ಶುಕ್ರವಾರ, ಅಕ್ಟೋಬರ್ 30, 2020
25 °C
ರೈಲು ಮಾರ್ಗದ ಸಾಮರ್ಥ್ಯ ಶೇ 35 ರಷ್ಟು ಹೆಚ್ಚಳ

ಶಿರಾಡಿ ಘಾಟಿಯಲ್ಲಿ ಸಿಗ್ನಲ್‌ ವ್ಯವಸ್ಥೆ ಮೇಲ್ದರ್ಜೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗದ ವತಿಯಿಂದ ಶಿರಾಡಿ ಘಾಟಿ ಪ್ರದೇಶದಲ್ಲಿ ರೈಲ್ವೆ ಮಾರ್ಗದ ಸಿಗ್ನಲ್‌ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಇದರಿಂದ ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲುಗಳ ಸಂಚಾರ ಶೇ 35 ರಷ್ಟು ಹೆಚ್ಚಿಸಲು ಸಾಧ್ಯವಾಗಲಿದೆ.

ಹಾಸನ–ಮಂಗಳೂರು ರೈಲ್ವೆ ಅಭಿವೃದ್ಧಿ ಕಂಪನಿಯು ₹4.4 ಕೋಟಿ ಅನುದಾನ ನೀಡಿದ್ದು, ಮಲ್ಟಿ ಸೆಕ್ಷನ್‌ ಡಿಜಿಟಲ್‌ ಆಕ್ಸಲ್‌ ತಂತ್ರಜ್ಞಾವನ್ನು ಬಳಕೆ ಮಾಡಲಾಗಿದೆ. ಯಡಕುಮೇರಿ ಮತ್ತು ಕಡಗರವಳ್ಳಿ ಮಧ್ಯದ ರೈಲು ಮಾರ್ಗದಲ್ಲಿ ಇದೇ 1 ರಿಂದ ಹೊಸ ವ್ಯವಸ್ಥೆ ಕಾರ್ಯರೂಪಕ್ಕೆ ಬಂದಿದೆ.

‘ರೈಲ್ವೆ ಮಾರ್ಗದ ಸಾಮರ್ಥ್ಯ ಹೆಚ್ಚಳದಿಂದ ಈ ಮಾರ್ಗದಲ್ಲಿ ಹೆಚ್ಚುವರಿ ಪ್ರಯಾಣಿಕ ರೈಲುಗಳನ್ನು ಓಡಿಸಲು ಸಾಧ್ಯವಾಗಲಿದೆ. ಸಮಯದ ಸ್ಪಷ್ಟ ಮಾಹಿತಿ ದೊರೆಯುವುದರಿಂದ ಸರಕು ಸಾಗಣೆ ರೈಲುಗಳ ಓಡಾಟವೂ ಇನ್ನಷ್ಟು ಸುಲಲಿತವಾಗಲಿದೆ. ಹೊಸ ತಂತ್ರಜ್ಞಾನದಿಂದ ಘಾಟಿ ಪ್ರದೇಶದ ರೈಲು ಮಾರ್ಗದಲ್ಲಿ ನಿರ್ವಹಣೆಯ ವೆಚ್ಚವೂ ತಗ್ಗಲಿದೆ’ ಎಂದು ಮೈಸೂರು ವಿಭಾಗೀಯ ಮಹಾಪ್ರಬಂಧಕಿ ಅಪರ್ಣಾ ಗರ್ಗ್‌ ತಿಳಿಸಿದ್ದಾರೆ.

‘ಸಿಗ್ನಲ್‌ ವ್ಯವಸ್ಥೆಯ ಉನ್ನತೀಕರಣ ಕಾಮಗಾರಿಯನ್ನು ಜೂನ್‌ನಲ್ಲಿ ಆರಂಭಿಸಲಾಗಿತ್ತು. ಈ ಮಾರ್ಗದಲ್ಲಿ ಹೊಸ ವ್ಯವಸ್ಥೆ ಇದೀಗ ಸಿದ್ಧವಾಗಿದ್ದು, ಸಕಲೇಶಪುರ–ಸುಬ್ರಹ್ಮಣ್ಯ ರೋಡ್‌ ನಿಲ್ದಾಣಗಳ ನಡುವಿನ ರೈಲು ಸಂಚಾರ ಮತ್ತಷ್ಟು ಸುಗಮ ಆಗಲಿದೆ’ ಎಂದು ತಿಳಿಸಿದ್ದಾರೆ.

‘ರೈಲುಗಳನ್ನು ಪತ್ತೆ ಮಾಡುವುದು ಹಾಗೂ ಅವುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಅತ್ಯಾಧುನಿಕ ತಂತ್ರಜ್ಞಾನದಿಂದ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ಕೋವಿಡ್–19 ಸಂಕಷ್ಟದ ಸಂದರ್ಭದಲ್ಲೂ ಈ ಕಾಮಗಾರಿಯನ್ನು ಸವಾಲಾಗಿ ಸ್ವೀಕರಿಸಲಾಗಿತ್ತು. ಅಲ್ಲದೇ ಈ ಪ್ರದೇಶದಲ್ಲಿ ಸುರಿಯುವ ಧಾರಾಕಾರ ಮಳೆ ಮತ್ತೊಂದು ಸವಾಲಾಗಿತ್ತು’ ಎಂದು ಅಪರ್ಣಾ ಹೇಳಿದ್ದಾರೆ.

‘ಘಾಟಿ ಪ್ರದೇಶದಲ್ಲಿ ಭೂಕುಸಿತದ ಅಪಾಯ ಹೆಚ್ಚಿರುವುದರಿಂದ ಕಾಮಗಾರಿಯ ಸ್ಥಳಕ್ಕೆ ಕೌಶಲ ಹೊಂದಿದ ಕಾರ್ಮಿಕರನ್ನು ಕಳುಹಿಸುವುದು, ಸಾಮಗ್ರಿಗಳ ಪೂರೈಕೆ ಮಾಡುವುದು ಪ್ರಯಾಸದ ಕೆಲಸವಾಗಿತ್ತು. ಕೇಬಲ್‌ ಅಳವಡಿಸಲು ಜಮೀನು ಅಗೆಯುವುದು, ಬಂಡೆಗಳನ್ನು ಒಡೆಯುವುದು ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.