ಚಾವಣಿಯಿಂದ ವಿದ್ಯುತ್ ಉತ್ಪಾದನೆ

7
ದಕ್ಷಿಣ ರೈಲ್ವೆಯಿಂದ 25 ನಿಲ್ದಾಣಗಳಲ್ಲಿ ಸೌರ ವಿದ್ಯುತ್ ಪ್ಯಾನೆಲ್ ಅಳವಡಿಕೆ

ಚಾವಣಿಯಿಂದ ವಿದ್ಯುತ್ ಉತ್ಪಾದನೆ

Published:
Updated:
Deccan Herald

ಮಂಗಳೂರು: ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಇದೀಗ ರೈಲ್ವೆ ಇಲಾಖೆಯೂ ಸೌರ ವಿದ್ಯುತ್‌ ಉತ್ಪಾದಿಸಲು ಮುಂದಾಗಿದೆ. ನಗರದ ಮಂಗಳೂರು ಸೆಂಟ್ರಲ್‌ ಹಾಗೂ ಜಂಕ್ಷನ್‌ ನಿಲ್ದಾಣಗಳ ಪೈಕಿ ಒಂದರಲ್ಲಿ ಸೌರ ಫಲಕಗಳನ್ನು ಅಳವಡಿಸಲು ಯೋಜನೆ ರೂಪಿಸಿದೆ.

ಈ ಭಾಗದಲ್ಲಿ ಸಾಕಷ್ಟು ಬಿಸಿಲು ಇರುವುದರಿಂದ ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಅನುಕೂಲವಿದೆ. ಅಲ್ಲದೇ ವಿಸ್ತಾರವಾದ ಪ್ಲಾಟ್‌ಫಾರಂ ಲಭ್ಯವಿದೆ. ಇದನ್ನು ಬಳಸಿಕೊಂಡು, ವಿದ್ಯುತ್‌ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಕಾರ್ಯೋನ್ಮುಖವಾಗಿದೆ.

ನೈರುತ್ಯ ರೈಲ್ವೆ ವಲಯದ ನಾಲ್ಕು ನಿಲ್ದಾಣಗಳಲ್ಲಿ ಈಗಾಗಲೇ ಸೌರ ವಿದ್ಯುತ್ ಉತ್ಪಾದನೆ ಆರಂಭವಾಗಿದ್ದು, ಇದೇ ಮಾದರಿಯಲ್ಲಿ ದಕ್ಷಿಣ ರೈಲ್ವೆಯೂ ತನ್ನ ವ್ಯಾಪ್ತಿಯ 25 ನಿಲ್ದಾಣಗಳ ಪ್ಲಾಟ್‌ ಫಾರಂನಲ್ಲಿ ಸೌರ ಫಲಕಗಳನ್ನು ಅಳವಡಿಸುತ್ತಿದೆ.

ತಲಾ ನಾಲ್ಕು ಮೆಗಾ ವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕಗಳನ್ನು ಹಾಕಲಾಗುತ್ತಿದ್ದು, ಇದರಿಂದ ರೈಲ್ವೆ ನಿಲ್ದಾಣದಲ್ಲಿನ ವಿದ್ಯುತ್‌ ಬಳಕೆಯನ್ನು ಪೂರೈಸಲು ಸಾಧ್ಯವಾಗಲಿದೆ. ಇದರ ಜತೆಗೆ ಇನ್ನೂ 48 ನಿಲ್ದಾಣಗಳಲ್ಲಿ ಸೌರ ಫಲಕ ಅಳವಡಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಲಾಗುತ್ತಿದೆ.

10 ಕಿಲೋವಾಟ್ ಸಾಮರ್ಥ್ಯದ ಸೌರ ಫಲಕಗಳನ್ನು ಅಳವಡಿಸಲು ₹7.3 ಲಕ್ಷ ವೆಚ್ಚ ತಗುಲಲಿದ್ದು, ಇದರಿಂದ ವಾರ್ಷಿಕ ₹1.16 ಲಕ್ಷದಷ್ಟು ವಿದ್ಯುತ್ ಬಿಲ್‌ ಉಳಿತಾಯ ಆಗಲಿದೆ. ಈಗಾಗಲೇ ಚೆನ್ನೈ, ಎಗ್ಮೋರ್‌ ನಿಲ್ದಾಣಗಳಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ವಿದ್ಯುತ್ ಉತ್ಪಾದನೆ ಆರಂಭಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಮಹಾಪ್ರಬಂಧಕ ಆರ್‌.ಕೆ. ಕುಲಶ್ರೇಷ್ಠ ಹೇಳುತ್ತಾರೆ.

ಸೌರ ಫಲಕಗಳ ಅಳವಡಿಕೆಗೆ ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿರುವ ರೈಲ್ವೆ ಇಲಾಖೆ, ಆಯ್ದ ನಿಲ್ದಾಣದಲ್ಲಿ ಸೂಕ್ತ ಸ್ಥಳಾವಕಾಶ ನೀಡಬೇಕಿದೆ. ಕಂಪನಿಯೇ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಅಳವಡಿಸಲಿದೆ. ಮುಂದಿನ 25 ವರ್ಷಗಳವರೆಗೆ ಸೋಲಾರ್ ವಿದ್ಯುತ್ ಉತ್ಪಾದನೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಕಂಪನಿಯೇ ಮಾಡಲಿದೆ. ನಂತರ ರೈಲ್ವೆ ಇಲಾಖೆ, ಈ ಘಟಕವನ್ನು ತನ್ನ ಸುಪರ್ದಿಗೆ ಪಡೆಯಲಿದೆ.

ಸೌರ ವಿದ್ಯುತ್ ಉತ್ಪಾದನೆಯ ಜತೆಗೆ ವಿದ್ಯುತ್ ಉಳಿತಾಯದ ನಿಟ್ಟಿನಲ್ಲಿ ದಕ್ಷಿಣ ರೈಲ್ವೆ ಗಮನ ನೀಡುತ್ತಿದೆ. ನಿಲ್ದಾಣಗಳಲ್ಲಿ ಎಲ್‌ಇಡಿ ಬಲ್ಬ್‌ಗಳು, ಬಿಎಲ್‌ಡಿಸಿ ಫ್ಯಾನ್‌ಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ಎಲ್ಲ ನಿಲ್ದಾಣಗಳಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಇದರಿಂದಲೂ ವಿದ್ಯುತ್ ಉಳಿತಾಯ ಮಾಡಿದಂತಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು
ತಿಳಿಸಿದ್ದಾರೆ.

ಕ್ಯೂಆರ್ ಕೋಡ್‌ ಆಧರಿತ ಟಿಕೆಟ್‌

ಹೊಸ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುತ್ತಿರುವ ದಕ್ಷಿಣ ರೈಲ್ವೆ ಇದೀಗ ಕ್ಯೂಆರ್‌ ಕೋಡ್ ಆಧರಿತ ಟಿಕೆಟ್‌ ಬುಕಿಂಗ್‌ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ.

ಭಾರತೀಯ ರೈಲ್ವೆಯೊಂದಿಗೆ ನೋಂದಣಿ ಮಾಡಿಕೊಳ್ಳುವ ಪ್ರಯಾಣಿಕರು, ಪ್ರಯಾಣದ ಸ್ಥಳವನ್ನು ಭರ್ತಿ ಮಾಡುವ ಮೂಲಕ ಮುಂಗಡ ಟಿಕೆಟ್‌ ಅನ್ನು ಕ್ಯೂಆರ್‌ ಕೋಡ್‌ ರೂಪದಲ್ಲಿ ತಮ್ಮ ಮೊಬೈಲ್‌ನಲ್ಲಿ ಪಡೆದುಕೊಳ್ಳಬಹುದು. ಈ ಕ್ಯೂಆರ್ ಕೋಡ್‌ ಅನ್ನು ರೈಲು ನಿಲ್ದಾಣಗಳಲ್ಲಿ ಸ್ಕ್ಯಾನ್‌ ಮಾಡಲಾಗುತ್ತದೆ. ಟಿಕೆಟ್‌ ತಪಾಸಣೆ ಮಾಡುವವರಿಗೂ ಕ್ಯೂಆರ್ ಕೋಡ್‌ ಸ್ಕ್ಯಾನ್‌ ಮಾಡುವ ಯಂತ್ರಗಳನ್ನು ಒದಗಿಸಲಾಗುತ್ತಿದ್ದು, ಈ ಮೂಲಕ ಟಿಕೆಟ್‌ಗಳ ಪರಿಶೀಲನೆ ಮಾಡಬಹುದು.

ಇದಕ್ಕೆ ಪೂರಕವಾಗಿ ದಕ್ಷಿಣ ರೈಲ್ವೆ ‘ರೈಲ್ ಪಾರ್ಟನರ್’ ಎನ್ನುವ ಮೊಬೈಲ್‌ ಆ್ಯಪ್‌ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !