ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕಾಂಗ್ರೆಸ್‌ ಆಡಳಿತದಲ್ಲಿ ಅಮಾಯಕರ ಮುಸ್ಲಿಮರ ಮೇಲೆ ಪ್ರಕರಣ’

Published 1 ಜೂನ್ 2024, 4:29 IST
Last Updated 1 ಜೂನ್ 2024, 4:29 IST
ಅಕ್ಷರ ಗಾತ್ರ

ಮಂಗಳೂರು: ‘ಕಾಂಗ್ರಸ್‌ಗೆ ಮುಸ್ಲಿಮರ ಮತವಷ್ಟೇ ಬೇಕಿದೆ, ಕೆಲ ಮುಸ್ಲಿಂ ನಾಯಕರು ಕಾಂಗ್ರೆಸ್ ಎಸೆದ ಬಿಸ್ಕತ್ತಿಗೆ ಬಲಿಯಾಗಿದ್ದಾರೆ. ಈ ನಡೆಯನ್ನು ನಾವು ಖಂಡಿಸುತ್ತೇವೆ’ ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಹೇಳಿದರು.

ಕಂಕನಾಡಿಯಲ್ಲಿ ಮಸೀದಿ ಎದುರಿನ ರಸ್ತೆಯಲ್ಲಿ ನಮಾಜ್ ನಿರ್ವಹಿಸಿದವರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿದ ತಪ್ಪಿತಸ್ಥ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಶುಕ್ರವಾರ ಇಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಸ್ಥಳಾವಕಾಶದ ಕೊರತೆಯಿಂದ ಮೇ 24ರಂದು ಕೆಲವರು ಮಸೀದಿ ಹೊರಗೆ ನಮಾಜ್ ಮಾಡಿದ್ದನ್ನೇ ಸಂಘ ಪರಿವಾರದವರು ವಿವಾದ ಮಾಡಿದ್ದಾರೆ. ‘ಇದೇ ರೀತಿ ಮುಂದುವರಿದಲ್ಲಿ ಮಸೀದಿಗೆ ನುಗ್ಗಿ ನಮಾಜ್ ನಿಲ್ಲಿಸುತ್ತೇವೆ’ ಎಂದು ಶರಣ್‌ ಪಂಪ್‌ವೆಲ್ ಹೇಳಿದ್ದರು. ಪ್ರತಿರೋಧ ಅಪರಾಧವಲ್ಲ, ಅದಕ್ಕೆ ಸಂವಿಧಾನ ಅವಕಾಶ ನೀಡುತ್ತದೆ. ಒಂದು ವೇಳೆ ಸಂಘ ಪರಿವಾರ ದಾಳಿಗೆ ಬಂದರೆ ನಾವು ಕೈಕಟ್ಟಿ ಕೂರುವುದಿಲ್ಲ ಎಂದು ಉಡುಪಿಯಲ್ಲಿ ಹೇಳಿದ್ದೆ. ಅದಕ್ಕೆ ಮಂಗಳೂರಿನ ಪೊಲೀಸರು ನೋಟಿಸ್ ನೀಡಿದ್ದಾರೆ. ನಾವು ಹೋರಾಟದಿಂದ ಬಂದವರು. ಇಂತಹ ನೋಟಿಸ್‌ಗೆ ಹೆದರಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದರು.

ದ್ವಿಮುಖ ನೀತಿಯಿಂದ ಕಾಂಗ್ರೆಸ್ ಕೂಡ ಹೊರತಾಗಿಲ್ಲ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಹಲವು ಮುಸ್ಲಿಂ ಅಮಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ. ಆಝಾನ್, ಹಿಜಾಬ್ ವಿಷಯದಲ್ಲಿ ರಾಜಕೀಯ ಮಾಡಿರುವ ಬಿಜೆಪಿ ನಾಯಕರು ಈಗ ಅತಂತ್ರರಾಗಿದ್ದಾರೆ. ನಮಾಜ್ ವಿಷಯಕ್ಕೆ ಕೈ ಹಾಕಿದರೂ ಇದೇ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಿದರು.

ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅನ್ವರ್ ಸಾದತ್, ಆನಂದ ಮಿತ್ತಬೈಲ್ ಮತ್ತಿತರರು ಇದ್ದರು.


ಮಸೀದಿ ಮುಂಭಾಗದಲ್ಲಿ ನಮಾಜ್‌ ನಿರ್ವಹಿಸಿದವರ ವಿರುದ್ಧ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಎಸ್‌ಡಿಪಿಐ ಕಾರ್ಯಕರ್ತರು ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ
ಮಸೀದಿ ಮುಂಭಾಗದಲ್ಲಿ ನಮಾಜ್‌ ನಿರ್ವಹಿಸಿದವರ ವಿರುದ್ಧ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಎಸ್‌ಡಿಪಿಐ ಕಾರ್ಯಕರ್ತರು ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT