ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಿಂಜ ಕ್ಷೇತ್ರದ ಆಸುಪಾಸಿನ 3 ಕಲ್ಲು ಗಣಿಗಾರಿಕೆ ಸ್ಥಗಿತ: ಸಚಿವ ಸುನಿಲ್‌

Last Updated 14 ಫೆಬ್ರುವರಿ 2022, 8:18 IST
ಅಕ್ಷರ ಗಾತ್ರ

ಮಂಗಳೂರು: ಬಂಟ್ವಾಳ ತಾಲ್ಲೂಕಿನ ಕಾರಿಂಜೇಶ್ವರ ದೇವಸ್ಥಾನದ ಆಸುಪಾಸಿನ ಕಾವಳಮೂಡೂರು ಮತ್ತು ಕಾವಳಪಡೂರು ಗ್ರಾಮಗಳಲ್ಲಿ ನಡೆಯುತ್ತಿದ್ದ ಮೂರು ಕಲ್ಲು ಗಣಿಗಾರಿಕೆ ಚಟುವಟಿಕೆಗಳನ್ನು ಸ್ಥಳೀಯರ ಹಾಗೂ ಭಕ್ತರ ದೂರಿನ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕಾವಳಮುಡೂರು ಗ್ರಾಮದ ಸರ್ವೆ ನಂ. 164/2ಪಿ1ರಲ್ಲಿ 0.50 ಎಕರೆ ಮತ್ತು 172/2ಪಿ1ರಲ್ಲಿ 0.50 ಎಕರೆ ಸಹಿತ 1 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಪರವಾನಗಿಯ ವ್ಯಾಪ್ತಿ ಮೀರಿ 3.28 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿರುವ ಕಾರಣ ₹8,12,87,198 ದಂಡ ಪಾವತಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೂಚಿಸಿತ್ತು. ದಂಡ ಪಾವತಿಸದ ಕಾರಣ ಗಣಿಗಾರಿಕೆಯನ್ನು 2021ರ ಡಿಸೆಂಬರ್‌ನಲ್ಲಿ ಸ್ಥಗಿತಗೊಳಿಸಲಾಗಿದೆ. ಅನಧಿಕೃತ ಗಣಿಗಾರಿಕೆ ನಡೆಸಿರುವ ಮಾಲೀಕರ ವಿರುದ್ಧ ಬಂಟ್ವಾಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ’ ಎಂದು ತಿಳಿಸಿದ್ದಾರೆ.

‘ಕಾವಳಪಡೂರು ಗ್ರಾಮದ ಸ.ನಂ. 121/2ಪಿ1ರಲ್ಲಿ 1 ಎಕರೆ ವಿಸ್ತೀರ್ಣದಲ್ಲಿ 2016ರಿಂದ ಆರಂಭಗೊಂಡಿದ್ದ ಗಣಿಗಾರಿಕೆಗೆ 20 ವರ್ಷಗಳ ಪರವಾನಗಿ ಇದ್ದರೂ ಗುತ್ತಿಗೆದಾರರು ಗೋಮಾಳ ಜಾಗವನ್ನು ಅತಿಕ್ರಮಿಸಿ, ಚಟುವಟಿಕೆ ನಡೆಸುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಸದ್ರಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಸ.ನಂ. 122/3ಪಿ1ರಲ್ಲಿ 1 ಎಕರೆ ಜಮೀನಿನಲ್ಲಿ 2015ರಿಂದ ಆರಂಭಗೊಂಡಿದ್ದ ಗಣಿಗಾರಿಕೆಯ ಗುತ್ತಿಗೆದಾರರು ಮೃತಪಟ್ಟಿದ್ದರೂ ಆ ಪ್ರದೇಶದಲ್ಲಿ ಬೇರೆ ವ್ಯಕ್ತಿ ಅನಧಿಕೃತವಾಗಿ ಚಟುವಟಿಕೆ ಮಾಡುತ್ತಿರುವುದು ಕಂಡು ಬಂದ ಕಾರಣ ಅದನ್ನೂ ಸ್ಥಗಿತಗೊಳಿಸಲಾಗಿದೆ’ ಎಂದು ಸಚಿವರು ತಿಳಿಸಿದ್ದಾರೆ.

‘ಕಾರಿಂಜೇಶ್ವರ ದೇವಸ್ಥಾನಕ್ಕೆ ಯಾವುದೇ ಧಕ್ಕೆ ತರುವ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಗಣಿಗಾರಿಕೆ ಚಟುವಟಿಕೆ ನಡೆಸದಂತೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ದೇವಸ್ಥಾನದ ಪರಿಸರವನ್ನು ಅತೀ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡುವ ಬಗ್ಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ
ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಭಕ್ತರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT