ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನ ಪರಿಷತ್: ಮೇಲ್ಮನೆ ಪ್ರವೇಶಿಸುವವರು ಯಾರು–ಉತ್ತರಕ್ಕೆ ಕಾತರ

ನೈರುತ್ಯ ಶಿಕ್ಷಕರ ಕ್ಷೇತ್ರ, ನೈರುತ್ಯ ಪದವೀಧರರ ಕ್ಷೇತ್ರ– ಮತ ಎಣಿಕೆ ಇಂದು
Published 6 ಜೂನ್ 2024, 6:36 IST
Last Updated 6 ಜೂನ್ 2024, 6:36 IST
ಅಕ್ಷರ ಗಾತ್ರ

ಮಂಗಳೂರು: ಬಿಜೆಪಿ ಹಾಗೂ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆಯಿಂದಾಗಿ ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಪದವೀಧರರ ಕ್ಷೇತ್ರಗಳ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಈ ಎರಡೂ ಕ್ಷೇತ್ರಗಳ ಮತ ಎಣಿಕೆ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ನಡೆಯಲಿದೆ.

ನೈರುತ್ಯ ಶಿಕ್ಷಕರ ಕ್ಷೇತ್ರದ ಎಂಟು ಹಾಗೂ ನೈರುತ್ಯ ಪದವೀಧರ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಾಶಸ್ತ್ಯದ ಮತಗಳ ಆಧಾರದಲ್ಲಿ ಎಣಿಕೆ ನಡೆಯಲಿದೆ. ಕಣದಲ್ಲಿರುವ ಯಾವುದೇ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ನಿಗದಿತ ಪ್ರಮಾಣದಷ್ಟು ಮತ ಪಡೆದು ಜಯ ಗಳಿಸದೇ ಹೋದರೆ, ಎರಡನೇ ಪ್ರಾಶಸ್ತ್ರ್ಯದ ಮತಗಳನ್ನು ಎಣಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಫಲಿತಾಂಶ ಪ್ರಕಟಣೆ ವಿಳಂಬವಾಗುವ ಸಾಧ್ಯತೆ ಇದೆ.

ಡಾ.ಧನಂಜಯ ಸರ್ಜಿ ಅವರಿಗೆ ನೈರುತ್ಯ ಪದವೀಧರರ ಕ್ಷೇತ್ರದ ಟಿಕೆಟ್‌ ನೀಡಿರುವುದಕ್ಕೆ ಪಕ್ಷದ ಆಂತರಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್‌ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ಬಂಡಾಯವನ್ನು ಮೆಟ್ಟಿ ಸರ್ಜಿ ಗೆಲ್ಲುತ್ತಾರೆಯೇ ಎಂಬುದು ಕುತೂಹಲ ಸೃಷ್ಟಿಸಿದೆ.

ಕಾಂಗ್ರೆಸ್‌ ಈಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿರುವ, ಆಯನೂರು ಮಂಜುನಾಥ್ ಅವರಿಗೆ ಮಣೆ ಹಾಕಿದೆ. ಅವರು ಈ ಕ್ಷೇತ್ರವನ್ನು ಹಿಂದಿನ ಅವಧಿಯಲ್ಲಿ ಬಿಜೆಪಿಯಿಂದ ಗೆದ್ದು ಪ್ರತಿನಿಧಿಸಿದ್ದರು. ಬಳಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆಯನೂರು ಮಂಜುನಾಥ್‌ ಎದುರು ಕಳೆದ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್‌ನ ಎಸ್‌.ಪಿ ದಿನೇಶ್‌ ಪದವೀಧರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಆ ಪಕ್ಷದ ಪಾಲಿಗೂ ನುಂಗಲಾರದ ತುತ್ತಾಗಿದೆ. ಇಬ್ಬರು ಪ್ರಭಾವಿಗಳ ಬಂಡಾಯ ಈ ಚುನಾವಣೆ ಫಲಿತಾಂಶದ ಕುತೂಹಲ ಹೆಚ್ಚಿಸಿದೆ. 

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ –ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಎಸ್‌.ಎಲ್‌.ಭೋಜೇಗೌಡ ಕಣದಲ್ಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಸೋಲಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಅಂಶವು ಅವರು ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಸೆಳೆಯುವುದಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಮಂಗಳೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್‌ ಸದಸ್ಯ ಎಸ್‌.ಆರ್‌.ಹರೀಶ ಆಚಾರ್ಯ ಅವರು ಪಕ್ಷದ ಈ ನಿರ್ಧಾರಕ್ಕೆ ಸೆಡ್ಡು ಹೊಡೆದು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಹಾಗಾಗಿ ಈ ಕ್ಷೇತ್ರದ ಚುನಾವಣೆಯೂ ರಂಗು ಪಡೆದಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಳೆದ ಸಲ ಅಭ್ಯರ್ಥಿಯಾಗಿದ್ದ ಕೆ.ಕೆ. ಮಂಜುನಾಥ್ ಕುಮಾರ್‌ ಈ ಸಲವೂ ಆ ಪಕ್ಷದ ಅಭ್ಯರ್ಥಿ.

ಈ ಎರಡೂ ಕ್ಷೇತ್ರಗಳಲ್ಲಿ ಹಿಂದಿನಿಂದಲೂ ಬಿಜೆಪಿಯದೇ ಪ್ರಾಬಲ್ಯವಿತ್ತು. ಕಾಂಗ್ರೆಸ್‌ ಈ ಚುನಾವಣೆಯನ್ನು ಅಷ್ಟು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಪ್ರಸ್ತುತ ಮೇಲ್ಮನೆಯಲ್ಲಿ ಬಹುಮತ ಹೊಂದಿಲ್ಲದ ಕಾಂಗ್ರೆಸ್‌ ಈ ಸಲ ಶತಾಯ ಗತಾಯ ಈ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಪ್ರಯತ್ನ ನಡೆಸಿದೆ.  ಹಾಗಾಗಿ ಈ ಸಲ ಚುನಾವಣೆಯ ಕಣ ರಂಗೇರಿದೆ. ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳ ಪ್ರತಿನಿಧಿಯಾಗುವ ಅವಕಾಶ ಯಾರಿಗೆ ಒಲಿಯಲಿದೆ ಎಂಬುದು ತಿಳಿಯಲು ‌ಮತ ಎಣಿಕೆ ಮುಗಿಯುವವರೆಗೆ ಕಾಯಬೇಕಿದೆ.

ಅಭ್ಯರ್ಥಿಗಳು

ನೈರುತ್ಯ ಶಿಕ್ಷಕರ ಕ್ಷೇತ್ರ: ಎಸ್.ಎಲ್.ಭೋಜೆಗೌಡ (ಜೆಡಿಎಸ್‌), ಕೆ.ಕೆ. ಮಂಜುನಾಥ್ ಕುಮಾರ್ (ಕಾಂಗ್ರೆಸ್‌) ಪಕ್ಷೇತರರು: ಅರುಣ್ ಹೊಸಕೊಪ್ಪ, ನರೇಶ್ಚಂದ್ ಹೆಗ್ಡೆ, ನಂಜೇಶ್ ಬೆಣ್ಣೂರು, ಭಾಸ್ಕರಶೆಟ್ಟಿ.ಟಿ, ಕೆ.ಕೆ.ಮಂಜುನಾಥ್ ಕುಮಾರ್, ಎಸ್.ಆರ್.ಹರೀಶ್ ಆಚಾರ್ಯ

ನೈರುತ್ಯ ಪದವೀಧರರ ಕ್ಷೇತ್ರ: ಆಯನೂರು ಮಂಜುನಾಥ್‌ (ಕಾಂಗ್ರೆಸ್), ಡಾ.ಧನಂಜಯ ಸರ್ಜಿ (ಬಿಜೆಪಿ) ಜಿ.ಸಿ.ಪಾಟೀಲ್, (ಸರ್ವ ಜನತಾ ಪಾರ್ಟಿ), ಪಕ್ಷೇತರರು: ದಿನಕರ ಉಳ್ಳಾಲ್, ಎಸ್.ಪಿ. ದಿನೇಶ್, ಬಿ.ಮಹಮ್ಮದ್ ತುಂಬೆ, ಕೆ. ರಘುಪತಿ ಭಟ್, ಶೇಕ್ ಬಾವ ಮಂಗಳೂರು, ಷಡಾಕ್ಷರಪ್ಪ ಜಿ.ಆರ್, ಷಹಾರಾಜ್ ಮುಜಾಹಿದ್ ಸಿದ್ದಿಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT