ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಾವಿದರ ತಾಯಿ ‘ಯಕ್ಷಧ್ರುವ’

Published 26 ಮೇ 2024, 0:01 IST
Last Updated 26 ಮೇ 2024, 0:01 IST
ಅಕ್ಷರ ಗಾತ್ರ

ವೇಣೂರಿನ ಮನೋಜ್ ಕಾಲೇಜು ವಿದ್ಯಾರ್ಥಿ, ಜೊತೆಗೆ ಯಕ್ಷಗಾನ ತಿರುಗಾಟ ಮೇಳದ ಕಲಾವಿದ. ಚಿಕ್ಕಂದಿನಲ್ಲೇ ಎಡಗಾಲು ಕಳೆದುಕೊಂಡಿದ್ದ ಇವರು ಕೃತಕ ಕಾಲು ಅಳವಡಿಸಿಕೊಂಡು ವೇಷ ಕಟ್ಟುವವರು. ಮಗನ ಯಕ್ಷಗಾನದ ಸಂಭಾವನೆಯನ್ನೇ ನಂಬಿರುವ ಕುಟುಂಬಕ್ಕೆ ಸಣ್ಣದೊಂದು ಸೂರಿನ ಕನಸು ಚಿಗುರಿತು. ಮನೆ ಕಟ್ಟಲು ಹಣ ಹೊಂದಿಸಲಾಗದೆ ತಾಯಿ–ಮಗ ಕೈಚೆಲ್ಲಿ ಕುಳಿತಿದ್ದರು. ಇವರ ಕನಸಿಗೆ ಬಣ್ಣ ತುಂಬಿದ್ದು ‘ಯಕ್ಷಧ್ರುವ ಪಟ್ಲ ಫೌಂಡೇಷನ್’.

ಕಲಾವಿದ ವಾಮನ ಕುಮಾರ್ ಬೈಕ್ ಅಪಘಾತಕ್ಕೊಳಗಾಗಿ ನಡುರಸ್ತೆಯಲ್ಲಿ ಜೀವ ಕಳೆದುಕೊಂಡರು. ಪತಿಯ ದುಡಿಮೆಯನ್ನೇ ಅವಲಂಬಿಸಿದ್ದ ಕುಟುಂಬಕ್ಕೆ ಸಿಡಿಲಾಘಾತ. ಅನಾಥರಾದ ಇಬ್ಬರು ಪುಟ್ಟ ಮಕ್ಕಳು, ಅನಾರೋಗ್ಯಪೀಡಿತ ಪತ್ನಿಗೆ ಆಸರೆಯಾದದ್ದು ಪಟ್ಲ ಫೌಂಡೇಷನ್‌ನ ಅಪಘಾತ ವಿಮಾ ಯೋಜನೆ. ವಿಮೆಯಿಂದ ದೊರೆತ ಎಂಟು ಲಕ್ಷ ರೂಪಾಯಿ ಮೊತ್ತ ಅವರ ಕುಟುಂಬವನ್ನು ಸಲುಹಿತು.

ತೆಂಕುತಿಟ್ಟಿನ ವೇಷಧಾರಿ ಬಣ್ಣದ ಮಹಾಲಿಂಗ ಯಕ್ಷಗಾನದಲ್ಲಿ ಮಿಂಚಿದವರು. ಅವರ ಮಗ ಸುಬ್ರಾಯ ಸಂಪಾಜೆ ಕಟೀಲು ಮೇಳದ ಬಣ್ಣದ ವೇಷಧಾರಿ. ಮಹಿಷಾಸುರನ ಪಾತ್ರಕ್ಕೆ ತೂಕ ಹೆಚ್ಚಿಸಿದ ಕಲಾವಿದ. ನಾಲ್ಕೈದು ದಶಕ ಮೇಳದಲ್ಲಿ ತಿರುಗಾಟ ಮಾಡಿದವರು. ಮಗಳ ಮದುವೆಗೆ ಹಣ ಹೊಂದಿಸಲಾಗದೆ ಕೈಚೆಲ್ಲಿ ಕುಳಿತಿದ್ದರು. ಇವರ ನೆರವಿಗೆ ಬಂದಿದ್ದು ಇದೇ ಪಟ್ಲ ಅಭಿಮಾನಿ ಬಳಗ.

ಮಿನುಗುವ ಬೆಳಕಿನ ವೇದಿಕೆಯಲ್ಲಿ ರಾಮನಾಗಿ, ರಾವಣನಾಗಿ, ಮಹಿಷಾಸುರನಾಗಿ, ದೇವಿಯಾಗಿ ಬಣ್ಣ ಹಚ್ಚುವ ಕಲಾವಿದರಿಗೆ ಪತ್ತನಾಜೆ (ಹಂಗಾಮಿನ ಕೊನೆ ಯಕ್ಷಗಾನ ಪ್ರದರ್ಶನ) ನಂತರ ಚೌಕಿಮನೆಯಾಚೆಗಿನ ವಾಸ್ತವ ಪ್ರಪಂಚಕ್ಕೆ ಇಳಿಯುವುದು ಅನಿವಾರ್ಯ. ಜೀವನ ನಿರ್ವಹಣೆಗೆ ಕೂಲಿ, ಹೋಟೆಲ್, ಗ್ಯಾರೇಜ್‌ಗಳಲ್ಲಿ ಕೆಲಸ ಅರಸಿಕೊಂಡು ಬದುಕಿನ ಬಂಡಿ ನಡೆಸುವ ಕಲಾವಿದರಿಗೆ ಕಷ್ಟಕೋಟಲೆಗಳು ಬಂದರೆ ನಲುಗುವ ಪರಿಸ್ಥಿತಿ.

ಇಂತಹ ಸಹಸ್ರಾರು ಕಲಾವಿದರಿಗೆ ಆಲದಮರದಂತೆ ಆಶ್ರಯ ನೀಡಿದೆ ಮಂಗಳೂರಿನ ‘ಯಕ್ಷಧ್ರುವ ಪಟ್ಲ ಫೌಂಡೇಷನ್’. ತೆಂಕುತಿಟ್ಟು, ಬಡಗುತಿಟ್ಟು ಎಂಬ ಭೇದವಿಲ್ಲದೆ ಯಕ್ಷಗಾನ ಎಂಬ ಕಲೆಯನ್ನು ಕಟ್ಟಿದ ಹಿರಿ, ಕಿರಿಯ ಕಲಾವಿದರನ್ನು ತಾಯಿಯಂತೆ ಪೊರೆದಿದೆ.

ಹಿಂದೆ ಕಟೀಲು ತಿರುಗಾಟ ಮೇಳದ ಭಾಗವತರಾಗಿದ್ದು, ಪ್ರಸ್ತುತ ಪಾವಂಜೆ ತಿರುಗಾಟ ಮೇಳದ ಯಜಮಾನ, ಭಾಗವತರಾಗಿರುವ ಸತೀಶ್ ಶೆಟ್ಟಿ ಪಟ್ಲ ಅವರ ಅಭಿಮಾನಿಗಳು ಸೇರಿ ಸ್ಥಾಪಿಸಿರುವ ‘ಯಕ್ಷಧ್ರುವ ಪಟ್ಲ ಫೌಂಡೇಷನ್’ ಎಂಟು ವರ್ಷ ಪೂರೈಸಿದೆ. ಫೌಂಡೇಷನ್‌ನ ಒಂಬತ್ತನೇ ವರ್ಷದ ‘ಯಕ್ಷಧ್ರುವ ಪಟ್ಲ ಸಂಭ್ರಮ’ ಮೇ 26ರಂದು ಮಂಗಳೂರಿನ ಅಡ್ಯಾರ್ ಗಾರ್ಡ್‌ನ್‌ನಲ್ಲಿ ನಡೆಯಲಿದೆ.

ಎಂಟು ವರ್ಷಗಳಲ್ಲಿ ಫೌಂಡೇಷನ್ ಹಲವು ಮೈಲಿಗಲ್ಲುಗಳನ್ನು ಕ್ರಮಿಸಿದೆ. 3,500 ಸಾವಿರಕ್ಕೂ ಹೆಚ್ಚು ಕಲಾವಿದರಲ್ಲಿ ಭರವಸೆಯ ಬೆಳಕು ಮೂಡಿಸಿದೆ. ಕಲಾವಿದರಿಗಾಗಿ ಈ ಸಂಸ್ಥೆ ವಿನಿಯೋಗಿಸಿದ ಮೊತ್ತ ₹11.5 ಕೋಟಿಗೂ ಮಿಕ್ಕಿ. ಸಂಸ್ಥೆಗೆ ಬೆನ್ನೆಲುಬಾಗಿ ನಿಂತವರು ಪಟ್ಲ ಭಾಗವತರ ಅಭಿಮಾನಿಗಳು, ಉದ್ಯಮಿಗಳು, ಕಲಾಪೋಷಕರು.

‘ಪಟ್ಲ ಯಕ್ಷಾಶ್ರಯ’ ಯೋಜನೆಯಡಿ 26 ಕಲಾವಿದರು ಸ್ವಂತದ್ದೊಂದು ಸೂರು ಕಂಡಿದ್ದಾರೆ. ಉಡುಪಿ ಸಮೀಪದ ಮಲ್ಪೆಯಲ್ಲಿ ಕಲಾವಿದ ಎಂ.ಎಲ್. ಸಾಮಗರು ಅರ್ಧ ಎಕರೆ ಜಮೀನು ದಾನವಾಗಿ ನೀಡಿದ್ದಾರೆ. ಅಲ್ಲಿ ಪಟ್ಲರ ಅಭಿಮಾನಿ, ಬೆಂಗಳೂರಿನ ವಾಣಿಶ್ರೀ ಸ್ಕೂಲ್ ಮುಖ್ಯಸ್ಥರಾಗಿರುವ ಅಮೆರಿಕ ನಿವಾಸಿ ಶಾರದಾಪ್ರಸಾದ್ ಕಲಾವಿದರಿಗಾಗಿ 20 ಮನೆಗಳನ್ನು ನಿರ್ಮಿಸುತ್ತಿದ್ದಾರೆ.

162 ಕಲಾವಿದರಿಗೆ ಗೃಹ ನಿರ್ಮಾಣಕ್ಕೆ ಸಹಾಯ ದೊರೆತಿದೆ. 160 ಅಶಕ್ತ ಕಲಾವಿದರಿಗೆ ತಲಾ ₹50 ಸಾವಿರ ಗೌರವಧನ ಸಹಾಯ ಹಸ್ತ, ಪ್ರತಿವರ್ಷ ಸುಮಾರು 2,400ಕ್ಕೂ ಹೆಚ್ಚು ಕಲಾವಿದರಿಗೆ ಅಪಘಾತ ವಿಮಾ ಯೋಜನೆ, ತುರ್ತು ಚಿಕಿತ್ಸಾ ವೆಚ್ಚ, ಅಪಘಾತ ಅಥವಾ ಅನಾರೋಗ್ಯದಿಂದ ಮೃತಪಟ್ಟ 27 ಕಲಾವಿದರ ಕುಟುಂಬಕ್ಕೆ ತಲಾ ₹50 ಸಾವಿರ ಪರಿಹಾರ ಧನ, ಅಸಹಾಯಕ ಕಲಾವಿದರಿಗೆ ಔಷಧ ವೆಚ್ಚಕ್ಕೆ ಮಾಸಾಶನ, ಕಲಾವಿದರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ, ಯಕ್ಷ ಶಿಕ್ಷಣ... ಹೀಗೆ ಪಟ್ಲ ಫೌಂಡೇಷನ್ ನೆರವು ನೀಡಿದೆ. 

‘ಕಲಾವಿದರಿಗೆ ರಂಗ ಮತ್ತು ರಂಗದಾಚೆಗಿನ ಬದುಕು ಎರಡೂ ಸವಾಲೇ. ನವೆಂಬರ್‌ನಿಂದ ಆರಂಭವಾಗಿ ಮೇನಲ್ಲಿ ತಿರುಗಾಟ ಮುಕ್ತಾಯಗೊಂಡ ನಂತರ ಮುಂಬೈಗೆ ತೆರಳಿ ಹೋಟೆಲ್‌ನಲ್ಲಿ ಗ್ಲಾಸ್ ತೊಳೆಯುವ, ಅಡುಗೆ ಮಾಡುವ ಕಲಾವಿದರನ್ನು ಕಂಡಿದ್ದೇನೆ. ಒಂದೊಮ್ಮೆ ಅವರಿಗೆ ಅನಾರೋಗ್ಯವಾದರೆ, ಆರ್ಥಿಕ ಚೈತನ್ಯ ಇಲ್ಲದೆ ಅಸಹಾಯಕರಾಗುತ್ತಾರೆ. ರಂಗದಲ್ಲಿ ವೇಷ ನೋಡಿ, ಅಭಿಮಾನಪಡುವವರು ಹಲವರು. ಆದರೆ, ಕಷ್ಟದಲ್ಲಿದ್ದಾಗ ನೆರವಿಗೆ ಬರುವವರು ವಿರಳ. ಇದನ್ನು ಕಣ್ಣಾರೆ ಕಂಡ ಮೇಲೆ ಕಲಾವಿದರ ಬೆನ್ನಿಗೆ ನಿಲ್ಲಬೇಕೆಂಬ ದೃಢ ಮನಸ್ಸು ಮಾಡಿದಾಗ, ಅಭಿಮಾನಿಗಳು ನನ್ನ ಕೈಹಿಡಿದರು’ ಎನ್ನುತ್ತಾರೆ ಸತೀಶ್ ಶೆಟ್ಟಿ ಪಟ್ಲ.

ಹನುಮಗಿರಿ ಮೇಳದ ಕಲಾವಿದ ರೂಪೇಶ್‌ ಆಚಾರ್ಯ ಅವರಿಗೆ ಯಕ್ಷಾಶ್ರಯ ಯೋಜನೆಯಡಿ ಮನೆ ಕಟ್ಟಿಸಿ ಹಸ್ತಾಂತರಿಸಿದ ಸಂದರ್ಭ
ಹನುಮಗಿರಿ ಮೇಳದ ಕಲಾವಿದ ರೂಪೇಶ್‌ ಆಚಾರ್ಯ ಅವರಿಗೆ ಯಕ್ಷಾಶ್ರಯ ಯೋಜನೆಯಡಿ ಮನೆ ಕಟ್ಟಿಸಿ ಹಸ್ತಾಂತರಿಸಿದ ಸಂದರ್ಭ

ಯಕ್ಷ ಕಲಾವಿದರ ಜೊತೆ ರಂಗಭೂಮಿ, ದೈವ ನರ್ತನ ಕಲಾವಿದರಿಗೂ ಸೇವಾಯಾನ ವಿಸ್ತರಿಸಿರುವ ಫೌಂಡೇಷನ್, ಈ ಬಾರಿ ಕಂಬಳ ಕಲಾವಿದರನ್ನೂ ಯೋಜನೆಯೊಳಗೆ ಸೇರಿಸಿಕೊಂಡಿದೆ. ‘ಪಟ್ಲ ಫೌಂಡೇಷನ್ ಎಂಬ ಆಲದಮರದ ಕೊಂಬೆಗಳು ವಿಸ್ತಾರಗೊಂಡಿವೆ. 39ಕ್ಕೂ ಹೆಚ್ಚು ಘಟಕಗಳು ಕಲಾವಿದರ ಪಾಲಿನ ಕಲ್ಪತರುಗಳಾಗಿವೆ. ಕಲಾವಿದರಿಗಾಗಿ ಮಿಡಿಯುವ ಪಟ್ಲರು, ಅವರ ಬಿನ್ನಹಕ್ಕೆ ತಲೆಬಾಗುವ ಅಭಿಮಾನಿಗಳು ಇದ್ದಾರೆ’ ಎನ್ನುತ್ತಾರೆ ಹವ್ಯಾಸಿ ಕಲಾವಿದ ಶಿವರಾಮ್ ಪಣಂಬೂರು.

‘ಕಲೆ ನನ್ನ ಪೊರೆವ ತಾಯಿ. ಕಲಾವಿದನಾಗಿ, ಸಹೃದಯ ಜೀವಿಯಾಗಿ ಕಲಾವಿದರ ನೋವು, ನೆರವಾದ ದಾನಿಗಳು ಎರಡೂ ಕಡೆಗಳನ್ನು ಸರಿದೂಗಿಸಬೇಕಾಗಿದೆ. ಈ ನಡುವೆ ಮೇಳದ ಯಜಮಾನನಾಗಿ, ಪ್ರಧಾನ ಭಾಗವತನಾಗಿ ಕಲಾಭಿಮಾನಿಗಳಿಗೆ ನ್ಯಾಯ ನೀಡುವುದು ಕರ್ತವ್ಯ. ನನಗೆ ಕಲಾವಿದರ ಋಣ ಇಲ್ಲ, ಆದರೆ, ದಾನಿಗಳ ಋಣ ಇದೆ. ನಮ್ಮ ಕಲಾವಿದರಿಗಾಗಿ ನಾನು ದಾನಿಗಳಿಗೆ ಋಣಿಯಾಗಿರಲೇ ಬೇಕು. ₹10 ಸಾವಿರದಿಂದ ಕೋಟಿವರೆಗೂ ಟ್ರಸ್ಟ್‌ಗೆ ದಾನ ನೀಡಿದವರಿದ್ದಾರೆ. ಅಸಂಖ್ಯ ದಾನಿಗಳ ಪ್ರೀತಿ ಉಳಿಸಿಕೊಳ್ಳಬೇಕಾಗಿದೆ’ ಎನ್ನುತ್ತಾರೆ ಸತೀಶ್ ಶೆಟ್ಟಿ.

ಸಮಾಜದಲ್ಲಿ ಖ್ಯಾತಿ ಗಳಿಸಿದವರು ನೂರಾರು ಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ‘ಪಟ್ಲ’ ಅವರ ರೀತಿ ಅಸಹಾಯಕರ ಬಗೆಗೆ ಮಮಕಾರ ತೋರುವುದು ತೀರಾ ವಿರಳ. ಹಾಗೆಯೇ ದಾನಿಗಳು ಅಭಿಮಾನದಿಂದ ನೀಡಿದ ಪ್ರತಿ ಪೈಸೆಯನ್ನು ಪ್ರಾಮಾಣಿಕವಾಗಿ ವಿನಿಯೋಗ ಮಾಡಿರುವುದೂ ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT