ಮಂಗಳೂರು: ತನ್ಮಯ್ ಮತ್ತು ಧಾರುಣ್ ಅವರ ಅಮೋಘ ಆಟದ ಬಲದಿಂದ ಮಣಿಪಾಲದ ಮಾಹೆ ತಂಡ ಆರ್.ಎಲ್.ಜೈಪುರಿಯಾ ಸ್ಮಾರಕ ಬ್ಯಾಸ್ಕೆಟ್ಬಾಲ್ ಟೂರ್ನಿಯ ಪುರುಷರ ವಿಭಾಗದ ಲೀಗ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು. ಮಹಿಳಾ ವಿಭಾಗದಲ್ಲಿ ನಿಟ್ಟೆ ಕ್ಯಾಂಪಸ್ ತಂಡ ಗೆದ್ದು ಸಂಭ್ರಮಿಸಿತು.
ಐಎಲ್ಜಿ ಕ್ರೌನ್ ಕಂಪನಿಯ ಸಹಯೋಗದಲ್ಲಿ ಮಂಗಳೂರು ಬ್ಯಾಸ್ಕೆಟ್ಬಾಲ್ ಕ್ಲಬ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯು.ಎಸ್.ಮಲ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಟೂರ್ನಿಯ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಮಾಹೆ 45–11ರಲ್ಲಿ ಕೆನರಾ ಪಿಯು ಕಾಲೇಜು ತಂಡದ ವಿರುದ್ಧ ಗೆದ್ದಿತು. ಮೊದಲಾರ್ಧದಲ್ಲಿ 27–4ರ ಮುನ್ನಡೆ ಸಾಧಿಸಿದ್ದ ಮಾಹೆ ದ್ವಿತೀಯಾರ್ಧದಲ್ಲೂ ಪ್ರಭಾವಿ ಆಟವಾಡಿತು. ತನ್ಮಯ್ 18 ಮತ್ತು ಧಾರುಣ್ 12 ಪಾಯಿಂಟ್ ಕಲೆಹಾಕಿದರು.
ಮಹಿಳೆಯರ ವಿಭಾಗದ ಲೀಗ್ ಪಂದ್ಯದಲ್ಲಿ ನಿಟ್ಟೆ ಕ್ಯಾಂಪಸ್ 54–23ರಲ್ಲಿ ಸೇಂಟ್ ಅಲೋಶಿಯಸ್ ಪಿಯು ಕಾಲೇಜು ತಂಡವನ್ನು ಮಣಿಸಿತು. ದಿವ್ಯಾ 12 ಪಾಯಿಂಟ್ ಗಳಿಸಿ ನಿಟ್ಟೆ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೇಂಟ್ ಅಲೋಶಿಯಸ್ ಪರ ಆ್ಯಶ್ಲಿನ್ 10 ಪಾಯಿಂಟ್ ಗಳಿಸಿದರು.
ಪುರುಷರ ಮತ್ತೊಂದು ಲೀಗ್ ಪಂದ್ಯದಲ್ಲಿ ಸೇಂಟ್ ಜೋಸೆಫ್ಸ್ ಎಂಜಿನಿಯರಿಂಗ್ ಕಾಲೇಜು ತಂಡ 34–24ರಲ್ಲಿ ಸುರತ್ಕಲ್ನ ಎನ್ಐಟಿಕೆ ವಿರುದ್ಧ ಗೆದ್ದಿತು. ಜೋಸೆಫ್ಸ್ ಪರ ಆಲ್ದೆನ್ 14 ಪಾಯಿಂಟ್ ಕಲೆ ಹಾಕಿದರು.
ಬೆಳಿಗ್ಗೆ ನಡೆದ ಹೈಸ್ಕೂಲ್ ಬಾಲಕರ ವಿಭಾಗದ ಲೀಗ್ ಪಂದ್ಯಗಳಲ್ಲಿ ಬೆಂಗಳೂರಿನ ಸೇಂಟ್ ಪೀಟರ್ಸ್ ಶಾಲೆ ತಂಡ ನಗರದ ಮೌಂಟ್ ಕಾರ್ಮೆಲ್ ‘ಬಿ’ ವಿರುದ್ಧ 18–7ರಲ್ಲಿ ಜಯ ಗಳಿಸಿತು. ಸೇಂಟ್ ಅಲೋಶಿಯಸ್ ಗೊನ್ಜಾಗ ವಿರುದ್ಧ ಪ್ರೆಸಿಡೆನ್ಸಿ 25–14ರಲ್ಲಿ, ಮೌಂಟ್ ಕಾರ್ಮೆಲ್ ‘ಎ’ ಮೌಂಟ್ ಕಾರ್ಮೆಲ್ ‘ಬಿ’ ವಿರುದ್ಧ 29–12ರಲ್ಲಿ ಜಯ ಗಳಿಸಿತು.
ಬಾಲಕಿಯರ ವಿಭಾಗದಲ್ಲಿ ನಿಟ್ಟೆ ಸ್ಕೂಲ್ 24–2ರಲ್ಲಿ ಸೇಂಟ್ ಆ್ಯಗ್ನೆಸ್ ವಿರುದ್ಧ ಗೆಲುವು ದಾಖಲಿಸಿತು. ಪ್ರಾಥಮಿಕ ಶಾಲೆ ಬಾಲಕಿಯರ ವಿಭಾಗದಲ್ಲಿ ನಿಟ್ಟೆ ಸ್ಕೂಲ್ 17–5ರಲ್ಲಿ ಬೆಂಗಳೂರಿನ ಸೇಂಟ್ ಪೀಟರ್ಸ್ ವಿರುದ್ಧ, ಮೌಂಟ್ ಕಾರ್ಮೆಲ್ ಕೇಂದ್ರೀಯ ವಿದ್ಯಾಲಯ 18–5ರಲ್ಲಿ ಸೇಂಟ್ ಆ್ಯಗ್ನೆಸ್ ವಿರುದ್ಧ, ಬಾಲಕರ ವಿಭಾಗದಲ್ಲಿ ಪ್ರೆಸಿಡೆನ್ಸಿ ಸ್ಕೂಲ್ 14–5ರಲ್ಲಿ ಮೌಂಟ್ ಕಾರ್ಮೆಲ್ ಎದುರು ಜಯ ಗಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.