ಬುಧವಾರ, ಅಕ್ಟೋಬರ್ 20, 2021
24 °C

ಕಡಲನಗರಿಯಲ್ಲಿ ಹೆಚ್ಚುತ್ತಿದೆ ವಾಹನ ದಟ್ಟಣೆ– ಸರ್ವಿಸ್ ರಸ್ತೆ ಸಮಸ್ಯೆ ಕೇಳುವರಿಲ್ಲ

ಪ್ರದೀಶ್‌ ಎಚ್‌. ಮರೋಡಿ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಟ್ರಾಫಿಕ್‌ ಜಾಮ್‌ ತಗ್ಗಿಸುವ ನಿಟ್ಟಿನಲ್ಲಿ ನಗರದ ಪ್ರಮುಖ ಕೇಂದ್ರಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಆದರೆ, ಸರ್ವಿಸ್ ರಸ್ತೆಗಳ ಅವ್ಯವಸ್ಥೆಯಿಂದಾಗಿ ವಾಹನ ಸವಾರರು ಪರದಾಡುವುದು ಮಾತ್ರ ತಪ್ಪಿಲ್ಲ.

ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟುವಿನಿಂದ ಸುರತ್ಕಲ್‌ವರೆಗೆ ಸಂಚರಿಸುವುದು ವಾಹನ ಬಳಕೆದಾರರಿಗೆ ದೊಡ್ಡ ಸಾಹಸವಾಗಿದೆ. ಬಹುತೇಕ ಕಡೆ ಡಾಂಬರು ಕಿತ್ತುಹೋಗಿದ್ದು, ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಎದುರಾಗುವ ಸಾಧ್ಯತೆಗಳಿವೆ. ಈ ಹೆದ್ದಾರಿಯಲ್ಲಿ ತೊಕ್ಕೊಟ್ಟು, ಪಂಪ್‌ವೆಲ್‌, ಕುಂಟಿಕಾನ, ಕೊಟ್ಟರಚೌಕಿ ಮತ್ತು ಕೂಳೂರು ಮೇಲ್ಸೇತುವೆಗಳಿದ್ದು, ಇವುಗಳ ಬಹುತೇಕ ಸರ್ವಿಸ್‌ ರಸ್ತೆಗಳು ಸವಾರರ ತಾಳ್ಮೆಯನ್ನು ಪರೀಕ್ಷಿಸುವಂತಿವೆ. ಅಲ್ಲದೆ, ಇಲ್ಲಿ ಅಳವಡಿಸಲಾದ ಬಹುತೇಕ ಬೀದಿದೀಪಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿವೆ.

ಕರಾವಳಿಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಕೂಳೂರು ಮೇಲ್ಸೇತುವೆಯ ಬಳಿ ಬೃಹತ್‌ ಹೊಂಡಗಳಾಗಿ, ನಿತ್ಯ ಟ್ರಾಫಿಕ್‌ ಜಾಮ್‌ ಆಗುತ್ತಿದೆ. ಇಲ್ಲಿನ ಸೇತುವೆಯ ಇಕ್ಕೆಲಗಳಲ್ಲೂ ಡಾಂಬರು ಕಿತ್ತುಹೋಗಿದ್ದು, ಪಣಂಬೂರಿನಿಂದ ಮಂಗಳೂರಿನತ್ತ ಬರುವವರ ಸ್ಥಿತಿ ಶೋಚನೀಯವಾಗಿದೆ. ಒಂದೊಂದು ಬಾರಿ ಕಿ.ಮೀ. ದೂರ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ತುರ್ತು ದುರಸ್ತಿಗಾಗಿ ಜಲ್ಲಿಪುಡಿಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಿ ಹಾಕಿದ್ದು, ಮಳೆ ಬಂದರೆ ಮತ್ತೆ ಸಮಸ್ಯೆ ಪುನರಾವರ್ತನೆಯಾಗುತ್ತದೆ.

‘ಉಡುಪಿಯಿಂದ ಮಂಗಳೂರು ನಗರಕ್ಕೆ ಬರುವಾಗ ಕೂಳೂರು ಸೇತುವೆಯೇ ಹೆಬ್ಬಾಗಿಲು. ಆದರೆ, ಹೆಬ್ಬಾಗಿಲಿನಲ್ಲೇ ಭಾರಿ ಸಮಸ್ಯೆ ಇದೆ. ಅಸಮರ್ಪಕ ಮತ್ತು ಅವೈಜ್ಞಾನಿಕ ಸೇತುವೆ, ಫ್ಲೈಓವರ್‌ ಮತ್ತು ಸರ್ವಿಸ್‌ ರಸ್ತೆಯಿಂದಾಗಿ 15 ವರ್ಷಗಳಿಂದ ನಾಗರಿಕರು ಸಂಕಟ ಅನುಭವಿಸುತ್ತಿದ್ದಾರೆ. ರಸ್ತೆ ಗುಂಡಿ ಬಿದ್ದ ಕಾರಣ ಈಗ ಜಲ್ಲಿ ಪುಡಿಯನ್ನು ಹಾಕಲಾಗಿದ್ದು, ಇಡೀ ಪ್ರದೇಶವೇ ದೂಳಿನಿಂದ ಆವೃತವಾಗಿದೆ. ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಚಿಂತನೆ ನಡೆಸುತ್ತಿಲ್ಲ’ ಎಂಬುದು ಕೂಳೂರು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ವಿ.ಜಿ. ಗುರುಚಂದ್ರ ಹೆಗ್ಡೆ ಗಂಗಾರಿ ಆರೋಪ.

‘ಮಂಗಳೂರಿನ ಬಹುತೇಕ ಮೇಲ್ಸೇತುವೆ ಅವೈಜ್ಞಾನಿಕವಾಗಿವೆ. ಎಲ್ಲಿಯೂ ಸರ್ವಿಸ್‌ ರಸ್ತೆಗೆ ಆದ್ಯತೆ ನೀಡಿಲ್ಲ. ಮೇಲ್ಸೇತುವೆ ನಿರ್ಮಾಣಕ್ಕೆ ಮುಂಚೆ ಸರ್ವಿಸ್‌ ರಸ್ತೆಗೆ ಬೇಕಾದ ಜಾಗವನ್ನು ಕಾಯ್ದಿರಿಸಿಕೊಳ್ಳುವುದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿ. ಆದರೆ, ಎಲ್ಲೂ ಇದು ನಡೆಯುತ್ತಿಲ್ಲ. ಬಹುತೇಕ ಸರ್ವಿಸ್‌ ರಸ್ತೆಗಳು ಓಣಿಯ ರೀತಿಯಲ್ಲಿವೆ. ಯಾರದೋ ಜಾಗದಲ್ಲಿ ಕದ್ದುಮುಚ್ಚಿ ಹೋದಂತಹ ಅನುಭವವಾಗುತ್ತಿದೆ. ಅವುಗಳ ನಿರ್ವಹಣೆ ಮಾಡಬೇಕಾಗಿರುವುದು ಇಲಾಖೆಯ ಅಧಿಕಾರಿಗಳ ಜವಾಬ್ದಾರಿ’ ಎನ್ನುತ್ತಾರೆ ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್‌ ಡಿಸೋಜ.

‘ಮೇಲ್ಸೇತುವೆ ನಿರ್ಮಿಸುವಾಗ ಹೆದ್ದಾರಿಗೆ ಎಷ್ಟು ಮಹತ್ವ ನೀಡುತ್ತಿರೋ ಅಷ್ಟೇ ಮಹತ್ವವನ್ನು ಸರ್ವಿಸ್‌ ರಸ್ತೆಗೂ ನೀಡಬೇಕು. ಮಾತ್ರವಲ್ಲ, ರಸ್ತೆಯಲ್ಲಿ ನೀರು ಸಂಗ್ರಹವಾಗದೆ, ಹೊರಹೋಗಲು ಇಳಿಜಾರಿನ ಛೇಂಬರ್‌ ಕೊಡಬೇಕು. ಮಾತ್ರವಲ್ಲ, ಅದನ್ನು ಸರಿಯಾಗಿ ನಿರ್ವಹಣೆ ಮಾಡಬೇಕು’ ಎಂದು ಸಲಹೆ ನೀಡುತ್ತಾರೆ ಆಮ್‌ ಆದ್ಮಿ ಪಕ್ಷದ ಜಿಲ್ಲಾ ಘಟಕದ ಸಂಚಾಲಕ ರಾಜೇಂದ್ರ. 

‘ಕೂಳೂರು ಮೇಲ್ಸೇತುವೆ ಸಮೀಪ ಹೆದ್ದಾರಿಯಲ್ಲಿ ಬಿದ್ದಿದ್ದ ಗುಂಡಿಯನ್ನು ಮುಚ್ಚಲಾಗಿದೆ. ಈಗ ಟ್ರಾಫಿಕ್‌ ಜಾಮ್‌ ಕಡಿಮೆಯಾಗಿದೆ. ಮೇಲ್ಸೇತುವೆಗಳ ಸರ್ವಿಸ್‌ ರಸ್ತೆ ಹದಗೆಟ್ಟಿರುವ ಬಗ್ಗೆ ಮಾಹಿತಿಯಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶುಶಂಕರ್ ಹೇಳಿದ್ದಾರೆ.

ಮಂಗಳೂರಿಗೆ ಮತ್ತೊಂದು ಫ್ಲೈಓವರ್‌: ನಳಿನ್‌

ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರಿನ ಕೆಪಿಟಿ ಜಂಕ್ಷನ್ ಬಳಿ ಹೊಸ ಫ್ಲೈಓವರ್ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರವು ಅನುಮೋದನೆಯನ್ನು ನೀಡಿದೆ. ಅಂದಾಜು ₹ 34.8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಫ್ಲೈಓವರ್‌ಗೆ ಶೀಘ್ರದಲ್ಲಿ ಟೆಂಡರ್ ಅನ್ನು ಕರೆಯಲಾಗುವುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ.

ಕೆಪಿಟಿ ಪ್ರದೇಶದಲ್ಲಿ ವಾಹನ ದಟ್ಟಣೆ ಅಧಿಕವಾಗಿರುವದರಿಂದಾಗಿ  ಸಂಚಾರ ಸಮಸ್ಯೆಯು ಎದುರಾಗುತ್ತಿತ್ತು. ಇಲ್ಲಿ ಹೆದ್ದಾರಿಗೆ ಮಂಗಳೂರಿನ ಏರ್‌ಪೋರ್ಟ್ ರಸ್ತೆಯಿಂದ ನಗರ ಪ್ರವೇಶ ರಸ್ತೆಯ ಸಂಪರ್ಕದಿಂದಾಗಿ ವಾಹನ ದಟ್ಟಣೆಯು ನಿತ್ಯ ಅಧಿಕವಾಗುತ್ತಿದೆ. ಹೀಗಾಗಿ, ಬದಲಿ ರಸ್ತೆ ವ್ಯವಸ್ಥೆಯ ಬಗ್ಗೆ ಸ್ಥಳೀಯವಾಗಿ ಆಗ್ರಹವು ಕೇಳಿಬಂದಿತ್ತು. ಇದರಂತೆ ಇದೀಗ ಫ್ಲೈಓವರ್ ನಿರ್ಮಾಣಕ್ಕೆ ಪ್ರಾಧಿಕಾರವು ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.

‘ಸವಾರರ ಜೀವ ಹಿಂಡುವ ದಿಣ್ಣೆಗಳು’

‘ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯಕ್ಕೆ ಮಾದರಿಯಾಗುವ ಫ್ಲೈ ಓವರ್‌ಗಳು ಬೇಕಿತ್ತು. ಆದರೆ, ನಿರ್ಮಿಸಿರುವ ಬಹುತೇಕ ಮೇಲ್ಸೇತುವೆಗಳು ಹೆದ್ದಾರಿಯ ನಿಯಮಕ್ಕೆ ವಿರುದ್ಧವಾಗಿ, ಅವೈಜ್ಞಾನಿಕವಾಗಿ ಮಾಡಲಾಗಿದೆ. ಮಾತ್ರವಲ್ಲ, ನಿಯಮಬಾಹಿರವಾಗಿ ಹೆದ್ದಾರಿಯಲ್ಲಿ ಹಾಕಿರುವ ದಿಣ್ಣೆಗಳು ವಾಹನ ಸವಾರರ ಪ್ರಾಣ ಹಿಂಡುತ್ತಿವೆ’ ಎಂದು ದೂರುತ್ತಾರೆ ಕೂಳೂರು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ವಿ.ಜಿ. ಗುರುಚಂದ್ರ ಹೆಗ್ಡೆ ಗಂಗಾರಿ.

‘ಘನವಾಹನಗಳು ಹೆಚ್ಚಾಗಿ ಓಡಾಡುವ ಕೊಟ್ಟಾರಚೌಕಿ, ಕುಲಶೇಖರ, ಕೂಳೂರು, ಬಂಟ್ವಾಳ ಮತ್ತು ಸುರತ್ಕಲ್‌ನಲ್ಲಿ ಏಕಮುಖವಾಗಿ ಮೇಲ್ಸೇತುವೆ ನಿರ್ಮಿಸಿರುವುದು ಸರಿಯಲ್ಲ. ಬೃಹತ್‌ ಕೈಗಾರಿಕೆಗಳು ಮಂಗಳೂರಿನಲ್ಲಿದ್ದರೂ ಇಲ್ಲಿನ ಹೆದ್ದಾರಿ ಸ್ಥಿತಿ ಮಾತ್ರ ಅತ್ಯಂತ ಹೀನಾಯ ಸ್ಥಿತಿಯಲ್ಲಿರುವುದು ದುರಂತವೇ ಸರಿ’ ಎನ್ನುತ್ತಾರೆ ಅವರು.

‘ಹೆದ್ದಾರಿಯಲ್ಲಿ ಟೋಲ್‌ಗೇಟ್‌ ನಿರ್ಮಿಸಿ ವಾಹನ ಸವಾರರಿಂದ ಹಣ ಲೂಟಿ ಮಾಡಲಾಗುತ್ತಿದೆ. ಅದಕ್ಕೆ ತಕ್ಕಂತೆ ಹೆದ್ದಾರಿ ಇಲ್ಲ. ಮಂಗಳೂರು ನಗರದಲ್ಲಿ ಸರಣಿಯಂತೆ ನಡೆಯುವ ಅಪಘಾತ, ಸಂಚಾರ ದಟ್ಟಣೆಗೆ ಮುಕ್ತಿಯಾವಾಗ ಎಂಬುದೇ ಅರ್ಥವಾಗಿಲ್ಲ. ಇಲ್ಲಿನ ಹೆದ್ದಾರಿಯ ಬಗ್ಗೆ ಪ್ರಧಾನಿಗೂ ಪತ್ರ ಬರೆಯಲಾಗಿದೆ’ ಎಂದು ಹೇಳಿದ್ದಾರೆ.

 ‘ಹೆದ್ದಾರಿ ವಿಚಾರದಲ್ಲಿ ಒಂದೇ ನೀತಿ ಸರಿಯಲ್ಲ’

ಕರಾವಳಿಯಲ್ಲಿ ಯಾವುದೇ ಯೋಜನೆಯನ್ನು ಅನುಷ್ಠಾನ ಮಾಡುವ ಮುಂಚೆ ಇಲ್ಲಿನ ಹವಾಮಾನ ಮತ್ತು ಭೌಗೋಳಿಕ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವಿಚಾರದಲ್ಲಿ ದೇಶಕ್ಕೆ ಒಂದೇ ನೀತಿ ಸರಿಯಲ್ಲ. ಕರಾವಳಿಯಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುವುದರಿಂದ ಅದಕ್ಕೆ ತಕ್ಕಂತೆ ಯೋಜನೆಯನ್ನು ಅಧಿಕಾರಿಗಳು ರೂಪಿಸಬೇಕು. ಅದನ್ನು ಮಾನಿಟರ್‌ ಮಾಡುವ ಕೆಲಸವನ್ನು ಇಲ್ಲಿನ ಸಂಸದರು ಮಾಡಬೇಕಿತ್ತು. ಆದರೆ, ಕರಾವಳಿಯ ಮೇಲ್ಸೇತುವೆ ವಿಚಾರದಲ್ಲಿ ಅದು ನಡೆದಿಲ್ಲ. ಅಧಿಕಾರಿಗಳ ಮತ್ತು ಸಂಸದರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ದೂರುತ್ತಾರೆ ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್‌ ಡಿಸೋಜ.

‘ಪಂಪ್‌ವೆಲ್‌ ಮೇಲ್ಸೇತುವೆ ಲೋಕಾರ್ಪಣೆಯಾಗಿ ಒಂದೂವರೆ ವರ್ಷ ಕಳೆದಿದೆ. ಈಚೆಗೆ ‘ಕೌ ಗೇಟ್‌’ ಅಳವಡಿಸಲಾಗಿದೆ. ಇಷ್ಟರ ತನಕ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದರು. ಈತನಕ ಮಳೆ ನೀರು ಸಂಗ್ರಹಗೊಂಡು ಆದ ಹಾನಿಗೆ ಯಾರು ಹೊಣೆ’ ಎಂದು ಪ್ರಶ್ನಿಸುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು