ಸೋಮವಾರ, ಮಾರ್ಚ್ 27, 2023
29 °C
ಅರ್ಜಿ ವಿಲೇವಾರಿಗೆ ವಿಶೇಷ ಅಭಿಯಾನ

ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ವಿಶೇಷ ಶಿಬಿರ: ಸಿದ್ದಲಿಂಗೇಶ

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮೆಟ್ರಿಕ್ ನಂತರದ ಹಾಗೂ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಸಲ್ಲಿಸಿರುವ ಅರ್ಜಿಗಳು, ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ನೀಡುವ ಬಹುಮಾನ, ಅಂತರ್ಜಾತಿ ವಿವಾಹಕ್ಕೆ ಸಂಬಂಧಿಸಿದ ಪ್ರೋತ್ಸಾಹಧನ ವಿತರಣೆಯ ಅರ್ಜಿಗಳ ವಿಲೇವಾರಿಗೆ ವಿಶೇಷ ಅಭಿಯಾನ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ನ.17 ರವರೆಗೆ ಈ ಅಭಿಯಾನ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಿಂಗಳಾಂತ್ಯದವರೆಗೆ ನಡೆಯಲಿದೆ. ಶಿಷ್ಯ ವೇತನಕ್ಕೆ ಅರ್ಜಿ ಸಲ್ಲಿಸುವ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುವುದು. ಅಗತ್ಯಬಿದ್ದರೆ ಕಾಲೇಜುಗಳಲ್ಲಿಯೇ ವಿಶೇಷ ಶಿಬಿರ ನಡೆಸುವ ಚಿಂತನೆ ಇದೆ ಎಂದರು.

ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ಯೋಜನೆಯಡಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 60 ರಿಂದ 75 ಅಂಕ ಪಡೆದ ವಿದ್ಯಾರ್ಥಿಗಳು ₹7 ಸಾವಿರ, ಶೇ 75ಕ್ಕಿಂತ ಹೆಚ್ಚಿನ ಅಂಕ ಪಡೆದವರು ₹15 ಸಾವಿರ ಪ್ರೋತ್ಸಾಹ ಧನ ಪಡೆಯಲಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ₹20 ಸಾವಿರ, ಪದವಿ ವಿದ್ಯಾರ್ಥಿಗಳು ₹25ಸಾವಿರ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ₹30ಸಾವಿರ ಹಾಗೂ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳು ₹35ಸಾವಿರ ಪ್ರೋತ್ಸಾಹಧನ ಪಡೆಯಲಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಫ್ರೀಶಿಪ್‌ ಕಾರ್ಡ್‌: ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡಲಾಗುವ ಶಿಷ್ಯವೇತನ ವಿತರಣೆಯಲ್ಲಿ ವಿಳಂಬವಾಗುತ್ತಿದ್ದು, ಇದರಿಂದ ತೊಂದರೆ ಆಗುವುದನ್ನು ತಪ್ಪಿಸಲು ವಿದ್ಯಾರ್ಥಿಗಳಿಗೆ ಫ್ರೀ ಶಿಪ್‌ ಕಾರ್ಡ್‌ಗಳನ್ನು ಈ ಶೈಕ್ಷಣಿಕ ವರ್ಷದಿಂದ ವಿತರಿಸಲಾಗುತ್ತಿದೆ ಎಂದು ಸಿದ್ದಲಿಂಗೇಶ ತಿಳಿಸಿದರು.

ವಿದ್ಯಾರ್ಥಿಗಳ ಶುಲ್ಕ ಪಾವತಿಗೆ ಈ ಕಾರ್ಡ್ ಸರ್ಕಾರದ ಠೇವಣಿಯಾಗಲಿದ್ದು, ಈ ಕಾರ್ಡ್‌ ಹೊಂದಿರುವ ವಿದ್ಯಾರ್ಥಿಗಳಿಂದ ಶಿಕ್ಷಣ ಸಂಸ್ಥೆಗಳು ಶುಲ್ಕ ವಸೂಲಿ ಮಾಡುವಂತಿಲ್ಲ. ಸರ್ಕಾರವೇ ಆ ವಿದ್ಯಾರ್ಥಿಗಳ ಶುಲ್ಕವನ್ನು ಶಿಕ್ಷಣ ಸಂಸ್ಥೆಗಳಿಗೆ ಪಾವತಿಸಲಿದೆ ಎಂದರು.

ವಿದ್ಯಾರ್ಥಿ ಪ್ರವೇಶ ಪಡೆಯುತ್ತಿದ್ದಂತೆಯೇ ಸರ್ಕಾರವು ಈ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳ ಆಧಾರ ಜೋಡಣೆಯಾದ ಬ್ಯಾಂಕ್‌ ಖಾತೆಗೆ ಶಿಷ್ಯವೇತನದ ಹಣವನ್ನು ಹಾಕಲಿದೆ. ಅದನ್ನು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ಪಾವತಿಸಬಹುದು ಎಂದು ತಿಳಿಸಿದರು.

ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತ

ಕೋವಿಡ್–19 ನಿಂದಾಗಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. 19 ಮೆಟ್ರಿಕ್‌ ಪೂರ್ವ ಸೇರಿದಂತೆ ಇಲಾಖೆಯ 30 ಹಾಸ್ಟೆಲ್‌ಗಳಿದ್ದು, 2,244 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಆ ಪೈಕಿ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ಗಳಲ್ಲಿ ಸದ್ಯಕ್ಕೆ 1,375 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದು ಸಿದ್ದಲಿಂಗೇಶ ಹೇಳಿದರು.

ಈ ವೇಳೆಗೆ ಶೇ 80 ರಷ್ಟು ಸೀಟ್‌ಗಳು ಭರ್ತಿ ಆಗುತ್ತಿದ್ದವು. ಅದರಲ್ಲಿ ಶೇ 60 ರಷ್ಟು ಉತ್ತರ ಕರ್ನಾಟಕದ ವಿದ್ಯಾರ್ಥಿಗಳೇ ಇರುತ್ತಿದ್ದರು. ಆದರೆ ಈ ವರ್ಷ ಉತ್ತರ ಕರ್ನಾಟಕದ ಶೇ 40 ರಷ್ಟು ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು