ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಕಳ್ಳಸಾಗಣೆಯಾದ 708 ಗ್ರಾಂ ಚಿನ್ನ ವಶ

Published 9 ನವೆಂಬರ್ 2023, 4:28 IST
Last Updated 9 ನವೆಂಬರ್ 2023, 4:28 IST
ಅಕ್ಷರ ಗಾತ್ರ

ಮಂಗಳೂರು: ದುಬೈನಿಂದ ಬಂದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಪ್ರಯಾಣಿಸಿದ್ದ ಮೂವರು ಪ್ರಯಾಣಿಕರು ಕಳ್ಳಸಾಗಣೆ ಮಾಡಿದ ಒಟ್ಟು 708 ಗ್ರಾಮ ಚಿನ್ನವನ್ನು ಕಸ್ಟಮ್ಸ್‌ ಇಲಾಖೆ ಅಧಿಕಾರಿಗಳು ವಾರದಿಂದ ಈಚೆಗೆ ವಶಪಡಿಸಿಕೊಂಡಿದ್ದಾರೆ. ಅವುಗಳ ಒಟ್ಟು ಮೌಲ್ಯ ₹ 42.90 ಲಕ್ಷ ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಕಸ್ಟಮ್ಸ್‌ ಇಲಾಖೆಯ ಮಂಗಳೂರು ಘಟಕವು ಬುಧವಾರ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿದೆ.

‘ದುಬೈನಿಂದ ನ.5ರಂದು ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರನ್ನು ಲೋಹಶೋಧಕ ಯಂತ್ರದಲ್ಲಿ ತಪಾಸಣೆಗೆ ಒಳಪಡಿಸಿದಾಗ, ಆತನ ಬಳಿ 24 ಕ್ಯಾರೆಟ್‌ ಚಿನ್ನ ಇರುವುದು ಖಚಿತವಾಗಿತ್ತು. ಆತನ ಟ್ರಾಲಿ ಬ್ಯಾಗ್‌ನಲ್ಲಿದ್ದ ಎಕ್ಲ್ಯಾರಿಸ್‌ ಬ್ರಾಂಡ್‌ನ ಏಳು ಚಾಕಲೇಟ್‌ ಪೊಟ್ಟಣಗಳನ್ನು ತಪಾಸಣೆಗೆ ಒಳಪಡಿಸಿದ್ದೆವು. ಅದರಲ್ಲಿ ಚಿನ್ನದ ಬಣ್ಣದ ಹುಡಿಯನ್ನು ಬೇರೆ ರಾಸಾಯನಿಕ ಸಂಯುಕ್ತದ ಜೊತೆ ಬೆರೆಸಿ, ಅದನ್ನು ಬೆಳ್ಳಿ ಬಣ್ಣದ ಪೊಟ್ಟಣದಲ್ಲಿ ಚಾಕೊಲೆಟ್‌ಗಳ ನಡುವೆ ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಅದರಿಂದ ಒಟ್ಟು 420 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯವನ್ನು ₹ 25.49 ಲಕ್ಷ ಎಂದು ಅಂದಾಜಿಸಲಾಗಿದೆ’ ಎಂದು ಕಸ್ಟಮ್ಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅ.31ರಂದು ಮತ್ತು ನ.2ರಂದು ಪ್ರಯಾಣಿಸಿದ್ದ ಇಬ್ಬರು ಪ್ರಯಾಣಿಕರು ಒಳ ಉಡುಪುಗಳ ಮೂಲಕ ಚಿನ್ನ ಕಳ್ಳಸಾಗಣೆ ಮಾಡಿದ್ದರು.  ಒಬ್ಬ ಪ್ರಯಾಣಿಕ ಒಳ ಉಡುಪಿನ ಎರಡು ಪದರಗಳ ನಡುವೆ ಚಿನ್ನದ ಪೇಸ್ಟ್‌ ಅನ್ನು ಪ್ಲಾಸ್ಟಿಕ್‌ ಪೊಟ್ಟಣದಲ್ಲಿ ತುಂಬಿ ಕಳ್ಳಸಾಗಣೆ ಮಾಡಿದ್ದ. ಇನ್ನೊಬ್ಬ ವ್ಯಕ್ತಿ ಸಾಕ್ಸ್‌ನ ಎರಡು ಪದರಗಳ ನಡುವೆ ಚಿನ್ನದ ಪೇಸ್ಟ್‌ ಇದ್ದ ಪೊಟ್ಟಣ ಅಡಗಿಸಿಟ್ಟಿದ್ದ. ಜೊತೆಗೆ ಒಂದು ಚಿನ್ನದ ಸರವನ್ನು ಪ್ಯಾಂಟಿನಲ್ಲಿ ಸಾಗಿಸಿದ್ದ. ಈ ಇಬ್ಬರು ಆರೋಪಿಗಳಿಂದ ಒಟ್ಟು 288 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ ₹ 17.40 ಲಕ್ಷ ಎಂದು ಅಂದಾಜಿಸಲಾಗಿದೆ’ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT