ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಮತ್ತೊಮ್ಮೆ ಕಾಂಗ್ರೆಸ್ ಭದ್ರಕೋಟೆಯಾಗಲಿದೆ: ಪದ್ಮರಾಜ್ ಆರ್. ಪೂಜಾರಿ

ಕಾವಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪದ್ಮರಾಜ್
Published 17 ಏಪ್ರಿಲ್ 2024, 13:45 IST
Last Updated 17 ಏಪ್ರಿಲ್ 2024, 13:45 IST
ಅಕ್ಷರ ಗಾತ್ರ

ಪುತ್ತೂರು: ‘ದಕ್ಷಿಣ ಕನ್ನಡ ಜಿಲ್ಲೆ ನಾಲ್ಕು ದಶಕಗಳ ಕಾಲ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಈ ಬಾರಿ ಕಾಂಗ್ರೆಸ್ ಗೆಲ್ಲುವ ಸೂಚನೆ ಸ್ಪಷ್ಟವಾಗಿದ್ದು, ಮತ್ತೊಮ್ಮೆ ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್‌ ಭದ್ರಕೋಟೆಯಾಗಿ ಬದಲಾಗಲಿದ’ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.

ಪುತ್ತೂರು ತಾಲ್ಲೂಕಿನ ಮಾಡ್ನೂರು ಗ್ರಾಮದ ಕಾವು ಎಂಬಲ್ಲಿ  ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಗೆಲುವಿನ ಸೂಚನೆ ಸಿಗುತ್ತಿದ್ದಂತೆ ಬಿಜೆಪಿಗರು ಅಪಪ್ರಚಾರಶುರು ಮಾಡಿದ್ದಾರೆ. ಇದಕ್ಕೆ ಎದೆಗುಂದುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರಿಗೆ ತಿಳಿಸಿ. ಖಂಡಿತಾ ಮತದಾರರು ನಮ್ಮ ಕಡೆ ಒಲವು ತೋರಿಸುತ್ತಾರೆ’ ಎಂದರು.

‘ಯಾವುದೇ ಕಾರಣಕ್ಕೂ  ದ್ವೇಷದ ರಾಜಕೀಯ ಮಾಡುವ ಅಗತ್ಯವಿಲ್ಲ. ಹಿಂದುತ್ವದ ಬಗ್ಗೆ ಮಾತನಾಡುವವರು ನಾವು ಮಾಡಿರುವಷ್ಟು ಧಾರ್ಮಿಕ, ಸಾಮಾಜಿಕ ಕೆಲಸಗಳನ್ನು ಮಾಡಿಲ್ಲ. ಬರಿ ಅಪಪ್ರಚಾರದಿಂದ ಅಧಿಕಾರ ಪಡೆದುಕೊಂಡಿದ್ದಾರೆ. ಇದೀಗ ದೈವಗಳಿಗೆ ನ್ಯಾಯ ಕೊಡಿಸುವ ಮಾತನ್ನೂ ಆಡುತ್ತಿದ್ದಾರೆ’ ಎಂದರು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ‘ನಾನು ಹಿಂದೂ ಎಂದು ಧೈರ್ಯವಾಗಿ ಹೇಳುತ್ತೇನೆ. ನಕಲಿ ಹಿಂದೂಗಳಂತೆ ನಾವಲ್ಲ. ಇವರ ಮುಂದೆ ನನ್ನನ್ನು ಮತ್ತು ಪದ್ಮರಾಜ್ ಅವರನ್ನು ತುಲನೆ ಮಾಡಿ ನೋಡಿ. ನಾವು ಮಾಡಿರುವಷ್ಟು ಧಾರ್ಮಿಕ ಕೆಲಸವನ್ನು ಅವರು ಮಾಡಿಲ್ಲ. ನಾವು ಧಾರ್ಮಿಕ, ಸಾಮಾಜಿಕ ಕೆಲಸಗಳ ಜತೆಗೆ ಅಭಿವೃದ್ಧಿ ವಿಚಾರವಾಗಿ ಹೋಗುತ್ತೇವೆ. ಉದ್ಯೋಗ ಸೃಷ್ಟಿಗೆ ಪ್ರಯತ್ನ ಮಾಡುತ್ತೇವೆ ಎಂದರು.

ಕಾಂಗ್ರೆಸ್‌ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ಉಸ್ತುವಾರಿ ಬಿ.ರಮಾನಾಥ ರೈ ಮಾತನಾಡಿ, ‘ಜಿಲ್ಲೆಗೆ ಅಭಿವೃದ್ಧಿಯ ಕೊಡುಗೆ ನೀಡಿರುವುದು ಕಾಂಗ್ರೆಸ್ ಪಕ್ಷದ ಸಂಸದರು. ಹಾಗಾಗಿ ಮತ್ತೊಮ್ಮೆ ಕಾಂಗ್ರೆಸ್ ಸಂಸದರಾಗಿ, ಬಡವರ ಬಗ್ಗೆ ಕಾಳಜಿ ಹೊಂದಿರುವ ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೆಲ್ಲಿಸಬೇಕು’ ಎಂದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿದರು. ಗೋವಿಂದ ಮಣಿಯಾಣಿ ಮಡ್ಯಂಗಳ, ಕಿರಣ್ ಗೌಡ ಮಡ್ಯಂಗಳ, ಶಶಿಕಿರಣ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ, ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಹಿಳಾ ಉಸ್ತುವಾರಿ ಅನಿತಾ ಹೇಮನಾಥ ಶೆಟ್ಟಿ, ಪಕ್ಷದ ಮುಖಂಡರಾದ ಮಹಮ್ಮದ್ ಬಡಗನ್ನೂರು, ಭಾಸ್ಕರ್ ಕೋಡಿಂಬಾಳ, ವಿಜಯ್ ಕುಮಾರ್ ಸೊರಕೆ, ಎ.ಕೆ.ಜಯರಾಮ ರೈ, ಎಂ.ಪಿ. ಅಬೂಬಕ್ಕರ್, ವಲಯ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಬಲ್ಯಾಯ, ಅಜೀಜ್ ಬುಶ್ರಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT