ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಟಾಕ್ ಟ್ರೇಡಿಂಗ್‌: ಆನ್‌ಲೈನ್‌ನಲ್ಲಿ ₹ 16.32 ಲಕ್ಷ ವಂಚನೆ

Published 20 ಆಗಸ್ಟ್ 2024, 5:37 IST
Last Updated 20 ಆಗಸ್ಟ್ 2024, 5:37 IST
ಅಕ್ಷರ ಗಾತ್ರ

ಸುರತ್ಕಲ್‌: ಸ್ಟಾಕ್ ಟ್ರೇಡಿಂಗ್‌ ವ್ಯವಹಾರದಲ್ಲಿ ಲಾಭ ಗಳಿಸುವ ಆಸೆ ತೋರಿಸಿ ಆನ್‌ಲೈನ್‌ನಲ್ಲಿ ₹ 16.32 ಲಕ್ಷ ವಂಚನೆ ಮಾಡಿದ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದು ಸುರತ್ಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಜೂನ್ 16ರಂದು ಗೂಗಲ್‌ನಲ್ಲಿ ವಿವಿಧ ಕಂಪನಿಗಳ ಸ್ಟಾಕ್ ಮಾರ್ಕೆಟ್ ಬಗ್ಗೆ ಹುಡುಕಿದ್ದೆ. ಅದರಲ್ಲಿ ಕೊಂಡಿಯೊಂದನ್ನು ಕ್ಲಿಕ್ಕಿಸಿದಾಗ ರೋಹನ್ ಜೋಷಿ ಎಂದು ಹೆಸರು ಹೇಳಿಕೊಂಡ ವ್ಯಕ್ತಿಯು ವಾಟ್ಸಪ್ ಗ್ರೂಪ್ ಮೂಲಕ ಸಂಪರ್ಕಿಸಿದ್ದ. ತಾನು ನೀಡುವ ಮಾಹಿತಿಯ ಆಧಾರದಲ್ಲಿ 3 ಲಕ್ಷ  ಮಂದಿ ಸ್ಟಾಕ್ ಟ್ರೇಡಿಂಗ್‌ನಲ್ಲಿ ಲಾಭ ಗಳಿಸಿದ್ದಾರೆ ಎಂದು ನಂಬಿಸಿದ್ದ. ಜುಲೈ 25 ರಂದು ನನಗೆ ಕೊಂಡಿಯೊಂದನ್ನು ಕಳುಹಿಸಲಾಗಿತ್ತು. ಅದರಲ್ಲಿ ಲಾಗ್ ಇನ್ ಆಗಿ ಖಾತೆ ಎರೆಯುವಂತೆ ಸಲಹೆ ನೀಡಲಾಗಿತ್ತು. ಖಾತೆ ತೆರೆದ  ಬಳಿಕ ರೋಹನ್ ಜೋಷಿ  ವಿವಿಧ ಖಾತೆಗಳನ್ನು ಸೂಚಿಸಿ ಹಣ ತೊಡಗಿಸುವಂತೆ ಸಲಹೆ ನೀಡಿದ್ದ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಆ ವ್ಯಕ್ತಿಯ ನಿರ್ದೇಶನದಂತೆ ಜುಲೈ 30ರಂದು ಒಂದು ಖಾತೆಗೆ ₹1.18 ಲಕ್ಷ,  ಆ.5ರಂದು ₹ 11 ಸಾವಿರ ಹಿಂತೆಗೆಯಲು  ಅವಕಾಶ ನೀಡಿದ್ದರು. ಮತ್ತಷ್ಟು ಹಣ ಹೂಡಿದರೆ ಭಾರಿ ಲಾಭ ಗಳಿಸಬಹುದೆಂದು ನಂಬಿಸಿದ್ದ. ಆತನ ಸೂಚನೆ ಮೇರೆಗೆ ಬ್ಯಾಂಕ್‌ ಖಾತೆಯೊಂದಕ್ಕೆ ₹ 2.53 ಲಕ್ಷ ಹೂಡಿಕೆ ಮಾಡಿದೆ. ಅದಕ್ಕೆ ಸಂಬಂಧಿಸಿ ₹ 11 ಲಕ್ಷ ಲಾಭ ಬಂದಿದೆ ಎಂದು ನಂಬಿಸಿದ್ದರು. ಆದರೆ ಅದನ್ನು ಹಿಂಪಡೆಯಲು ಇನ್ನೊಂದು ಬ್ಯಾಂಕ್ ಖಾತೆಗೆ ₹ 14 ಲಕ್ಷ ಹಾಕುವಂತೆ ಸೂಚಿಸಿದ್ದರು. ಅದನ್ನು ಕಟ್ಟಿದ ಬಳಿಕ ₹ 23 ಲಕ್ಷ ಕಟ್ಟುವಂತೆ ಕೇಳಿದ್ದರು. ಕಟ್ಟಿದ ಹಣವನ್ನೂ ಮರಳಿಸದೇ, ನನಗೆ ವಂಚಿಸಲಾಗಿದೆ ಎಂದು ದೂರುದಾರ ಆರೋಪಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT