ಬಜಪೆ: ‘ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ರೈತರ ಪರ ಎಂದು ಭಾಷಣದಲ್ಲಿ ಹೇಳುತ್ತಿದ್ದಾರೆ. ಆದರೆ, 440 ಕೆ.ವಿ. ವಿದ್ಯುತ್ ಮಾರ್ಗವನ್ನು ತಡೆಯುತ್ತಿಲ್ಲ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲಗುತ್ತು ಆರೋಪಿಸಿದರು.
ಪಡುಬಿದ್ರಿಯಿಂದ ಕಾಸರಗೋಡಿಗೆ ವಿದ್ಯುತ್ ಸರಬರಾಜು ಮಾಡುವ ಉದ್ದೇಶಿತ 440 ಕೆ.ವಿ. ಸಾಮಾರ್ಥ್ಯದ ವಿದ್ಯುತ್ ಮಾರ್ಗದ ವಿರುದ್ಧ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕುಪ್ಪೆಪದವಿನಲ್ಲಿ ಗುರುವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಏಳಿಂಜೆ ಹೋರಾಟ ಸಮಿತಿಯ ಸುಕೇಶ್ಚಂದ್ರ ಮಾತನಾಡಿ, ಒಗ್ಗಟ್ಟಾಗಿ ಹೋರಾಟ ಮಾಡಿದರೆ ವಿದ್ಯುತ್ ಮಾರ್ಗವನ್ನು ತಡೆಯಲು ಸಾಧ್ಯವಿದೆ ಎಂದರು.
ಇನ್ನಾ ಹೋರಾಟ ಸಮಿತಿಯ ಚಂದ್ರಶೇಖರ ಶೆಟ್ಟಿ, ವಿಟ್ಲ ಹೋರಾಟ ಸಮಿತಿಯ ರಾಜೀವ ಗೌಡ, ರೈತ ಸಂಘದ ಬಂಟ್ವಾಳ ತಾಲ್ಲೂಕು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ರೈತ ಸಂಘದ ಸಲಹೆಗಾರ ಮುರುವ ಮಹಾಬಲ ಭಟ್ ಮಾತನಾಡಿದರು.
ಸ್ಥಳಕ್ಕೆ ಬಂದ ಕುಪ್ಪೆಪದವು ಪಿಡಿಒ ಸವಿತಾ ಮಂದೊಲಿಕರ್, ಮುತ್ತೂರು ಪಿಡಿಒ ಪ್ರಮೋದ್ ನಾಯ್ಕ್ ಮನವಿ ಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ತಲುಪಸಿಲಾಗುವುದು ಎಂದು ತಿಳಿಸಿದರು.
ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಸಿರು ಸೇನೆಯ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ದಯಾನಂದ ಶೆಟ್ಟಿ ಕುಳವೂರು ಸ್ವಾಗತಿಸಿ, ಹಸಿರು ಸೇನೆಯ ಸಂಚಾಲಕ ಶೇಖ್ ಅಬ್ದುಲ್ಲಾ ವಂದಿಸಿದರು.