ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಪೈರಸಿ ತಡೆಯಲು ಆ್ಯಪ್‌: ಸಹ್ಯಾದ್ರಿ ಕಾಲೇಜಿನಲ್ಲಿ ವಿಜ್ಞಾನ ಪ್ರತಿಭಾ ಶೋಧ

ಸಹ್ಯಾದ್ರಿ ಕಾಲೇಜಿನಲ್ಲಿ ವಿಜ್ಞಾನ ಪ್ರತಿಭಾ ಶೋಧ; ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳಿಂದ ಮಾದರಿ ಪ್ರದರ್ಶನ
Last Updated 26 ನವೆಂಬರ್ 2022, 16:15 IST
ಅಕ್ಷರ ಗಾತ್ರ

ಮಂಗಳೂರು: ಕಾಳಜಿಯಿಂದ ಕಾಪಿಟ್ಟ ಅಕ್ಕಿಗೆ ಗುಗ್ಗುರು ಕಾಟ ಉಂಟಾಗದೇ ಇರಲು ಒಣಮೆಣಸಿನ ಕಾಯಿಯನ್ನು ಹಾಕಿಟ್ಟರೆ ಸ್ವಲ್ಪ ಸಮಯದಲ್ಲಿ ಅಕ್ಕಿಯಲ್ಲೂ ಮೆಣಸಿನಕಾಯಿ ವಾಸನೆ ಬಡಿಯುವುದಿಲ್ಲವೇ..? ಇದಕ್ಕೆ ಪರಿಹಾರವೇನು?

ಬಂಟ್ವಾಳದ ಮಾಣಿಯ ಬಾಲವಿಕಾಸ ಶಾಲೆಯ ಸಾನ್ವಿ ಮತ್ತು ಶ್ರಾವ್ಯ ಇದಕ್ಕೆ ಪರಿಹಾರ ಕಂಡುಕೊಂಡಿದ್ದಾರೆ. ಮೆಣಸಿನಕಾಯಿ ಪುಡಿ ಮತ್ತು ಜಿಲೆಟಿನ್ ಬಳಸಿ ಅವರು ಆವಿಷ್ಕರಿಸಿರುವ ‘ಚಿಲ್ಲಿ ಬ್ಲಾಕ್‌’ ಅಕ್ಕಿಯ ಒಳಗೆ ಇರಿಸಿದರೆ ಇರುವೆ ಮತ್ತು ಕೀಟಗಳು ಅತ್ತ ಸುಳಿಯುವುದೇ ಇಲ್ಲ ಎಂಬುದುಸಾನ್ವಿ ಮತ್ತು ಶ್ರಾವ್ಯ ಅವರ ವಾದ.

ಜನರ ನಿತ್ಯದ ಬದುಕಿಗೆ ಅಗತ್ಯವಿರುವ, ರೈತರ ಕೃಷಿ ಕಾಯಕ ಸುಲಭಗೊಳಿಸುವ, ಬೆಳೆ–ನೆಲ–ಜಲವನ್ನು ಕಾಪಾಡಲು ನೆರವಾಗುವ ವಿಜ್ಞಾನ ಮತ್ತು ತಂತ್ರಜ್ಞಾನದ ಇಂಥ ಅನೇಕ ಮಾದರಿಗಳು ನಗರ ಹೊರವಲಯದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ‘ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್’ ಹೆಸರಿನ ವಿಜ್ಞಾನ ಮೇಳದಲ್ಲಿ ಗಮನ ಸೆಳೆದವು.

ಸಿನಿಮಾ ಪೈರಸಿ ತಡೆಯಲು ಆ್ಯಪ್‌, ಅಡಿಕೆ ವಿಂಗಡಣೆಗೆ ಸುಲಭ ವಿಧಾನದ ಸ್ಟ್ಯಾಂಡ್‌, ವಾಹನಗಳು ಸಾಗುವಾಗ ಮಾತ್ರ ಉರಿಯುವ, ಆ ಮೂಲಕ ಇಂಧನ ಉಳಿಸುವ ಬೀದಿದೀಪಗಳು, ಗಿಡಗಳ ಅಗತ್ಯವಿದ್ದಾಗ ಮಾತ್ರ ನೀರುಣಿಸುವ ನೀರಾವರಿ ವ್ಯವಸ್ಥೆ, ಉಪ್ಪು ನೀರಿನಿಂದ ಮೋಟರ್ ಸ್ಟಾರ್ಟ್ ಆಗುವ ವಾಹನ, ಸೌರಶಕ್ತಿ ಬಳಸಿ ಚಲಾಯಿಸಬಲ್ಲ ಟ್ರಕ್‌, ತಂಬಾಕು ಮತ್ತು ನೊರೆಕಾಯಿ ಬಳಸಿ ನಿರ್ಮಿಸಿದ ಜೈವಿಕಕೀಟನಾಶಕ, ಜೈವಿಕ ಸಾಬೂನು, ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಸ್ವಯಂಚಾಲಿತ ಗೇಟ್‌...

ಹೀಗೆ ನಾನಾ ಬಗೆಯ ಮಾದರಿಗಳೊಂದಿಗೆ ಬಂದಿದ್ದ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಮಾಹಿತಿಯನ್ನು ಸಮರ್ಥವಾಗಿ ವಿವರಿಸಿ ವಿಜ್ಞಾನ ಆಸಕ್ತರ ಜ್ಞಾನದಾಹವನ್ನು ತಣಿಸಿದರು.

ಸಿನಿಮಾದ ಮೂಲ ಉಳಿಸಲು ಆ್ಯಪ್‌

ಕುಂದಾಪುರದ ಎಸ್‌.ವಿ ಇಂಗ್ಲಿಷ್ ಮೀಡಿಯಂ ಶಾಲೆಯ ಸಿದ್ಧಾರ್ಥ್ ಶೆಟ್ಟಿ, ಆದಿತ್ಯ, ಸೃಜನ್ ಮತ್ತು ನವನೀತ್ ಪೈರಸಿ ತಡೆಯುವ ಆ್ಯಪ್ ಸಿದ್ಧಪಡಿಸಿದ್ದಾರೆ. ಇದನ್ನು ಬಳಸಿದರೆ ಪೈರಸಿಯನ್ನು ಪತ್ತೆ ಮಾಡಬಹುದು ಎಂಬುದು ಅವರ ವಿವರಣೆ. ಎಸ್‌.ವಿ ಪಿಯು ಕಾಲೇಜಿನ ಅಮೋಘ್‌, ವಿಶ್ವಾಸ್‌, ದೀಕ್ಷಣ್ ಮತ್ತು ಪ್ರಜ್ವಲ್ ತಯಾರಿಸಿದ ಗಿಡಗಳಿಗೆ ನೀರುಣಿಸುವ ಸ್ವಯಂಚಾಲಿತ ಉಪಕರಣ ಬಳಕೆಗೆ ಅತಿ ಸುಲಭ. ಇದನ್ನು ಗಿಡದ ಸಮೀಪ ಮಣ್ಣಿನಲ್ಲಿ ಇರಿಸಿದರೆ, ನೀರಿನ ಅಂಶ ಕಡಿಮೆಯಾದಾಗ ಟ್ಯಾಂಕ್‌ನಿಂದ ತಾನಾಗಿಯೇ ನೀರು ಬರುತ್ತದೆ.

ವಿಟ್ಲ ಸರ್ಕಾರಿ ಶಾಲೆಯ ಚಿನ್ಮಯ್‌ ಮತ್ತು ವಿಘ್ನೇಶ್ ಸಿದ್ಧಪಡಿಸಿರುವ ಉಪಕರಣವು ಸಿಲಿಂಡರ್‌ಗೆ ಅಳವಡಿಸಿರುವ ರೆಗ್ಯುಲೇಟರ್‌ನಿಂದ ಗ್ಯಾಸ್ ಸೋರುತ್ತಿದ್ದರೆ ಎಚ್ಚರಿಸುತ್ತದೆ. ರೆಗ್ಯುಲೇಟರ್‌ ಬಂದ್ ಆಗುವಂತೆ ಮಾಡಲು ಇದರಲ್ಲಿ ಸ್ವಯಂಚಾಲಿತ ವ್ಯವಸ್ಥೆ ಇದೆ. ಪುತ್ತೂರು ಸರ್ಕಾರಿ ಶಾಲೆಯ ಉಜ್ವಲ್‌, ಸಾಯ್‌ ಪ್ರಸಾದ್ ಮತ್ತು ನವೀನ್ ಮಳೆ ಬಂದರೆ ಅಥವಾ ತೇವಾಂಶ ಹೆಚ್ಚಿದರೆ ಒಣಗಿಸಲು ಹಾಕಿದ ಅಡಿಕೆಯ ಮೇಲೆ ಪ್ಲಾಸ್ಟಿಕ್‌ ಹಾಸುವ ಸ್ವಯಂಚಾಲಿತ ಯಂತ್ರದೊಂದಿಗೆ ಪ್ರದರ್ಶನಕ್ಕೆ ಬಂದಿದ್ದರು.

ತರಕಾರಿಗೆ ಪಿರಮಿಡ್ ‘ಫ್ರಿಜ್‌’

ಬಾಲವಿಕಾಸ ಶಾಲೆಯ ನಿಶ್ಚಿಂತ್ ಮತ್ತು ನಿತೇಶ್ ತರಕಾರಿ ಹಾಳಾಗದಂತೆ ಉಳಿಸಲು ಪಿರಮಿಡ್ ಮಾದರಿಯ ’ಫ್ರಿಜ್‌‘ನೊಂದಿಗೆ ಬಂದಿದ್ದರು. ಇದು ವಿದ್ಯುತ್‌ ಉಪಕರಣ ಅಲ್ಲ. ಇಟ್ಟಿಗೆ ಮತ್ತು ಜೇಡಿ ಮಣ್ಣು ಬಳಸಿ ಇದನ್ನು ತಯಾರಿಸಲಾಗುತ್ತದೆ. ಈಜಿಪ್ಟ್‌ನ ‘ಮಮ್ಮಿ’ಯಲ್ಲಿ ಬಳಸುವ ತಂತ್ರಜ್ಞಾನವೇ ಇವರ ಮಾದಿಗೆ ಪ್ರೇರಣೆ. ತ್ರಿಕೋನಾಕಾರದಲ್ಲಿ ಇಟ್ಟಿಗೆಗಳನ್ನು ಜೇಡಿ ಮಣ್ಣು ಬಳಸಿ ಜೋಡಿಸಲಾಗುತ್ತದೆ. ಮೇಲೊಂದು ತೂತು ಇರುತ್ತದೆ. ಒಂದು ಕಡೆ ಬಾಗಿಲು ಇರುತ್ತದೆ. ಒಳಗಿನ ಬಿಸಿಗಾಳಿಯನ್ನು ಮೇಲಿನ ತೂತು ಹೊರಹಾಕುತ್ತದೆ. ತರಕಾರಿ ಇರಿಸಿ ಬಾಗಿಲು ಮುಚ್ಚಿದರೆ ತಂಪಾಗಿರುತ್ತದೆ.

ಸೇಂಟ್ ಅಲೋಷಿಯಸ್ ಪಿಯು ಕಾಲೇಜಿನ ತಂಡ ತಯಾರಿಸಿದ ವಿವಿಧೋದ್ದೇಶ ಕೃಷಿ ಯಂತ್ರ, ಆಳ್ವಾಸ್ ಕಾಲೇಜು ತಂಡದ ಸೌರವಿದ್ಯುತ್‌ ಟ್ರಕ್‌, ಕೊಡಗು ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಯರು ಸಿದ್ಧಪಡಿಸಿದ ಹೈಡ್ರಾಲಿಕ್ ಬಳಕೆಯ ಪಾರ್ಕಿಂಗ್‌ ವ್ಯವಸ್ಥೆ ಮಾದರಿಯೂ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT