ಭಾನುವಾರ, ಸೆಪ್ಟೆಂಬರ್ 19, 2021
30 °C
ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಹಣ್ಣಿನ ಬೀಜ ಸಂಗ್ರಹ ಸ್ಪರ್ಧೆ

ಲಾಕ್‌ಡೌನ್‌: ಚಿಗುರೊಡೆದ ‘ಬೀಜ’ ಮೊಳಕೆ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಮನೆಯೊಳಗೆ ಬಂದಿಯಾದ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ತುಡಿತದೊಂದಿಗೆ ಚಿಗುರೊಡೆದ ಹಣ್ಣಿನ ಬೀಜ ಸಂಗ್ರಹಿಸುವ ಕಲ್ಪನೆ ಈಗ ಹೆಮ್ಮರವಾಗಿ ಬೆಳೆದಿದೆ.

ಇಲ್ಲಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್) ಹಾಗೂ ಯುನಿವರ್ಸಲ್ ನಾಲೆಡ್ಜ್ ಸಂಘಟನೆಗಳು ಜಂಟಿಯಾಗಿ ಇಂತಹುದೊಂದು ಪ್ರಯೋಗದಲ್ಲಿ ಯಶಸ್ವಿಯಾಗಿವೆ. ವಿದ್ಯಾರ್ಥಿಗಳಲ್ಲಿ ಪರಿಸರ ಕುತೂಹಲ ಮೂಡಿಸುವ ಭಾಗವಾಗಿ, ಸಂಘಟನೆಗಳು ಹಣ್ಣಿನ ಬೀಜ ಸಂಗ್ರಹಿಸುವ ಸ್ಪರ್ಧೆ ಆಯೋಜಿಸಿದ್ದವು. ಕಾಡುಹಣ್ಣುಗಳ ಬೀಜ ಸಂಗ್ರಹಿಸಲು ಎರಡು ತಿಂಗಳು ಕಾಲಾವಕಾಶ ನೀಡಲಾಗಿತ್ತು.

ಈ ಎರಡು ತಿಂಗಳುಗಳಲ್ಲಿ ರಾಜ್ಯ ಬೇರೆ ಬೇರೆ ಜಿಲ್ಲೆಗಳ 400ಕ್ಕೂ ಹೆಚ್ಚು ಮಕ್ಕಳು ಹಣ್ಣಿನ ಬೀಜಗಳನ್ನು ಸಂಗ್ರಹಿಸಿ, ಕಳುಹಿಸಿದ್ದಾರೆ. ಕೆಲವರು ಅತ್ಯಂತ ನಾಜೂಕಾಗಿ ಅವುಗಳ ಪೊಟ್ಟಣ ಸಿದ್ಧಪಡಿಸಿ, ನಿರ್ದಿಷ್ಟ ಜಾತಿಯ ಹಣ್ಣಿನ ಉಪಯೋಗ, ಅದರಲ್ಲಿರುವ ಔಷಧೀಯ ಗುಣಗಳ ಬಗ್ಗೆ ಟಿಪ್ಪಣಿ ಬರೆದು ಕಳುಹಿಸಿದ್ದಾರೆ. ವಿದ್ಯಾರ್ಥಿಯೊಬ್ಬ 30ಕ್ಕೂ ಹೆಚ್ಚು ಬಗೆಯ ಅಪರೂಪದ ಕಾಡಿನ ಹಣ್ಣುಗಳ ಬೀಜಗಳನ್ನು ಸಂಗ್ರಹಿಸಿ ಕಳುಹಿಸಿದ್ದಾನೆ. 

ಹೆಬ್ಬಲಸು, ನುರುಕಲು, ಪನ್ನೇರಳೆ, ಉಪ್ಪಾಗೆ, ಕಾಡುಬಾಳೆ, ಈಚಲು, ಕಾಡು ಮುರುಗಲು, ಕುಂಟಾಲೆ, ಕೇಪುಳ, ಶ್ರೀಗಂಧ, ಗುಡ್ಡೆಗೇರು ಹೀಗೆ ಮಕ್ಕಳು ಕಳುಹಿಸಿದ ಹಲವಾರು ಜಾತಿಯ ಹಣ್ಣಿನ ಬೀಜಗಳು ಸೇರಿ, ಈಗ ಎನ್‌ಇಸಿಎಫ್‌ ಕಚೇರಿ ‘ಬೀಜ ಬ್ಯಾಂಕ್’ ಆಗಿ ರೂಪುಗೊಂಡಿದೆ.

‘ಮನೆಯಲ್ಲಿ ಖಾಲಿ ಇರುವ ಮಕ್ಕಳು ಪರಿಸರ ಪ್ರೀತಿ ಬೆಳೆಸಿಕೊಳ್ಳಲಿ, ಕಾಡು–ಬೆಟ್ಟ ಸುತ್ತಾಡಲಿ ಎಂಬ ಕಾರಣಕ್ಕೆ ಸ್ಪರ್ಧೆ ಆಯೋಜಿಸಿದ್ದೆವು. ಮಕ್ಕಳು ಅತೀವ ಆಸಕ್ತಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಬೀಜ ಸಂಗ್ರಹಿಸುವ ಕಾರಣಕ್ಕಾಗಿ ಮಕ್ಕಳು ಹಲವಾರು ಹಣ್ಣುಗಳ ಬಗ್ಗೆ ಹಿರಿಯರಿಂದ ತಿಳಿದುಕೊಂಡು, ಜ್ಞಾನ ಬೆಳೆಸಿಕೊಂಡಿದ್ದಾರೆ. ಸ್ಪರ್ಧೆಯ ಮೂಲ ಆಶಯ ಸಾಕಾರವಾದ ತೃಪ್ತಿ ಇದೆ’ ಎನ್ನುತ್ತಾರೆ ಎನ್‌ಇಸಿಎಫ್ ಮುಖ್ಯಸ್ಥ ಶಶಿಧರ ಶೆಟ್ಟಿ.

‘ಈಗಾಗಲೇ ಬಂದಿರುವ ಹಣ್ಣಿನ ಬೀಜಗಳಲ್ಲಿ ಶೇ 30ರಷ್ಟು ಸಾಮಾನ್ಯವಾಗಿ ಸುತ್ತಮುತ್ತ ಲಭ್ಯವಾಗುವ ಮಾವು, ಹಲಸು ಮತ್ತಿತರ ಜಾತಿಯವು ಇದ್ದರೆ, ಶೇ 70ರಷ್ಟು ಕಾಡು ಹಣ್ಣಿನ ಬೀಜಗಳಿವೆ. ಈ ಬೀಜಗಳನ್ನು ಬಳಸಿ, ನರ್ಸರಿ ಗಿಡಗಳನ್ನು ಬೆಳೆಸುವ ಯೋಚನೆಯಿದೆ. ಸಂಘಟನೆಯ ಪ್ರತಿ ಭಾನುವಾರ ಗಿಡ ನೆಡುವ ‘ಪಶ್ಚಿಮಘಟ್ಟ ಹಸಿರು ಹೊದಿಕೆ’ ಅಭಿಯಾನದ ವೇಳೆ ಈ ಸಸಿಗಳನ್ನು ನಾಟಿ ಮಾಡಿದರೆ, ಕಣ್ಮರೆಯಾಗುತ್ತಿರುವ ತಳಿಗಳನ್ನು ರಕ್ಷಿಸಿದಂತಾಗುತ್ತದೆ’ ಎಂದು ಅವರು ವಿವರಿಸಿದರು.

‘ಗ್ರೀನ್ ಪಂಚಾಯತ್’ ಯೋಜನೆ
‘ದಕ್ಷಿಣ ಕನ್ನಡ ಜಿಲ್ಲೆ 220 ಗ್ರಾಮ ಪಂಚಾಯಿತಿಗಳಲ್ಲಿ ಹಣ್ಣಿನ ಗಿಡಗಳನ್ನು ನೆಡುವ ‘ಗ್ರೀನ್ ಪಂಚಾಯತ್’ ಯೋಜನೆ ರೂಪಿಸಲಾಗುತ್ತಿದೆ. ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ ಸಹಕಾರದಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಪ್ರಾಣಿ–ಪಕ್ಷಿಗಳಿಗೆ ಆಹಾರ ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶ’ ಎಂದು ಶಶಿಧರ ಶೆಟ್ಟಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.