ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಯೂರು ರಾಮಚಂದ್ರ ರಾಯರಿಗೆ ಶೇಣಿ ಪ್ರಶಸ್ತಿ

Last Updated 4 ನವೆಂಬರ್ 2022, 10:26 IST
ಅಕ್ಷರ ಗಾತ್ರ

ಮಂಗಳೂರು: ‘ಶೇಣಿ ಗೋಪಾಲಕೃಷ್ಣ ಭಟ್‌ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ನೀಡುವ2022 ನೇ ಸಾಲಿನ ‘ಶೇಣಿ ಪ್ರಶಸ್ತಿಗೆ ಯಕ್ಷಗಾನದ ಪ್ರಸಿದ್ಧ ಕಲಾವಿದ ಕೋಳ್ಯೂರು ರಾಮಚಂದ್ರ ರಾಯರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ₹ 30 ಸಾವಿರ ಗೌರವಧನವನ್ನು ಹೊಂದಿದೆ’ ಎಂದು ಟ್ರಸ್ಟ್‌ನ ಉಪಾಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು,‘ಉರ್ವ ಕೆನರಾ ಹೈಸ್ಕೂಲ್‌ನಲ್ಲಿ ಇದೇ 13ರಂದು ಸಂಜೆ 4ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್ ಹೆಗಡೆ ಕುಮಟಾ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಎಸ್‌. ಯಡಪಡಿತ್ತಾಯ,ಡಾ. ಪ್ರಭಾಕರ ಜೋಷಿ,ಕುಡುಪು ಕೃಷ್ಣರಾಜ ತಂತ್ರಿ ಮತ್ತಿತರರು ಭಾಗವಹಿಸಲಿದ್ದಾರೆ' ಎಂದರು.

’13ರಂದು ಬೆಳಿಗ್ಗೆ 9.30ರಿಂದ ಯಕ್ಷಗಾನದ ಅರ್ಥಗಾರಿಕೆ-ನಾಟ್ಯ-ಸ್ವರೂಪ-ಸಮೀಕ್ಷೆ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಯಕ್ಷಗಾನ ವಿಮರ್ಶಕ ಡಾ.ರಾಘವ ನಂಬಿಯಾರ್‌, ಕಲಾವಿದರಾದ ಕೆ.ಗೋವಿಂದ ಭಟ್‌ ಸೂರಿಕುಮೇರು, ಎಂ.ಕೆ.ರಮೇಶ ಆಚಾರ್ಯ, ಯಕ್ಷಪ್ರಭಾ ಸಂಪಾದಕ ಕೆ.ಎಲ್‌.ಕುಂಡಂತಾಯ, ವಿಮರ್ಶಕ ಶ್ರೀಕರ ಭಟ್‌ ಮರಾಠೆ ಭಾಗವಹಿಸುವರು. ಕಾಲೇಜು ವಿದ್ಯಾರ್ಥಿಗಳಿಗೆ ಪೌರಾಣಿಕ ರಸಪ್ರಶ್ನೆ ಹಾಗೂ ಯಕ್ಷಗಾನ ಮುಖವರ್ಣಿಕೆ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿದೆ. ಸಂಜೆ 5.30ರಿಂದ ಪುತ್ತಿಗೆ ರಘುರಾಮ ಹೊಳ್ಳ ಸಾರಥ್ಯದಲ್ಲಿ ‘ಗುರುದಕ್ಷಿಣೆ‘ ಯಕ್ಷಗಾನ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಟ್ರಸ್ಟ್‌ ವತಿಯಿಂದ ಇದೇ 6ರಿಂದ 12ರವರೆಗೆ ನಗರದ ಉರ್ವ ಚಿಲಿಂಬಿಯ ಶಿರ್ಡಿ ಸಾಯಿಬಾಬಾ ಮಂದಿರಲ್ಲಿ ಹರಿಕಥಾ ಸಪ್ತಾಹವನ್ನು ಏರ್ಪಡಿಸಲಾಗಿದೆ. 6ರಂದು ಸಂಜೆ 4.30ಕ್ಕೆ ಸಪ್ತಾಹವನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸುವರು’ ಎಂದು ತಿಳಿಸಿದರು.

‘ಶೇಣಿ ಗೋಪಾಲಕೃಷ್ಣ ಭಟ್ಟ ಅವರಿಂದಲೇ 2000ದಲ್ಲಿ ಸ್ಥಾಪಿಸಲ್ಪಟ್ಟ ಸಂಸ್ಥೆ ನಮ್ಮದು. ಯಕ್ಷಗಾನ, ಹರಿಕಥಾ ರಂಗದ ಬೆಳವಣಿಗೆಗಾಗಿ ಪ್ರತಿ ವರ್ಷವೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ’ ಎಂದರು.

ಟ್ರಸ್ಟ್‌ನ ಅಧ್ಯಕ್ಷ ಎಂ.ಆರ್‌.ವಾಸುದೇವ, ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಖಜಾಂಚಿ ಜಿ.ಕೆ.ಭಟ್‌ ಸೇರಾಜೆ. ಕಾರ್ಯದರ್ಶಿ ಪಿ.ವಿ.ರಾವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT