೂರು ಬಾರಿ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿದ್ದರು. ಜನಪ್ರತಿನಿಧಿಯಾಗಿ ಮೊದಲು ಗುರುತಿಸಿಕೊಂಡದ್ದು ಸೋಮೇಶ್ವರ ಪುರಸಭೆಯಲ್ಲಿ. ಅಲ್ಲಿ ಸದಸ್ಯರಾಗಿದ್ದ ಅವರು ನಂತರ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿ ಉಪಾಧ್ಯಕ್ಷರಾಗಿದ್ದು. ಕೆಡಿಪಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

‘ಸಾಮಾನ್ಯ ಕಾರ್ಯಕರ್ತರು ಮತ್ತು ನಾಯಕರನ್ನು ಜೊತೆ ಸೇರಿಸಿಕೊಂಡು ಕೆಲಸ ಮಾಡಬೇಕಾದ ಮಹತ್ತರ ಜವಾಬ್ದಾರಿ ನನ್ನ ಮೇಲೆ ಇದೆ. ಲೋಕಸಭೆ ಚುನಾವಣೆ ಹತ್ತಿರ ಇರುವುದರಿಂದ ದೊಡ್ಡ ಮಟ್ಟದಲ್ಲಿ ಕೆಲಸಗಳು ಆಗಬೇಕಿದೆ. ಸಂಘ ಪರಿವಾರ ಮತ್ತು ಬಿಜೆಪಿಯ ಪ್ರಮುಖರ ಜೊತೆ ಚರ್ಚೆ ಮಾಡಿ ಕೆಳಗಿನ ಸ್ಥರದಲ್ಲಿ ಕೆಲಸ ಮಾಡುವವರ ಬೆಂಬಲ ಪಡೆದುಕೊಂಡು ಪಕ್ಷವನ್ನು ಬಲಪಡಿಸುವೆ’ ಎಂದು ಸತೀಶ್ ಕುಂಪಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನಗೆ ಕಾರ್ಯಕರ್ತರ ನಿಕಟ ಸಂಬಂಧ ಇದೆ. ಅನುಭವಿಗಳ ಹತ್ತಿರದ ಪರಿಚಯ ಇದೆ. ಹೀಗಾಗಿ ಅಧ್ಯಕ್ಷ ಸ್ಥಾನ ನಿಭಾಯಿಸುವುದರಲ್ಲಿ ಯಾವ ತೊಂದರೆಯೂ ಆಗುವುದಿಲ್ಲ. ಎಲ್ಲರ ಜೊತೆಗೂಡಿ ಹೋಗುವ ಮಾನಸಿಕತೆ ನನ್ನದು. ಕಾರ್ಯಕರ್ತರ ನಿರಂತರ ಸಂಪರ್ಕ ಬೆಳೆಸಿಕೊಂಡು ಒಂದು ನಿಮಿಷವೂ ವ್ಯರ್ಥ ಮಾಡದೆ ಕೆಲಸ ಮಾಡುವ ಗುರಿ ಇದೆ’ ಎಂದು ಅವರು ತಿಳಿಸಿದರು.

ಸತೀಶ್ ಕುಟುಂಬದ ಪರಿಚಯ

ತಂದೆ: ನಾರಾಯಣ ಪೂಜಾರಿ ತಾಯಿ: ಭವಾನಿ ಪತ್ನಿ: ಮಮತಾ (ಪ್ರಾಥಮಿಕ ಶಾಲೆ ಶಿಕ್ಷಕಿ) ಮಕ್ಕಳು: ಮನೀಷಾ ಎಸ್‌ (ಎಂಜಿನಿಯರ್‌) ಸಂಘೋಷ್‌ (ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ)

ಪಕ್ಷದ ಅಭ್ಯರ್ಥಿಯಾಗಿ ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಲಭಿಸಿತ್ತು. ಅದರ ನಂತರ ಪಕ್ಷದಿಂದ ಏನನ್ನೂ ಬಯಸಿರಲಿಲ್ಲ. ಈಗ ಅಧ್ಯಕ್ಷ ಹುದ್ದೆ ಕೊಟ್ಟಿದ್ದಾರೆ. ಈ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾಗಿದೆ.
ಸತೀಶ್ ಕುಂಪಲ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ
ಸತೀಶ್ ಕುಂಪಲ
ಸತೀಶ್ ಕುಂಪಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT