ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರ ವಿರುದ್ಧ ದ್ವೇಷ ಹರಡುವಿಕೆ ತಡೆಗೆ ಐಕ್ಯತೆ ಮಂತ್ರ

ಪ್ರೊ.ಅಪೂರ್ವಾನಂದ ಅಭಿಮತ
Last Updated 27 ಆಗಸ್ಟ್ 2022, 16:43 IST
ಅಕ್ಷರ ಗಾತ್ರ

ಮಂಗಳೂರು: ‘ಹಿಂದೂಗಳಲ್ಲಿ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹರಡುವ ಅಭಿಯಾನ ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ಮಣಿಸಬೇಕಾದರೆ ಐಕ್ಯತೆಯ ರೂಪಿಸುವ ಕಲೆಗಾರಿಕೆಯನ್ನು ರೂಢಿಸಿಕೊಳ್ಳಬೇಕಿದೆ’ ಎಂದು ಚಿಂತಕ, ದೆಹಲಿ ವಿಶ್ವವಿದ್ಯಾಲಯದ ಪ್ರೊ.ಅಪೂರ್ವಾನಂದ ಅಭಿಪ್ರಾಯಪಟ್ಟರು.

ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು, ‘ಸಮಕಾಲೀನ ಸಾಮಾಜಿಕ ಸಂವಾದದ ಒಳ ತಿರುಳು’ ಕುರಿತು ಮಾತನಾಡಿದರು.

‘ಮುಸ್ಲಿಮರು ಹಿಂದೂಗಳ ಶತ್ರುಗಳು ಎಂದು ಬಿಂಬಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಹಿಂದೆ ಅವರನ್ನು ದಾಳಿಕೋರರು ಎಂದು ತೋರಿಸಲಾಯಿತು. ನಂತರ ಅವರನ್ನು ಹಿಂದುಳಿದವರು ಎಂದು ಹಿಯಾಳಿಸಲಾಯಿತು. ಈಗ ದೇಶ ವಿರೋಧಿಗಳು ಎಂಬಂತೆ ತೋರಿಸುವ ಪ್ರಯತ್ನಗಳು ನಡೆಯುತ್ತಿವೆ. ‘ಲವ್ ಜಿಹಾದ್’, ‘ಯುಪಿಎಸ್ಸಿ ಜಿಹಾದ್‌‘, ‘ಶೈಕ್ಷಣಿಕ ಜಿಹಾದ್‌‘ ಎಂಬೆಲ್ಲಾ ಹೆಸರುಗಳನ್ನು ಇಟ್ಟು ಅವರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟಲಾಗುತ್ತಿದೆ. ‘ಜಿಹಾದ್‌’ ಪದವನ್ನು ಎಷ್ಟೊಂದು ಒತ್ತಾಯಪೂರ್ವಕವಾಗಿ ತುರುಕಲಾಗುತ್ತಿದೆ ಎಂದರೆ, ಅದನ್ನು ಕೇಳುತ್ತಲೇ ವ್ಯಕ್ತಿ ಮುಸ್ಲಿಂ ವಿರೋಧಿ ನಿಲುವನ್ನು ತಾಳಬೇಕು. ಅಂತಹ ಸ್ಥಿತಿ ಸಮಾಜದಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಿಂದೂ ಯುವತಿಯನ್ನು ಮುಸ್ಲಿಂ ಯುವಕರು ಪ್ರೀತಿಸಿ ಮದುವೆಯಾಗಿ ನಂತರ ನಡುನೀರಿನಲ್ಲಿ ಕೈಬಿಡುತ್ತಾರೆ ಎಂದು ಅಪನಂಬಿಕೆ ಮೂಡಿಸುವುದು, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವುದು, ವಿಮಾನನಿಲ್ದಾಣ, ರೈಲು ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರು ನಮಾಜ್ ಮಾಡಿದರೆ, ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು, ರೊಹಿಂಗ್ಯಾಗಳು ನಮ್ಮ ಸೌಕರ್ಯ ಕಸಿದುಕೊಳ್ಳುತ್ತಿದ್ದಾರೆ ಎಂದು ಅಪಪ್ರಚಾರ ನಡೆಸುವುದೆಲ್ಲವೂ ಮುಸ್ಲಿಂ ದ್ವೇಷ ಹರಡುವ ತಂತ್ರಗಾರಿಕೆಯ ಭಾಗ. ಇವು ಯಾವುದೂ ಆಕಸ್ಮಿಕವಾಗಿ ನಡೆಯುತ್ತಿಲ್ಲ. ಹಿಂಸೆ ಸೃಷ್ಟಿಸುವುದೇ ಇದರ ಹಿಂದಿನ ಉದ್ದೇಶ. ಶಾರುಖ್‌ ಖಾನ್‌, ಅಮೀರ್‌ ಖಾನ್‌ ಅವರಂತಹ ಮೇರುನಟರು ಅಭಿನಯಿಸಿದ ಚಲನಚಿತ್ರಗಳನ್ನು ಬಹಿಷ್ಕರಿಸುವುದು ದ್ವೇಷ ಹರಡುವ ಅಭಿಯಾನಕ್ಕೆ ಇತ್ತೀಚಿನ ಸೇರ್ಪಡೆ ಅಷ್ಟೇ’ ಎಂದರು.

‘ಮುಸ್ಲಿಮರ ಕುರಿತ ಅಪಪ್ರಚಾರಗಳಿಂದ ದೂರಉಳಿಯುವುದನ್ನುರೂಢಿಸಿಕೊಳ್ಳಬೇಕು.ಇಂತಹ ಕೊಳಕು ಅಭಿಯಾನಗಳ ಕುರಿತು ಉದಾಸೀನಪ್ರವೃತ್ತಿಯನ್ನು ತೋರುವುದರಿಂದ ಮಾತ್ರದೇಶವನ್ನು ದ್ವೇಷದ ಬೆಂಕಿಯಿಂದ ಕಾಪಾಡಬಹುದು’ ಎಂದು ಅವರು ಸಲಹೆ ನೀಡಿದರು.

‘ಸ್ವಾತಂತ್ರ್ಯ, ಸಮಾನತೆ, ನ್ಯಾಯಪರತೆ ಹಾಗೂ ಐಕ್ಯತೆ ದೇಶದ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಲಾದ ನಾಲ್ಕು ಮೌಲ್ಯಗಳು. ಬಿ.ವಿ.ಕಕ್ಕಿಲ್ಲಾಯ ಅವರು ಐಕ್ಯತೆಯನ್ನು ಕಾಪಾಡುವ ವಿಚಾರದಲ್ಲಿ ನಮಗೆಲ್ಲ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ನಾವು ಪರಸ್ಪರ ವಿಚಾರಧಾರೆಗಳ ಬಗ್ಗೆ ಸಹಮತ ಹೊಂದಿರದೇ ಇರಬಹುದು, ನಮ್ಮ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅವು ಯಾವುವೂ ನಾವು ಪರಸ್ಪರ ಚರ್ಚೆ, ಸಂವಾದ ನಡೆಸುವುದಕ್ಕೆ ಅಡ್ಡಿಯಾಗಬಾರದು. ಇಂತಹ ಸಂವಾದಗಳೇ ಸಮಾಜವನ್ನು ಚಲನಶೀಲವಾಗಿಡುತ್ತವೆ’ ಎಂದರು.

ಶ್ರೀನಿವಾಸ ಕಕ್ಕಿಲ್ಲಾಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT