ಭಾನುವಾರ, ಜೂನ್ 26, 2022
21 °C
ಮಂಗಳೂರು ವಿವಿ‌ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ಹಿಜಾಬ್‌ಗೆ ಅವಕಾಶ ನೀಡಿದ್ದಕ್ಕೆ ಆಕ್ರೋಶ: ವಿದ್ಯಾರ್ಥಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪದವಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದು, ಸರ್ಕಾರದ ‌ನಿಯಮ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ಕಾಲೇಜಿನ ‌ಕ್ಯಾಂಪಸ್‌ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ತರಗತಿ ಬಹಿಷ್ಕರಿಸಿದ ಈ ವಿದ್ಯಾರ್ಥಿಗಳು, ಕಾಲೇಜಿಗೆ ಬರುವ ವಿದ್ಯಾರ್ಥಿನಿಯರು ತರಗತಿಯ ಒಳಗೂ ಹಿಜಾಬ್ ಧರಿಸುತ್ತಿರುವುದಾಗಿ ಆರೋಪಿಸಿದರು. ‘ವಿದ್ಯಾರ್ಥಿ ನಾಯಕ ವಿನ್ಯಾಸ್, ಹಿಜಾಬ್ ಪರ ಮಾತನಾಡುತ್ತಿದ್ದಾರೆ’ ಎಂದು ಆರೋಪಿಸಿದ ವಿದ್ಯಾರ್ಥಿಗಳು, ವಿನ್ಯಾಸ್ ರಾಜೀನಾಮೆಗೆ ಆಗ್ರಹಿಸಿದರು.

ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹಿಜಾಬ್ ನಿಯಮವನ್ನು ಕಾಲೇಜಿನಲ್ಲಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು.

‘ಮೇ 16ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ವಿವಿ ಘಟಕ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಕಡ್ಡಾಯಗೊಳಿಸಬೇಕು ಮತ್ತು ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸುವಂತಿಲ್ಲ ಎಂದು ನಿರ್ಣಯವಾಗಿತ್ತು. ಈ ನಿರ್ಣಯವನ್ನು ಮೇ 17ರಿಂದಲೇ ಜಾರಿಗೆ ತರಲಾಗಿದ್ದು, ಸೂಚನಾ ಫಲಕದಲ್ಲಿ ಹಾಕಲಾಗಿದೆ. ತರಗತಿ ಧ್ವನಿವರ್ಧಕದ ಮೂಲಕ ಕೂಡ ವಿದ್ಯಾರ್ಥಿಗಳ ಗಮನಕ್ಕೆ ತರಲಾಗಿದೆ’ ಎಂದು ಕಾಲೇಜಿನ ಪ್ರಾಂಶುಪಾಲೆ ಅನಸೂಯಾ ರೈ ತಿಳಿಸಿದ್ದಾರೆ.

‘ನಂತರ ನಡೆದ ಕಾಲೇಜಿನ ವಿಭಾಗ ಮುಖ್ಯಸ್ಥರ ಸಭೆಯಲ್ಲಿ, ವಿದ್ಯಾರ್ಥಿನಿಯರು ಕಾಲೇಜಿಗೆ ಬಂದ ಮೇಲೆ ಮಹಿಳಾ ವಿಶ್ರಾಂತಿ ಕೊಠಡಿಗೆ ತೆರಳಿ, ಶಿರವಸ್ತ್ರವನ್ನು ತೆಗೆದು, ಸಮವಸ್ತ್ರದೊಂದಿಗೆ ಕಾಲೇಜಿನಲ್ಲಿ ಇರಬೇಕು ಎಂದು ನಿರ್ಣಯಿಸಲಾಗಿದೆ. ಕಾಲೇಜಿನ ಆವರಣದಲ್ಲಿ ಸಮವಸ್ತ್ರ ಹೊರತುಪಡಿಸಿ, ಬೇರೆ ಯಾವುದೇ ಉಡುಪು ಧರಿಸಲು ಅನುಮತಿ ಇಲ್ಲ. ನಿಯಮ ಉಲ್ಲಂಘಿಸಿದಲ್ಲಿ, ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿನಿಯರಿಂದ ಮನವಿ ಸಲ್ಲಿಕೆ
‘ಕಾಲೇಜು ಆರಂಭ ಆದಾಗಿನಿಂದ ಕಾಲೇಜಿನಲ್ಲಿ ನಮಗೆ ಹಿಜಾಬ್ ಧರಿಸಲು ಅವಕಾಶ ನೀಡಲಾಗಿತ್ತು. ಹಿಜಾಬ್ ನಮ್ಮ ಸಮವಸ್ತ್ರದ ಭಾಗವಾಗಿದ್ದು, ಕಾಲೇಜಿನ ಆವರಣದಲ್ಲಿ ಅದನ್ನು ಧರಿಸಲು ನಮಗೆ ಅವಕಾಶ ಕಲ್ಪಿಸಬೇಕು’ ಎಂದು 40ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಟಿ.ಸಿ ಪಡೆದ ನಾಲ್ವರು ವಿದ್ಯಾರ್ಥಿನಿಯರು
ನಗರದ ಕಾವೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ, ತರಗತಿಗೆ ಹಾಜರಾಗಲು ಅನುಮತಿ ಕೇಳಿದ್ದು, ಇದಕ್ಕೆ ಅವಕಾಶ ಇಲ್ಲ ಎಂದು ಕಾಲೇಜಿನ ಪ್ರಮುಖರು ಸ್ಪಷ್ಟಪಡಿಸಿದಾಗ, ಈ ನಾಲ್ವರು ವಿದ್ಯಾರ್ಥಿನಿಯರು ವರ್ಗಾವಣೆ ಪತ್ರ (ಟಿ.ಸಿ) ಪಡೆದು ತೆರಳಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು