ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಕಾಡಿದ ಮಾದಕ ದ್ರವ್ಯ, ಅತ್ಯಾಚಾರ

ಮುಖಾಮುಖಿ ಸಂವಾದದಲ್ಲಿ ವ್ಯಕ್ತವಾದ ವಿದ್ಯಾರ್ಥಿಗಳ ಕಳವಳ
Last Updated 13 ಡಿಸೆಂಬರ್ 2019, 17:30 IST
ಅಕ್ಷರ ಗಾತ್ರ

ಮಂಗಳೂರು: ನಿರಂತರವಾಗಿ ಕಾಡುತ್ತಿರುವ ಮಾದಕ ದ್ರವ್ಯ, ಧೂಮಪಾನ ವ್ಯಸನ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ, ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ, ಕೆಲ ಸಮುದಾಯಗಳಲ್ಲಿ ಎಸ್‌ಎಸ್‌ಎಲ್‌ಸಿ ನಂತರ ಓದಲು ಅಡ್ಡಿ, ಶೈಕ್ಷಣಿಕ ಸಾಲ ಪಡೆಯಲು ತೊಂದರೆ.

ಮಹಾನಗರ ಪಾಲಿಕೆ ನೇತೃತ್ವದಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಸಹಯೋಗದಲ್ಲಿ ನಗರದ ಮಿನಿ ವಿಧಾನಸೌಧದ ಎನ್‌ಜಿಒ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಅಧಿಕಾರಿಗಳ ಜತೆಗಿನ ಮುಖಾಮುಖಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಕಳವಳ ಇದು.

ಬಹುತೇಕರಲ್ಲಿ ಮಾದಕ ದ್ರವ್ಯ, ದೌರ್ಜನ್ಯ, ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅಧಿಕಾರಿಗಳ ಗಮನಕ್ಕೆ ತಂದರು.

ಮಾದಕ ದ್ರವ್ಯ, ಮದ್ಯಪಾನ, ಧೂಮಪಾನದಿಂದಾಗಿ ಸಾಕಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಪಿಡುಗನ್ನು ಬೇರಿನಿಂತ ಕಿತ್ತು ಹಾಕಬೇಕಾಗಿದೆ. ಇದಕ್ಕಾಗಿ ಮಕ್ಕಳು ಸೇರಿ ರ‍್ಯಾಲಿ ಮಾಡಿದರೆ ಹೇಗೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೀಣಾ ಪ್ರಶ್ನಿಸಿದರು.

ಪೊಲೀಸ್ ಆಯುಕ್ತರ ಕಚೇರಿ ಪರವಾಗಿ ಭಾಗವಹಿಸಿದ್ದ ಶ್ರೀಕಲಾ ಮಾತನಾಡಿ, ‘ಗಾಂಜಾ, ಧೂಮಪಾನ ಸೇರಿದಂತೆ ಸಾಕಷ್ಟು ಪ್ರಕರಣಗಳನ್ನು ನಾವು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇವೆ. ಒಂದು ಚಟವನ್ನು ನಿಷೇಧಿಸಲು ಮುಂದಾದಾಗ ಅದನ್ನೇ ಹವ್ಯಾಸ ಮಾಡಿಕೊಂಡವರು ಮತ್ತೊಂದು ಚಟದಲ್ಲಿ ತೊಡಗಿಕೊಳ್ಳುತ್ತಾರೆ. ಇದೇ ವೇಳೆ ಕೆಲವೊಂದು ಪ್ರಕರಣಗಳನ್ನು ಭೇದಿಸುವ ಸಂದರ್ಭ ನಮಗೆ ಹಿರಿಯ ಅಧಿಕಾರಿಗಳು ಅಥವಾ ವ್ಯವಸ್ಥೆಯಿಂದ ಸಹಕಾರ ಸಿಗದೆಯೂ ತೊಂದರೆಯಾಗುತ್ತಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪಾಲಿಕೆ ಉಪ ಆಯುಕ್ತೆ ಗಾಯತ್ರಿ ನಾಯಕ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಯಾರೂ ಅಡ್ಡಿಪಡಿಸುವುದಿಲ್ಲ. ಆದರೆ ಮಕ್ಕಳಾಗಿರುವುದಿಂದ ಯಾವುದೇ ರೀತಿಯ ರ‍್ಯಾಲಿ ಮಾಡಬೇಕಾದರೂ, ಶಾಲೆಯ ಶಿಕ್ಷಕರ ಸಹಕಾರದಲ್ಲಿ ಮಾಡಬಹುದಾಗಿದೆ ಎಂದು ತಿಳಿಸಿದರು.

ಜಾಹೀರಾತುಗಳಲ್ಲಿ ಮದ್ಯಪಾನ, ಧೂಮಪಾನ ನಿಷೇಧ ಎಂದು ಹೇಳಲಾಗುತ್ತದೆ. ಆದರೆ ಅವು ಸುಲಭವಾಗಿ ಮಕ್ಕಳಿಗೂ ಸಿಗುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ದಂಡ ಹಾಕುವುದಾಗಿ ಹೇಳುತ್ತೀರಿ. ದಂಡವನ್ನು ಕೊಡುತ್ತಾರೆ. ಮತ್ತೆ ಮುಂದುವರಿಸುತ್ತಾರಲ್ಲ ಎಂದು ಬೊಕ್ಕಪಟ್ಣ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕಿರಣ್ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗಾಯತ್ರಿ ನಾಯಕ್, ಮಕ್ಕಳು ತಮ್ಮ ಹಂತದಲ್ಲಿ ಮಾದಕ ದ್ರವ್ಯ ವ್ಯಸನಗಳಿಂದ ದೂರವಿರುವ ಪ್ರಜ್ಞೆಯನ್ನು ತಾವೇ ಬೆಳೆಸಿಕೊಳ್ಳಬೇಕು. ಪೋಷಕರಿಗೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಏಕಿಲ್ಲ?

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ, ಜೀವಾವಧಿಯಂತಹ ಶಿಕ್ಷೆ ತಕ್ಷಣ ಯಾಕೆ ದೊರೆಯುವುದಿಲ್ಲ ಎಂದು ವಿದ್ಯಾರ್ಥಿನಿಯೊಬ್ಬರು ಪ್ರಶ್ನಿಸಿದರು.

ಇದು ಅತ್ಯಂತ ಸೂಕ್ಷ್ಮ ಹಾಗೂ ಸಂಕೀರ್ಣವಾದ ವಿಷಯ. ಇಂತಹ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂಬುದು ಎಲ್ಲರ ಬಯಕೆ. ಆದರೆ ನಾವು ಸಂವಿಧಾನದಡಿ ಬದುಕುತ್ತಿದ್ದೇವೆ. ಕಾನೂನಿನ ಚೌಕಟ್ಟಿನಲ್ಲಿ ಇಂತಹ ದುಷ್ಕೃತ್ಯಗಳಿಗೆ ಶಿಕ್ಷೆ ಆಗಬೇಕು. ನೇರವಾಗಿ ಯಾರನ್ನೂ ಗಲ್ಲಿಗೇರಿಸುವ ವ್ಯವಸ್ಥೆ ನಮ್ಮಲ್ಲಿಲ್ಲ. ಇಂತಹ ವ್ಯವಸ್ಥೆಯಿಂದ ತಾತ್ಕಾಲಿಕವಾಗಿ ಭಯ ಹುಟ್ಟಿಸಬಹುದು. ಆದರೆ ಇದು ಕಾನೂನು ಆಗಿ ಬರಬೇಕೇ ಹೊರತು, ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಗಾಯತ್ರಿ ನಾಯಕ್‌ ವಿವರಣೆ ನೀಡಿದರು.

ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಶ್ರೀನಿವಾಸ, ಪಾಲಿಕೆ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ., ಜಿಲ್ಲಾ ಮಹಿಳಾ ರಕ್ಷಣಾ ಘಟಕದ ವೆಂಕಪ್ಪ ಎಂ., ಮಂಗಳೂರು ಉತ್ತರ ವಲಯ ಬಿಇಒ ಆಶಾ ನಾಯಕ್, ಕೆಎಸ್‌ಆರ್‌ಟಿಸಿ ಸಹಾಯಕ ಟ್ರಾಫಿಕ್ ಮ್ಯಾನೇಜರ್ ನಿರ್ಮಲಾ, ಪಾಲಿಕೆ ವಲಯ ಆಯುಕ್ತ ಅಬ್ದುಲ್ ರಹಿಮಾನ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನರೇಶ್ ಶೆಣೈ, ಎಂಜಿನಿಯರಿಂಗ್ ವಿಭಾಗದ ರಘುಪಾಲ್, ರೋಜ್‌ಗಾರ್ ಯೋಜನೆಯ ಚಿತ್ತರಂಜನ್, ರಿಚರ್ಡ್, ಝಾಕಿರ್‌ ಹುಸೇನ್, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಪದಾಧಿಕಾರಿಗಳು, ಅಧಿಕಾರಿಗಳು ಭಾಗವಹಿಸಿದ್ದರು. ಪಾಲಿಕೆ ಪರಿಸರ ಎಂಜಿನಿಯರ್‌ ಮಧು ಸ್ವಾಗತಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಕಮಲಾ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT