ಗುರುವಾರ , ಆಗಸ್ಟ್ 11, 2022
21 °C
ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಶಿರಾಡಿ ಸುರಂಗ ಮಾರ್ಗ ಯೋಜನಾ ವರದಿ ಸಿದ್ಧ, ಮುಂದಿನ ಹಂತದಲ್ಲಿ ಟೆಂಡರ್: ಗಡ್ಕರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Nitin Gadkari

ಮಂಗಳೂರು: ರಾಜ್ಯದ ಪ್ರಮುಖ ಯೋಜನೆಯಾದ ಶಿರಾಡಿ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ರಾಜ್ಯದ ₹10,904 ಕೋಟಿ ಮೊತ್ತದ ವಿವಿಧ ಕಾಮಗಾರಿ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ಆನ್‌ಲೈನ್‌ ಮೂಲಕ ನೆರವೇರಿಸಿ ಅವರು ಮಾತನಾಡಿದರು.

23.63 ಕಿ.ಮೀ. ಉದ್ದದ ಶಿರಾಡಿ ಸುರಂಗ ಮಾರ್ಗವನ್ನು ₹10 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ವಿಸ್ತೃತ ಯೋಜನಾ ವರದಿ ತಯಾರಿಸಿದ್ದು, ಇಲಾಖೆಯಿಂದ ಅನುಮೋದನೆ ನೀಡಲಾಗಿದೆ ಎಂದರು.

ಇದನ್ನೂ ಓದಿ: ಏಳು ಸುರಂಗ, 6 ಸೇತುವೆ ನಿರ್ಮಾಣ

ಶಿರಾಡಿ ಸುರಂಗ ಮಾರ್ಗ ನಿರ್ಮಾಣ ಯೋಜನೆ ಬಹುದಿನಗಳಿಂದ ನನೆಗುದಿಗೆ ಬಿದ್ದಿತ್ತು. ನಾನು ಅಧಿಕಾರ ವಹಿಸಿಕೊಂಡ ದಿನದಿಂದಲೂ ಇದನ್ನು ಪರಿಶೀಲಿಸುತ್ತಿದ್ದೇನೆ. ಅರಣ್ಯ ಕಾಯ್ದೆಯಿಂದಾಗಿ ಸಾಕಷ್ಟು ತೊಂದರೆ ಎದುರಾಗಿತ್ತು. ಅಂತಿಮವಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ವರದಿಯನ್ನು ಆಧರಿಸಿ, ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.


ಶಿರಾಡಿ ಸುರಂಗ ಮಾರ್ಗದ ನೀಲನಕ್ಷೆ

ಈ ಯೋಜನೆಯು ಕರ್ನಾಟಕದ ಅಭಿವೃದ್ಧಿಗೆ ಅಗತ್ಯವಾಗಿದೆ. ಒಟ್ಟು 12.60 ಕಿ.ಮೀ. ಉದ್ದದ ಆರು ಸುರಂಗಗಳು ಹಾಗೂ 1.5 ಕಿ.ಮೀ. ಉದ್ದದ ಏಳು ಸೇತುವೆಗಳು ನಿರ್ಮಾಣವಾಗಲಿವೆ. ಈ ಮಾರ್ಗದಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶವಿದ್ದು, 8.58 ಮೀ. ವಿಸ್ತಾರದ ತುರ್ತು ಮಾರ್ಗವನ್ನು ನಿರ್ಮಾಣ ಮಾಡಲಾಗುವುದು ಎಂದು ವಿವರಿಸಿದರು.

ಗೋವಾ ಗಡಿಯಿಂದ ಕೇರಳ ಗಡಿಯನ್ನು ಸಂಪರ್ಕಿಸುವ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯನ್ನು ₹3,443 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಬೆಲೆಕೇರಿ, ಕಾರವಾರ, ಉಡುಪಿ, ಮಂಗಳೂರು ನಗರಗಳನ್ನು ಸಂಪರ್ಕಿಸುವ 278 ಕಿ.ಮೀ. ಉದ್ದದ ರಸ್ತೆ ಇದಾಗಿದೆ ಎಂದು ಹೇಳಿದರು.

ಮಂಗಳೂರು ಬಂದರಿನಿಂದ ಸರಕು ಸಾಗಣೆಗೆ ಶಿರಾಡಿ ಘಾಟಿ ರಸ್ತೆ ಅವಶ್ಯಕವಾಗಿದೆ. ಇದರ ಜೊತೆಗೆ ಚಾರ್ಮಾಡಿ ಘಾಟಿಯ ಅಭಿವೃದ್ಧಿಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಗೂ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಶಿರಾಡಿ ಸುರಂಗ, ಶಿರಾಡಿ ಘಾಟಿ ಹಾಗೂ ಚಾರ್ಮಾಡಿ ಘಾಟಿಗಳ ಅಭಿವೃದ್ಧಿಯಿಂದ ರಾಜ್ಯದ ಹಾಗೂ ಕರಾವಳಿಯ ಅಭಿವೃದ್ಧಿ ಮತ್ತಷ್ಟು ವೇಗ ಸಿಗಲಿದೆ ಎಂದು ತಿಳಿಸಿದರು.

ಬೆಂಗಳೂರು ರಿಂಗ್ ರಸ್ತೆ, ಸೆಟ್‌ಲೈಟ್ ಟೌನ್‌ ರಿಂಗ್‌ ರಸ್ತೆಗಳನ್ನು ₹10 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ತುಮಕೂರು, ಮೈಸೂರು, ಮಂಗಳೂರು, ಪುಣೆ ಮತ್ತು ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸಲು ಅನುಕೂಲ ಆಗಲಿದೆ ಎಂದರು.

ಬಿ.ಸಿ. ರೋಡ್–ಅಡ್ಡಹೊಳೆ ಹಾಗೂ ಕುಲಶೇಖರ–ಕಾರ್ಕಳ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಶೇ 90 ರಷ್ಟು ಭೂಸ್ವಾಧೀನ ಪೂರ್ಣಗೊಂಡಿದೆ. 3 ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್‌ ತಿಳಿಸಿದರು.


ಆನ್‌ಲೈನ್‌ ಮೂಲಕ ಹೆದ್ದಾರಿ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕರು, ಸಂಸದರು, ಅಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಶಾಸಕರಾದ ಡಾ.ವೈ.ಭರತ್‌ ಶೆಟ್ಟಿ, ಡಿ.ವೇದವ್ಯಾಸ ಕಾಮತ್‌, ರಾಜೇಶ್ ನಾಯ್ಕ್‌, ಪ್ರತಾಪ್‌ಸಿಂಹ ನಾಯಕ್‌, ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಯೋಜನಾಧಿಕಾರಿ ಶಿಶು ಮೋಹನ್‌ ಇದ್ದರು.

ಕೂಳೂರು ಷಟ್ಪಥ ಸೇತುವೆ
ರಾಷ್ಟ್ರೀಯ ಹೆದ್ದಾರಿ 66ರ ಕೂಳೂರಿನಲ್ಲಿ ಹೊಸದಾಗಿ ₹69.02 ಕೋಟಿ ವೆಚ್ಚದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಲಿರುವ 6 ಪಥದ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಶಿಲಾನ್ಯಾಸ ನೆರವೇರಿಸಿದರು.

ಶಿರಾಡಿ ಘಾಟಿಯ 26 ಕಿ.ಮೀ. ಪ್ರದೇಶದಲ್ಲಿ ಭೂಕುಸಿತದಿಂದ ಆಗಿರುವ ಹಾನಿಗೆ ಶಾಶ್ವತ ದುರಸ್ತಿ ಕಾಮಗಾರಿಯನ್ನು ₹36.5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ₹58.84 ಕೋಟಿ ವೆಚ್ಚದಲ್ಲಿ ಸಂಪಾಜೆ ಘಾಟಿಯಲ್ಲಿ ರಸ್ತೆ ಸುರಕ್ಷತಾ ಕಾಮಗಾರಿ, ಕಾಂಕ್ರೀಟ್ ಚರಂಡಿ ನಿರ್ಮಾಣ, ₹19.36 ಕೋಟಿ ವೆಚ್ಚದಲ್ಲಿ ಚಾರ್ಮಾಡಿ ಘಾಟಿಯ 13 ಕಿ.ಮೀ. ರಸ್ತೆಯಲ್ಲಿ ಶಾಶ್ವತ ದುರಸ್ತಿ ಕಾಮಗಾರಿಗೂ ಈ ಸಂದರ್ಭದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು