ಮಂಗಳೂರು: ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ ಆರೋಪದ ಮೇಲೆ ಪ್ರಯಾಣಿಕನೊಬ್ಬನನ್ನು ಬಜಪೆ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
‘ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮುಷಾದಿಕ್ ಹುಸಾನ್ (24), ಬಂಧಿತ ಆರೋಪಿ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಅಬುಧಾಬಿಯಿಂದ ಮಂಗಳೂರಿಗೆ ಇಂಡಿಗೊ ವಿಮಾನದಲ್ಲಿ ಶನಿವಾರ ಪ್ರಯಾಣಿಸಿದ್ದ ಆರೋಪಿ ಶೌಚಾಲಯದಲ್ಲಿ ಧೂಮಪಾನ ಮಾಡುವ ಮೂಲಕ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದ. ಈ ಬಗ್ಗೆ ದೂರು ಬಂದಿತ್ತು. ಆರೋಪಿಯು ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಆತನನ್ನು ಬಂಧಿಸಲಾಯಿತು‘ ಎಂದು ಅವರು ಮಾಹಿತಿ ನೀಡಿದರು.