ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರಿಗೆ ಮೀಸಲಾದ ಟೆಂಡರ್ ಹೊರ ಜಿಲ್ಲೆಯವರಿಗೆ

ಕುಂದುಕೊರತೆ ಸಭೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮುಖಂಡರ ದೂರು
Last Updated 3 ಏಪ್ರಿಲ್ 2021, 4:47 IST
ಅಕ್ಷರ ಗಾತ್ರ

ಮಂಗಳೂರು: ಪರಿಶಿಷ್ಟ ಸಮುದಾಯಕ್ಕೆ ಮೀಸಲಾಗಿರುವ ಕಾಮಗಾರಿ ಟೆಂಡರ್‌ಗಳನ್ನು ಮಹಾನಗರ ಪಾಲಿಕೆಯಲ್ಲಿ ಅರ್ಹತೆ ಇಲ್ಲದ ಹೊರ ಜಿಲ್ಲೆಯವರಿಗೆ ನೀಡಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ದಲಿತ ಮುಖಂಡ ದುರ್ಗಾಪ್ರಸಾದ್ ಸುರತ್ಕಲ್ ಆರೋಪಿಸಿದರು.

ನಗರದ ಪೊಲೀಸ್‌ ಕಮಿಷನರ್ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹರಿರಾಂ ಶಂಕರ್‌, ಈ ಸಂಬಂಧ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಮುಖಂಡ ವಿಶ್ವನಾಥ್ ಮಾತನಾಡಿ, ಅರಣ್ಯ ಇಲಾಖೆಯಿಂದ ಪರಿಶಿಷ್ಟ ಸಮುದಾಯದವರಿಗೆ ಉಚಿತವಾಗಿ ಅಡುಗೆ ಅನಿಲ ವಿತರಿಸಲಾಗುತ್ತಿದೆ. ಆದರೆ ಏಜೆನ್ಸಿಯವರು ₹ 500 ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡುವಂತೆ ಡಿಸಿಪಿ ಸಲಹೆ ನೀಡಿದರು. ಐಕಳದಲ್ಲಿ ಪರಿಶಿಷ್ಟ ಮಹಿಳೆಯ ಮನೆಯ ಬಳಿ ಅಳವಡಿಸಿರುವ ಮೊಬೈಲ್ ಟವರ್‌ನಿಂದ ತೊಂದರೆಯಾಗುತ್ತಿದೆ. ಅದರಿಂದಾಗಿ ಮಹಿಳೆ ಅನಾರೋಗ್ಯ ಪೀಡಿತರಾಗಿದ್ದು, ಅದನ್ನು ತೆಗೆಯಬೇಕೆಂದು ಎಂದು ಮುಖಂಡ ಎಸ್.ಪಿ.ಆನಂದ ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸುವಂತೆ ಉತ್ತರ ಉಪವಿಭಾಗದ ಎಸಿಪಿ ಮಹೇಶ್ ಅವರಿಗೆ ಡಿಸಿಪಿ ಸೂಚಿಸಿದರು.

ಕಿನ್ನಿಗೋಳಿಯಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಬೇರೆ ಮಾರಾಟಗಾರರಿಂದ ತೊಂದರೆಯಾಗುತ್ತಿದೆ. ಪಂಚಾಯಿತಿ ವತಿಯಿಂದ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಿ ಕೊಡುವ ಭರವಸೆ ಮಾತ್ರ ಸಿಕ್ಕಿದೆ. ಬಡ ಮಹಿಳೆಯರಿಗೆ ನ್ಯಾಯ ದೊರಕಿಸುವಂತೆ ಮುಖಂಡ ಜಗದೀಶ್ ಪಾಂಡೇಶ್ವರ ಒತ್ತಾಯಿಸಿದರು.

ಈ ಸಂಬಂಧ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿವೆ. ಎರಡೂ ಕಡೆಯವರನ್ನು ಕರೆಸಿ ಮಾತುಕತೆ ನಡೆಸಿ, ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸುವಂತೆ ಎಸಿಪಿ ಮಹೇಶ್ ಅವರಿಗೆ ಸೂಚಿಸಿದರು.

ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ಅಳವಡಿಸಿದ ಅಂಬೇಡ್ಕರ್ ನಾಮಫಲಕವನ್ನು ಪುರಸಭೆ ಅಧಿಕಾರಿಗಳೇ ಕಿತ್ತುಕೊಂಡು ಹೋಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಗದೀಶ್ ಒತ್ತಾಯಿಸಿದರು. ಪುರಸಭೆ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆಯಲಾಗುವುದು ಎಂದು ಡಿಸಿಪಿ ಹೇಳಿದರು.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಕುಮಾರಸ್ವಾಮಿ ಇದ್ದರು.

ಅಂಬೇಡ್ಕರ್‌ ಫಲಕ: ಶ್ಲಾಘನೆ
ನಗರದ ಬಸ್‌ಗಳಲ್ಲಿ ಜ್ಯೋತಿ ವೃತ್ತವೆಂದು ಹಾಕಲಾಗಿದ್ದ ಸ್ಟಿಕ್ಕರ್ ತೆಗೆಸಿ, ಅಂಬೇಡ್ಕರ್ ವೃತ್ತ ಎಂದು ಸ್ಟಿಕ್ಕರ್ ಅಳವಡಿಸಿದ್ದಕ್ಕೆ ಪೊಲೀಸ್ ಅಧಿಕಾರಿಗಳ ಬಗ್ಗೆ ಸಭೆಯಲ್ಲಿ ಶ್ಲಾಘನೆ ವ್ಯಕ್ತವಾಯಿತು.

ಸಭೆಯಲ್ಲಿ ಮುಖಂಡರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರ ಮೂಲಕ ಡಿಸಿಪಿ ಹರಿರಾಂ ಶಂಕರ್, ವಿನಯ ಗಾಂವ್ಕರ್ ಹಾಗೂ ಎಸಿಪಿ ನಟರಾಜ್ ಅವರನ್ನು ಶಾಲು ಹೊದಿಸಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT