ಸೋಮವಾರ, ಆಗಸ್ಟ್ 15, 2022
22 °C
ಮೊಗ್ರದಲ್ಲಿ ಈಡೇರದ ಸೇತುವೆ ನಿರ್ಮಾಣದ ಕನಸು: ₹ 1 ಲಕ್ಷದ ಯೋಜನೆ

ಸುಬ್ರಹ್ಮಣ್ಯ: ಗ್ರಾಮಸ್ಥರಿಂದಲೇ ಕಬ್ಬಿಣದ ಕಾಲು ಸೇತುವೆ

ಲೋಕೇಶ್‌ ಬಿ.ಎನ್‌. Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ಸುಳ್ಯ ತಾಲ್ಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಸೇತುವೆ ನಿರ್ಮಾಣದ ಕನಸು ಈ ವರ್ಷವೂ ನನಸಾಗಿಲ್ಲ. ನದಿಯನ್ನು ದಾಟಲು ಗ್ರಾಮಸ್ಥರು ಇನ್ನಿಲ್ಲದ ಕಸರತ್ತು ಮಾಡಬೇಕಿದೆ. ಜನಪ್ರತಿನಿಧಿಗಳು ನೀಡಿದ ಭರವಸೆ ಈಡೇರದ ಕಾರಣ ಗ್ರಾಮಸ್ಥರೇ ಕಬ್ಬಿಣದ ಕಾಲು ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಕಮಿಲ, ಏರಣಗುಡ್ಡೆ, ಮಲ್ಕಜೆ, ಬಳ್ಳಕ್ಕ ಸೇರಿದಂತೆ ಹಲವು ಪ್ರದೇಶದ ಜನರಿಗೆ ಸಂಪರ್ಕದ್ದೆ ಸವಾಲು. ಸುಮಾರು 1,300 ಜನರು ಇರುವ ಈ ಊರಿನ ಜನರಿಗೆ ಮಳೆಗಾಲದಲ್ಲಿ ಸೇತುವೆಯದ್ದೇ ಚಿಂತೆ. ಪ್ರತಿ ವರ್ಷ ಮರದ ಪಾಲ ಹಾಕಿ, ನದಿ ದಾಟು ತ್ತಿದ್ದಾರೆ. ಈ ನಡುವೆ ಜನಪ್ರತಿನಿಧಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಇದೀಗ ಗ್ರಾಮಸ್ಥರೇ ತಾವೇ ಸ್ವಂತ ಖರ್ಚಿನಲ್ಲಿ ಕಬ್ಬಣದ ಕಾಲು ಸೇತುವೆ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಗುತ್ತಿಗಾರಿನ ಗ್ರಾಮಭಾರತ ತಂಡದ ನೇತೃತ್ವದಲ್ಲಿ ಸ್ಥಳೀಯರು ಅದಕ್ಕಾಗಿ ಹಲವು ಸುತ್ತಿನ ಮಾತುಕತೆ, ಚರ್ಚೆ ನಡೆಸಿ ತೂಗುಸೇತುವೆಗಳ ಸರದಾರ ಡಾ.ಗಿರೀಶ್ ಭಾರಧ್ವಾಜ್ ಅವರ ಪುತ್ರ ಪತಂಜಲಿ ಭಾರದ್ವಾಜ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ.

‘ಸುರಕ್ಷಿತವಾಗಿ ನಡೆದಾಡಲು, ದ್ವಿಚಕ್ರ ವಾಹನ ಓಡಾಡಲು ಸಾಧ್ಯವಾಗು ವಂತೆ ಕಬ್ಬಿಣದ ಕಾಲು ಸೇತುವೆ ರಚನೆ ಮಾಡಲು₹ 1 ಲಕ್ಷ ಅಂದಾಜು ಪಟ್ಟಿ ತಯಾರಿಸಲಾಗಿದೆ. ಊರವರು, ದಾನಿ ಗಳು ಹಾಗೂ  ಕಂಪನಿಗಳ ಸಹಾಯ ಪಡೆದು, ಕಾಲು ಸೇತುವೆಯನ್ನು ರಚನೆ ಮಾಡುತ್ತೇವೆ’ ಎನ್ನುತ್ತಾರೆ ಊರವರು.

ಸೇತುವೆ ಇಲ್ಲ ಎಂಬುದು ಈ ಹಳ್ಳಿಯ ಜನತೆಯ ನೋವಿನ ಕಥೆ. ಭೋರ್ಗರೆವ ಮಳೆಗಾಲ ಆರಂಭವಾಗುವಾಗ ಇವರ ಮನಸ್ಸಿನಲ್ಲಿ ದಿಗಿಲು ಆರಂಭವಾಗುತ್ತದೆ. ಮಳೆ ಬಂದು ಹೊಳೆ ತುಂಬುವಾಗ ಮೊಗ್ರ ಹೊಳೆಯ ಸಮೀಪದ ಪ್ರದೇಶಗಳು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡು ದ್ವೀಪದಂತಾಗುತ್ತದೆ. ಮೊಗ್ರದಲ್ಲಿ ಸರ್ಕಾರಿ ಶಾಲೆ, ಆರೋಗ್ಯ ಉಪ ಕೇಂದ್ರ, ಅಂಗನವಾಡಿ, ಮೊಗ್ರ ಕನ್ನಡ ದೇವತೆ ಯಾನೆ ದೈವಸ್ಥಾನ ಇದೆ. ಏರಣಗುಡ್ಡೆ-ಕಮಿಲ ಭಾಗದಿಂದ ಸಂಪರ್ಕಕ್ಕೆ ಇನ್ನಿಲ್ಲದ ಸಮಸ್ಯೆಯಾಗುತ್ತಿದೆ ಎಂಬುದು ಸ್ಥಳೀಯರ ಅಳಲು.

‘ಎಲ್ಲಕ್ಕಿಂತ ಮಿಗಿಲಾಗಿ ಮಳೆಗಾಲ ದಲ್ಲಿ ಹೊಳೆ ದಾಟಿ ಹೋಗಲು ಮಕ್ಕಳಿಗೆ ತೀರಾ ಕಷ್ಟವಾಗುತ್ತದೆ. ಈ ಹೊಳೆಗೆ ಒಂದು ಸೇತುವೆ ನಿರ್ಮಿಸಿಕೊಡಿ ಎಂಬ ಬೇಡಿಕೆ ದಶಕಗಳಿಂದ ಇದೆ. ಅದಕ್ಕಾಗಿ ಹಲವಾರು ವಿಭಿನ್ನ ಹೋರಾಟವನ್ನು ನಡೆಸಿದರೂ ಪ್ರಯೋ ಜನವಾಗಿಲ್ಲ’ ಎನ್ನುತ್ತಾರೆ ಸ್ಥಳೀಯರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು