ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

SSLC Result 2024: ಎರಡನೇ ಸ್ಥಾನಕ್ಕೆ ಜಿಗಿದ ದಕ್ಷಿಣ ಕನ್ನಡ ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 92.12 ಫಲಿತಾಂಶ, ಬಾಲಕಿಯರ ಮೇಲುಗೈ
Published 9 ಮೇ 2024, 13:56 IST
Last Updated 9 ಮೇ 2024, 13:56 IST
ಅಕ್ಷರ ಗಾತ್ರ

ಮಂಗಳೂರು: ಈ ಬಾರಿಯ ಎಸ್‌ಎಸ್‌ಎಲ್‌ಸಿ–1ರ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನಕ್ಕೆ‌‌ ಜಿಗಿದಿದೆ.  ಜಿಲ್ಲೆಯ ಒಟ್ಟು ಫಲಿತಾಂಶ ಶೇ 92.12ರಷ್ಟಾಗಿದೆ.

ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 29,701 ವಿದ್ಯಾರ್ಥಿಗಳಲ್ಲಿ 27,360 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ ಒಟ್ಟು 15,848 ಬಾಲಕರಲ್ಲಿ 14,012 ಬಾಲಕರು, 13,853 ಬಾಲಕಿಯರಲ್ಲಿ 13,348 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಬಾಲಕರ ತೇರ್ಗಡೆ ಪ್ರಮಾಣ ಶೇ 88.41ರಷ್ಟಾದರೆ, ಬಾಲಕಿಯರ ಪ್ರಮಾಣ ಶೇ 96.35ರಷ್ಟಾಗಿದ್ದು, ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

ಶೂನ್ಯ ಫಲಿತಾಂಶ ಇಲ್ಲ: ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳ ಒಟ್ಟು 9,997 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 8,615 ಜನರು ಉತ್ತೀರ್ಣರಾಗಿದ್ದಾರೆ. ಶೇ 86.18 ಸಾಧನೆಯಾಗಿದೆ. ಅನುದಾನಿತ ಪ್ರೌಢಶಾಲೆಗಳ ಒಟ್ಟು 8,043 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 7,429 ಜನರು ಉತ್ತೀರ್ಣರಾಗಿದ್ದಾರೆ. ಶೇ 92.37 ಸಾಧನೆಯಾಗಿದೆ. ಅನುದಾನರಹಿತ ಪ್ರೌಢಶಾಲೆಗಳ ಒಟ್ಟು 11,661 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 11,316 ಜನರು ಉತ್ತೀರ್ಣರಾಗಿದ್ದಾರೆ. ಶೇ 97.04 ಸಾಧನೆಯಾಗಿದೆ.

ಕನ್ನಡ ಮಾಧ್ಯಮದಲ್ಲೂ ಬಾಲಕಿಯರೇ ಮುಂದು: ಜಿಲ್ಲೆಯಲ್ಲಿ ಒಟ್ಟು 14,470 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದು, 12,984 ಮಂದಿ ಉತ್ತೀರ್ಣರಾಗಿ, ಶೇ 89.73ರಷ್ಟು ಸಾಧನೆಯಾಗಿದೆ. ಬಾಲಕರಲ್ಲಿ ತೇರ್ಗಡೆಯಾದವರ ಪ್ರಮಾಣ ಶೇ 85.01 ಇದ್ದರೆ, ಬಾಲಕಿಯರಲ್ಲಿ ಶೇ 94.94ರಷ್ಟು ಇದೆ.

ಇಂಗ್ಲಿಷ್ ಮಾಧ್ಯಮದಲ್ಲಿ 15,231 ಮಂದಿ ಪರೀಕ್ಷೆ ಬರೆದಿದ್ದು, 14,376 ಮಂದಿ ತೇರ್ಗಡೆಯಾಗಿದ್ದಾರೆ. ಒಟ್ಟು ಶೇ 94.39ರಷ್ಟು ಸಾಧನೆಯಾಗಿದೆ. ಬಾಲಕರಲ್ಲಿ ತೇರ್ಗಡೆಯಾದವರ ಪ್ರಮಾಣ ಶೇ 91.55 ಇದ್ದರೆ, ಬಾಲಕಿಯರಲ್ಲಿ ಶೇ 97.75ರಷ್ಟು ಇದೆ. 

ಗ್ರಾಮೀಣರ ಸಾಧನೆ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದವರಲ್ಲಿ ಗ್ರಾಮೀಣ ಪ್ರದೇಶದ ಶೇ 92.46 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ನಗರ ಪ್ರದೇಶದಲ್ಲಿ ಶೇ 91.59 ಮಂದಿ ತೇರ್ಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ಶಾಲೆಯಲ್ಲೂ ಶೂನ್ಯ ಫಲಿತಾಂಶ ದಾಖಲಾಗಿಲ್ಲ. 84 ಸರ್ಕಾರಿ ಪ್ರೌಢಶಾಲೆಗಳು, 36 ಅನುದಾನಿತ, 150 ಅನುದಾನರಹಿತ ಶಾಲೆಗಳು ಸೇರಿ ಒಟ್ಟು 270 ಪ್ರೌಢಶಾಲೆಗಳು ಶೇ 100ರ ಫಲಿತಾಂಶ ದಾಖಲಿಸಿವೆ. ಬಂಟ್ವಾಳ ಬ್ಲಾಕ್‌ನಲ್ಲಿ 95, ಬೆಳ್ತಂಗಡಿ 76, ಮಂಗಳೂರು ಉತ್ತರ 96, ಮಂಗಳೂರು ದಕ್ಷಿಣ 105, ಮೂಡುಬಿದಿರೆ 29, ಪುತ್ತೂರು 79, ಸುಳ್ಯ 36 ಸೇರಿದಂತೆ ಒಟ್ಟು 516 ಶಾಲೆಗಳು ‘ಎ‘ ಗ್ರೇಡ್ ದಾಖಲಿಸಿವೆ. ಒಂಬತ್ತು ಶಾಲೆಗಳು ‘ಬಿ’ ಗ್ರೇಡ್, ಎರಡು ಶಾಲೆಗಳು ‘ಸಿ’ ಗ್ರೇಡ್ ದಾಖಲಿಸಿವೆ.

ಕಳೆದ ಸಾಲಿನಲ್ಲಿ ‘ಸಿ’ ಗ್ರೇಡ್ ಮತ್ತು ‘ಬಿ’ ಗ್ರೇಡ್ ದಾಖಲಿಸಿದ್ದ ಶಾಲೆಗಳನ್ನು ಗುರುತಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ಶಾಲೆಗಳ ಬಗ್ಗೆ ವಿಶೇಷ ಗಮನ ಹರಿಸಿತ್ತು. ತಂಡ ರಚಿಸಿ, ಪ್ರತಿ ಶಾಲೆಗೆ ಭೇಟಿ ನೀಡಿ, ಸಮಸ್ಯೆ ಆಲಿಸಿತ್ತು.

ಕಳೆದ ವರ್ಷ ಜಿಲ್ಲೆಯ ಒಟ್ಟು ಫಲಿತಾಂಶ ‌ ಶೇ 89.47 ಆಗಿದ್ದು, ರಾಜ್ಯದಲ್ಲಿ 17ನೇ ಸ್ಥಾನದಲ್ಲಿತ್ತು. 2022ರಲ್ಲಿ ಜಿಲ್ಲೆ 20ನೇ ಸ್ಥಾನದಲ್ಲಿತ್ತು.

ಬುದ್ಧಿವಂತರ ಜಿಲ್ಲೆ ಎನಿಸಿಕೊಳ್ಳುವ ದಕ್ಷಿಣ ಕನ್ನಡವು ಪ್ರತಿಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹತ್ತಕ್ಕಿಂತ ಮೇಲಿನ ಸ್ಥಾನದಲ್ಲಿ ಇರುತ್ತದೆ. ಪಿಯುಸಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವ ಜಿಲ್ಲೆಗೆ, ಎಸ್‌ಎಸ್‌ಎಲ್‌ಸಿಯಲ್ಲಿ ಈ ಸಾಧನೆ ಸಾಧ್ಯವಾಗುತ್ತಿಲ್ಲ, ವರ್ಷದಿಂದ ವರ್ಷಕ್ಕೆ ಸಾಧನೆಯ ಮಟ್ಟ ಕುಸಿಯುತ್ತಿದೆ ಎಂಬ ಸಾರ್ವತ್ರಿಕ ಆರೋಪ ಇತ್ತು. ಈ ಬಾರಿ ಈ ಆರೋಪದಿಂದ ಜಿಲ್ಲೆ ಮುಕ್ತವಾಗಿದೆ.

‘ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚು ಪಾರದರ್ಶಕವಾಗಿ ಪರೀಕ್ಷೆ ನಡೆಯುತ್ತದೆ. ಪ್ರತಿವರ್ಷವೂ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದರು. ಆದರೂ, ರಾಜ್ಯ ಮಟ್ಟದಲ್ಲಿ ಜಿಲ್ಲೆಯ ಸ್ಥಾನ ಕುಸಿಯುವುದು ಶಿಕ್ಷಕರಾಗಿ ನಮಗೆ ಬೇಸರ ಮೂಡಿಸುತ್ತಿತ್ತು. ಈ ಬಾರಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ರಾಜ್ಯದಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಪರೀಕ್ಷೆ ಪ್ರಕ್ರಿಯೆಯನ್ನು ವೆಬ್‌ ಕಾಸ್ಟಿಂಗ್ ಮಾಡಿತ್ತು. ಇದರಿಂದ ನಮ್ಮ ಜಿಲ್ಲೆಗೆ ನ್ಯಾಯ ದೊರೆತಿದೆ’ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಸಹಕಾರಿಯಾದ ವೆಬ್ ಕಾಸ್ಟಿಂಗ್’

ಮುಖ್ಯ ಶಿಕ್ಷಕರು ಸಹ ಶಿಕ್ಷಕರ ನಿರಂತರ ಪ್ರಯತ್ನ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಆರಂಭದಿಂದಲೇ ತರಬೇತಿ ನೀಡಿರುವುದು ವಿಷಯ ಪರಿಣಿತ ಶಿಕ್ಷಕರು ವಿಶೇಷ ಮಾರ್ಗದರ್ಶನ ನೀಡಿರುವುದು ಫಲಿತಾಂಶ ಹೆಚ್ಚಳಕ್ಕೆ ಪೂರಕವಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾರದರ್ಶಕವಾಗಿ ನಡೆಸಲು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ವೆಬ್ ಕಾಸ್ಟಿಂಗ್ ಪ್ರಯೋಗ ಮಾಡಲಾಗಿತ್ತು. ಮಕ್ಕಳು ಯಾವುದೇ ಆತಂಕ ಇಲ್ಲದೆ ಪರೀಕ್ಷೆ ಬರೆದಿದ್ದರು. ಇದು ಕೂಡ ಜಿಲ್ಲೆಯ ಉತ್ತಮ ಸ್ಥಾನ ಪಡೆಯಲು ಸಹಕಾರಿಯಾಗಿದೆ ಎಂದು ಡಿಡಿಪಿಐ ವೆಂಕಟೇಶ ಎಸ್‌. ಪಟಗಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಡಿಮೆ ಅಂಕ ಪಡೆದಿದ್ದೇ ಇಲ್ಲ’

ಜಿಲ್ಲೆಯ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. 625ಕ್ಕೆ 624 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ‘ಬಾಲ್ಯದಿಂದಲೂ ಚಿನ್ಮಯ್ ಕಲಿಕೆಯಲ್ಲಿ ಮುಂದು. ಓದುವುದನ್ನು ಪ್ರೀತಿಸುವ ಆತನ ಅಕ್ಷರವೂ ಸುಂದರ ಉತ್ತರ ಪತ್ರಿಕೆಯಲ್ಲಿ ಬರವಣಿಗೆಯೂ ಅಷ್ಟೇ ಅಚ್ಚುಕಟ್ಟು. ಪರೀಕ್ಷೆಯಲ್ಲಿ ಒಮ್ಮೆಯೂ ಕಡಿಮೆ ಅಂಕ ಪಡೆದಿದ್ದೇ ಇಲ್ಲ. ಎಲ್ಲ ಪರೀಕ್ಷೆಗಳಲ್ಲೂ ಪೂರ್ಣ ಅಂಕ ಪಡೆಯುತ್ತಿದ್ದ. ಹೀಗಾಗಿ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸ್ಥಾನ ಪಡೆಯುವ ನಿರೀಕ್ಷೆ ಇತ್ತು’ ಎಂದು ಮಗನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು ಗಣೇಶ ರಾಮಚಂದ್ರ ಭಟ್. ‘ಶಿಕ್ಷಕರ ಶ್ರಮದ ಜೊತೆ ಸ್ವಂತ ಶ್ರಮದಿಂದ ಚಿನ್ಮಯ್ ಸಾಧನೆ ಮಾಡಿದ್ದಾನೆ. ಆತ ಯಾವುದೇ ಟ್ಯೂಷನ್ ಹೋಗಿಲ್ಲ. ನಮ್ಮ ಶಾಲೆಗೆ ಕೀರ್ತಿ ತರುತ್ತಾನೆ ಎಂಬ ಭರವಸೆ ಇತ್ತು’ ಎಂದು ಎಸ್‌ಡಿಎಂ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಹೇಮಲತಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ವಿಜ್ಞಾನ ವಿಷಯ ಆಯ್ದುಕೊಂಡು ಎಂಜಿನಿಯುರ್ ಆಗುವ ಕನಸಿದೆ’ ಎಂದು ಚಿನ್ಮಯ್ ಹೇಳಿದರು. ಈತ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮೇಲಿನ ಖರ್ವಾದವರಾದ ಪ್ರಸ್ತುತ ಬೆಳ್ತಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿರುವ ಗಣೇಶ ರಾಮಚಂದ್ರ ಭಟ್ ಮತ್ತು ಕಲ್ಮಂಜ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕಿ ಮಾಲಿನಿ ಹೆಗಡೆ ದಂಪತಿ ಪುತ್ರ.

ಇಂಗ್ಲಿಷ್ ಮಾಧ್ಯಮ:

ಗರಿಷ್ಠ ಅಂಕ ಪಡೆದವರು ಹೆಸರು;ಶಾಲೆ;ಅಂಕ ಚಿನ್ಮಯ್ ಜಿಕೆ;ಎಸ್‌ಡಿಎಂ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಬೆಳ್ತಂಗಡಿ;624 ಅಭಿಷೇಕ್ ಆರ್ ಹನಮಂತಗೌಡರ್;ಸೇಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಮಂಗಳೂರು;622 ಗೌತಮ್ ಎಂ;ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ ಬಂಟ್ವಾಳ;621 ಶ್ರೇಯಾ;ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಪುತ್ತೂರು;621 ಮನೋನ್ಮಯಿ ಕೆ;ವಿಠ್ಠಲ ಜೈಸೀಸ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಬಂಟ್ವಾಳ;620 ಅಭಿರಾಮ್ ವಿ.ಭಟ್;ಎಸ್‌ವಿಎಸ್‌ ಟೆಂಪಲ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಬಂಟ್ವಾಳ;620 ಅಕ್ಷಯಾ ಮಲ್ಯ;ಕೆನರಾ ಪ್ರೌಢಶಾಲೆ ಮಂಗಳೂರು;620 ಭಾರ್ಗವಿ ಮಯ್ಯ ಯುಎನ್;ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಮಂಗಳೂರು;620 ತ್ರಿಷಾ ಎಸ್‌;ಶ್ರೀ ರಾಮಕೃಷ್ಣ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ;620 ಆದಿತ್ಯ ಆರ್. ಪುಣಿಂಚಿತ್ತಾಯ;ಎಕ್ಸಲೆಂಟ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಮೂಡುಬಿದಿರೆ;620 ಬಾಲಾಜಿ;ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಪುತ್ತೂರು;620 ಪ್ರಣಮ್ಯ ಎನ್. ಆಳ್ವ;ರೋಟರಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಸುಳ್ಯ;620

ಕನ್ನಡ ಮಾಧ್ಯಮ:

ಗರಿಷ್ಠ ಅಂಕ ಪಡೆದವರು ಹೆಸರು;ಶಾಲೆ;ಅಂಕ ತನುಶ್ರೀ;ಸರ್ಕಾರಿ ಪ್ರೌಢಶಾಲೆ ಕಲ್ಮಂಜ ಬೆಳ್ತಂಗಡಿ;617 ಋತುರಾಜ್;ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಮೂಡುಬಿದಿರೆ;617 ನಮಿತಾ ಮರಿಯಾ ಕ್ಯಾಸ್ತಲಿನೊ;ಸರ್ಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಸುಳ್ಯ;617 ಮುರುಗೇಶ್ ಬಿರಾದಾರ್ ಪಾಟೀಲ;ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಮೂಡುಬಿದಿರೆ;616 ತ್ರಿಷಾ;ಶ್ರೀರಾಮ ಪ್ರೌಢಶಾಲೆ ಸುಲಕೇರಿ ಬೆಳ್ತಂಗಡಿ;615 ಸೌಜನ್ಯಾ ರೈ;ಕೆಪಿಎಸ್ ಕೆಯ್ಯೂರು ಪುತ್ತೂರು;615 ಭೂಷಣ್;ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಬಂಟ್ವಾಳ;614 ಮನ್ಮಿತಾ;ಸರ್ಕಾರಿ ಪ್ರೌಢಶಾಲೆ ಕಡೇಶಿವಾಲಯ ಬಂಟ್ವಾಳ;614 ಮಲ್ಲಿಕಾರ್ಜುನ ಮಠಪತಿ;ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಮೂಡುಬಿದಿರೆ;614 ಗೋಪಾಲ ಕೆಂಚಪ್ಪ ಸುಣಧೋಳಿ;ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಮೂಡುಬಿದಿರೆ;614

ಬ್ಲಾಕ್‌ವಾರು ಫಲಿತಾಂಶ

ಬ್ಲಾಕ್‌;ಶೇಕಡವಾರು ಫಲಿತಾಂಶ ಪುತ್ತೂರು;94.47 ಮೂಡುಬಿದಿರೆ;94.27 ಬೆಳ್ತಂಗಡಿ;94.18 ಸುಳ್ಯ;92.43 ಮಂಗಳೂರು ದಕ್ಷಿಣ;91.59 ಮಂಗಳೂರು ಉತ್ತರ;90.81 ಬಂಟ್ವಾಳ;89.79

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT