ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಕ್ರಿಸ್‌ಮಸ್‌: ಅಲಂಕಾರಕ್ಕೆ ಹತ್ತಾರು ‘ಚಾಯ್ಸ್‌’

ಡಿಸೆಂಬರ್ ಮೊದಲ ವಾರದಲ್ಲೇ ವ್ಯಾಪಾರ ಆರಂಭ; ಗೋದಲಿ, ನಕ್ಷತ್ರ, ಟ್ರೀ, ಸ್ಟನ್ಸಿಲ್‌ಗೆ ಬೇಡಿಕೆ
Published 8 ಡಿಸೆಂಬರ್ 2023, 6:47 IST
Last Updated 8 ಡಿಸೆಂಬರ್ 2023, 6:47 IST
ಅಕ್ಷರ ಗಾತ್ರ

ಮಂಗಳೂರು: ಕ್ರಿಸ್‌ಮಸ್ ಟ್ರೀ ಮತ್ತು ನಕ್ಷತ್ರಗಳಿಗೆ ಬಗೆಬಗೆಯ ಬಣ್ಣಗಳು, ಯೇಸುಕ್ರಿಸ್ತನ ಜನನ ಸಂಭ್ರಮ ಬಿಂಬಿಸುವ ಗೋದಲಿಯಲ್ಲಿ ಕುರಿ, ಬಾಲ ಯೇಸು, ಮೇರಿ, ರಾಜನ ವೈವಿಧ್ಯಮಯ ಚಿತ್ರಣ, ಬೆಲ್‌ ಮತ್ತು ಸ್ಟೆನ್ಸಿಲ್‌ಗಳ ಮಾಯಾಲೋಕ...

ನಗರದ ಹಂಪನಕಟ್ಟೆ, ಮಿಲಾಗ್ರಿಸ್ ಚರ್ಚ್‌ ಮುಂತಾದ ಕಡೆಗಳಲ್ಲಿ ಡಿಸೆಂಬರ್ ಮೊದಲ ವಾರದಲ್ಲೇ ಕ್ರಿಸ್‌ಮಸ್‌ಗೆ ಸಂಬಂಧಿಸಿದ ಆಲಂಕಾರಿಕ ವಸ್ತುಗಳ ಮಾರಾಟದ ಮಳಿಗೆಗಳಲ್ಲಿ ವಿವಿಧ ಆಕೃತಿಗಳಲ್ಲಿ ಮತ್ತು ಬಗೆಬಗೆಯ ಆಕಾರಗಳಲ್ಲಿ ಕಾಣಸಿಗುವ ಈ ವಸ್ತುಗಳ ಹಿಂದೆ ಮಾರುಕಟ್ಟೆ ಲೋಕದ ಸಿಹಿಯೂ ಅಡಕವಾಗಿದೆ. 

ಕ್ರಿಸ್‌ಮಸ್‌ ಜಗತ್ತಿನೆಲ್ಲೆಡೆ ಖುಷಿ ಹಬ್ಬುವ ಹಬ್ಬ. ಈ ಸಂತೋಷಕ್ಕೆ ಸೊಗಸು ತುಂಬಿಸುವುದು ಆಲಂಕಾರಿಕ ವಸ್ತುಗಳು. ಚರ್ಚ್‌ಗಳು ಮತ್ತು ಕ್ರೈಸ್ತ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿ ಇರುವ ಮಂಗಳೂರಿನಲ್ಲಿ ಈ ವರ್ಷ ಕ್ರಿಸ್‌ಮಸ್‌ಗೆ ಮೂರು ವಾರಗಳು ಇರುವಾಗಲೇ ವ್ಯಾಪಾರ ಜೋರಾಗಿದೆ. ಫಳ್ನಿರ್ ರಸ್ತೆಯಲ್ಲಿ ಇರುವ ಕ್ರೈಸ್ತ ಧರ್ಮಕ್ಕೆ ಸಂಬಂಧಪಟ್ಟ ವಸ್ತುಗಳ ಮಾರಾಟದ ದೊಡ್ಡ ಮಳಿಗೆಗಳಲ್ಲಿ ಬೈಬಲ್‌, ಮೂರ್ತಿ ಇತ್ಯಾದಿಗಳನ್ನು ಒಳಗೆ ಇರಿಸಿ ಈಗ ಕ್ರಿಸ್‌ಮಸ್‌ ಆಲಂಕಾರಿಕ ವಸ್ತುಗಳನ್ನು ಮುನ್ನೆಲೆಗೆ ತರಲಾಗಿದೆ.

ಜೆರೋಸಾ ಕಂಪನಿ, ಮಂಗಳೂರು ಸ್ಟೋರ್ಸ್, ಶೆಟ್ಟಿ ಟ್ರೇಡರ್ಸ್ ಮತ್ತು ಮಿಲಾಗ್ರಿಸ್ ಕಂಪನಿ ಮುಂತಾದ ಮಳಿಗೆಗಳಲ್ಲಿ ದಿನವಿಡೀ ವ್ಯಾಪಾರ ಜೋರು. ಬೆಂಗಳೂರು, ತಮಿಳುನಾಡಿನ ಬೇರೆ ಬೇರೆ ಕಡೆಯಿಂದ, ಕೋಲ್ಕತ್ತ ಮಹಾನಗರದಿಂದ, ಕೇರಳದ ಕೊಲ್ಲಂ ಮತ್ತಿತರ ಕಡೆಗಳಿಂದ ಇಲ್ಲಿಗೆ ಉತ್ಪನ್ನಗಳು ಬರುತ್ತವೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ನೆರೆಯ ಕಾಸರಗೋಡು ಮುಂತಾದ ಕಡೆಗಳಿಗೆ ವಸ್ತುಗಳನ್ನು ಸಾಗಿಸುವ ವ್ಯವಸ್ಥೆ ಇದೆ. ಹೀಗಾಗಿ ಸ್ಪೀಡ್ ಪೋಸ್ಟ್‌ಗೆ ಪ್ಯಾಕಿಂಗ್ ಮಾಡುವುದರಲ್ಲೂ ಕೆಲವು ಕಾರ್ಮಿಕರು ಬ್ಯುಸಿಯಾಗಿದ್ದಾರೆ. 

ಪ್ರತಿ ಬಾರಿಯೂ ಹೊಸತು

ಧಾರ್ಮಿಕವಾಗಿ ಕ್ರಿಸ್‌ಮಸ್ ಆಚರಣೆಯಲ್ಲಿ ಬದಲಾವಣೆಗಳು ಇಲ್ಲದಿದ್ದರೂ ಅಲಂಕಾರ ಪ್ರತಿ ಬಾರಿಯೂ ಹೊಸತನದಿಂದ ಕೂಡಿರುತ್ತದೆ. ಹೀಗಾಗಿ ಹೊಸ ಬಗೆಯ ವಸ್ತುಗಳನ್ನು ಖರೀದಿಸಲು ಜನರು ಬಯಸುತ್ತಾರೆ. ಗೋದಲಿಯ ಸೆಟ್‌ ಕೋಲ್ಕತ್ತ ಮತ್ತು ತಮಿಳುನಾಡಿನಿಂದ ಹೆಚ್ಚು ಬರುತ್ತದೆ. ಆವೆಮಣ್ಣು, ಪಾಲಿ ಮಾರ್ಬಲ್‌, ಪ್ಲಾಸ್ಟರ್‌ ಆಫ್ ಪ್ಯಾರೀಸ್ ಮುಂತಾದವುಗಳಿಂದ ಗೋದಲಿ ತಯಾರಿಸಲಾಗುತ್ತದೆ. ಪಾಲಿ ಮಾರ್ಬಲ್‌ ಬಳಸಿದ್ದಕ್ಕೆ ₹ 500ರಿಂದ ₹ 80 ಸಾವಿರದ ವರೆಗೆ ಬೆಲೆ ಇದೆ. 

ನಕ್ಷತ್ರಗಳು ತರಹೇವಾರಿ ಮಾದರಿಗಳಲ್ಲಿ ಸಿಗುತ್ತವೆ. ಪ್ಲಾಸ್ಟಿಕ್‌, ಪೇಪರ್‌ ಮತ್ತು ಬೆಳಕಿನ ವಿನ್ಯಾಸ ಇರುವ ‘ಸ್ಟಾರ್‌’ಗಳು ಮಳಿಗೆಗಳಲ್ಲಿ ಕಂಗೊಳಿಸುತ್ತಿವೆ. ಇವು ₹ 60ರಿಂದ ₹ 700ರ ದರದಲ್ಲಿ ಮಾರಾಟ ಆಗುತ್ತಿವೆ.

‘ಈ ವರ್ಷ ಡಿಸೆಂಬರ್ ಆರಂಭದಲ್ಲೇ ವ್ಯಾಪಾರ ಶುರುವಾಗಿದೆ. ಕೆಲವರು ಬಂದು ವಿನ್ಯಾಗಳನ್ನು ನೋಡಿ ಹೋಗುತ್ತಾರೆ. ಕೆಲವರು ಕೊನೆಯ ವರೆಗೆ ಕಾಯದೆ ಈಗಲೇ ಖರೀದಿ ಮಾಡುತ್ತಾರೆ. ಹಿಂದಿನ ಬಾರಿ ಬಳಸಿದ್ದನ್ನು ಮತ್ತೆ ಬಳಸುವವರೂ ಇದ್ದಾರೆ. ಆದರೆ ಬಹುತೇಕ ಜನರು ಹೊಸದನ್ನೇ ಇಷ್ಟಪಡುತ್ತಾರೆ. ಹೀಗಾಗಿ ಈಗಲೇ ಖರೀದಿ ಜೋರಾಗಿ ನಡೆಯುತ್ತಿದೆ’ ಎನ್ನುತ್ತಾರೆ ಜೆರೋಸಾ ಕಂಪನಿಯ ವ್ಯವಸ್ಥಾಪಕ ವಿಲ್ಸನ್ ಫೆರ್ನಾಂಡಿಸ್.

ಕ್ರಿಸ್‌ಮಸ್ ಟ್ರೀಯಲ್ಲೂ ನಾನಾ ಬಗೆ ಇದೆ. ಅಮೆರಿಕನ್ ಟ್ರೀ, ಪೈನ್ ಟ್ರೀ, ಆಪ್ಟಿಕಲ್ ಟ್ರೀ, ಸಾಧಾರಣ ಟ್ರೀ, ಬೆಳಕಿನ ವರ್ಣವೈವಿಧ್ಯ ಹೊಂದಿರುವ ಆಪ್ಟಿಕಲ್ ಟ್ರೀ ಇತ್ಯಾದಿಗಳಿಗೆ ಬೇಡಿಕೆ ಹೆಚ್ಚು.

ಕ್ರಿಸ್‌ಮಸ್ ಸಂಭ್ರಮದಲ್ಲಿ ಎಲ್ಲ ಧರ್ಮದವರೂ ಭಾಗಿಯಾಗುತ್ತಾರೆ. ಕಚೇರಿ ವಾಣಿಜ್ಯ ಮಳಿಗೆ ಹೋಟೆಲ್‌ ಮತ್ತಿತರ ಕಡೆಗಳಲ್ಲಿ ಹಬ್ಬದ ಆಚರಣೆ ನಡೆಯುತ್ತದೆ. ಅಲ್ಲೆಲ್ಲ ಆಲಂಕಾರಿಕ ವಸ್ತುಗಳು ಅಗತ್ಯ.
–ವಿಲ್ಸನ್ ಫೆರ್ನಾಂಡಿಸ್ ಜೆರೋಸಾ, ಕಂಪನಿಯ ವ್ಯವಸ್ಥಾಪಕ

ಪ್ರಮುಖ ಸಾಮಗ್ರಿ ಮತ್ತು ಬೆಲೆ

4 ಇಂಚು ಗೋದಲಿ ಸೆಟ್‌–₹ 550–600

5 ಇಂಚು ಗೋದಲಿ ಸೆಟ್‌–₹ 750

6 ಇಂಚು ಗೋದಲಿ ಸೆಟ್‌–₹ 850

8 ಇಂಚು ಗೋದಲಿ ಸೆಟ್‌–₹ 1435

ಮೇರಿ ಮಾತೆ ಮೂರ್ತಿ–₹ 85

ಮಣ್ಣಿನ ಕುರಿ ಮಾದರಿ–₹ 50

ಬಾಲಯೇಸು–₹ 40

ಪಾಲಿಸ್ಟರ್‌ ಕುರಿ ಮಾದರಿ–₹ 140

ಜಿಂಕೆ ಮಾದರಿ–₹ 10

ಆವರಣ ಇರುವ ಗೋದಲಿ ₹ 300–₹ 1220

ಆಲಂಕಾರಿಕ ವಸ್ತುಗಳು–₹300

ಬೆಲ್‌ಗಳು–₹ 50ರಿಂದ ₹2500

ಸ್ಟನ್ಸಿಲ್‌ (ಹಾರ)–₹ 20-70

ಮಂಗಳೂರಿನ ಜೆಮ್ ಆ್ಯಂಡ್ ಕಂಪನಿಯಲ್ಲಿ ಮಾರಾಟಕ್ಕಿಟ್ಟಿರುವ ಕ್ರಿಸ್‌ಮಸ್ ಸಾಮಗ್ರಿಗಳು
ಮಂಗಳೂರಿನ ಜೆಮ್ ಆ್ಯಂಡ್ ಕಂಪನಿಯಲ್ಲಿ ಮಾರಾಟಕ್ಕಿಟ್ಟಿರುವ ಕ್ರಿಸ್‌ಮಸ್ ಸಾಮಗ್ರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT