ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಲ್ಗುಣಿಯಲ್ಲಿ ಒಡಲಲ್ಲಿ ದೋಣಿಗಳ ಮೆರವಣಿಗೆ

ಮತ ಜಾಗೃತಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ ಸಮಿತಿ ವಿನೂತನ ಪ್ರಚಾರ
Published 9 ಏಪ್ರಿಲ್ 2024, 8:17 IST
Last Updated 9 ಏಪ್ರಿಲ್ 2024, 8:17 IST
ಅಕ್ಷರ ಗಾತ್ರ

ಮಂಗಳೂರು: ಮತ ಚಲಾಯಿಸುವಂತೆ ಪ್ರೇರೇಪಿಸುವ ಬರಹಗಳಿದ್ದ ಬಿಳಿಬಣ್ಣದ ಧ್ವಜವನ್ನು ಕಟ್ಟಿದ್ದ 15ಕ್ಕೂ ಹೆಚ್ಚು ದೋಣಿಗಳು ಫಲ್ಗುಣಿ ನದಿಯಲ್ಲಿ ಬೋಳೂರಿನ ಸುಲ್ತಾನ್‌ ಬತ್ತೇರಿ ಬಳಿಯಿಂದ ಬಂದರಿನವರೆಗೆ ಸಾಗಿದವು. ದೊಡ್ಡ ದೋಣಿಯೊಂದರಲ್ಲಿ ಸಾಗಿದ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ಕಡ್ಡಾಯವಾಗಿ ಮತ ಹಾಕುವಂತೆ ಕೋರುವ ಫಲಕಗಳನ್ನು ಪ್ರದರ್ಶಿಸಿದರು.

ಮತದಾನದ ಮಹತ್ವವನ್ನು ಸಾರಲು ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿಯು ಮಂಗಳೂರು ಮಹಾನಗರ ಪಾಲಿಕೆ ಮತ್ತು ಬೋಳೂರು ಮೊಗವೀರ ಮಹಾಸಭಾ ಸಹಯೋಗದಲ್ಲಿ ಸೋಮವಾರ ‘ಜಲಥಾನ್’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿತು.

ಧ್ವನಿಮುದ್ರಿತ ಭಾಗವತಿಕೆ, ಜಾನಪದ ಗಾಯನಕ್ಕೆ ದೋಣಿಯ ಮೇಲೆಯೇ ಕುಣಿದ ಯಕ್ಷಗಾನ ವೇಷಧಾರಿಗಳು ಮತದಾನದ ಮಹತ್ವ ಸಾರಿದರು. ಬಲ್ಮಠದ ಹೆಣ್ಣು ಮಕ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು, ಮೀನುಗಾರ ಮುಖಂಡರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಮತದಾನ ಮಾಡುವ ಕುರಿತು ಪ್ರತಿಜ್ಞೆ ಬೋಧಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಆನಂದ್, ‘2019ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಶೇ.77.90 ಮತದಾನವಾಗಿದೆ. ಈ ಸಲ ಮತದಾನದ ಪ್ರಮಾಣ ಕನಿಷ್ಠ ಪಕ್ಷ ಶೇ. 5ರಷ್ಟಾದರೂ ಹೆಚ್ಚಾಗಬೇಕು. ಚುನಾವಣಾ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಎಲ್ಲ ಮತದಾರರನ್ನು ಪ್ರೇರೇಪಿಸಬೇಕು’ ಎಂದರು.

ಬೋಳೂರು ಮೊಗವೀರ ಮಹಾಸಭಾ ಅಧ್ಯಕ್ಷ ಯಶವಂತ ಮೆಂಡನ್, ‘ಅಭಿವೃದ್ಧಿ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸುವ ಜನ ಪ್ರತಿನಿಧಿಯನ್ನು ಆಯ್ಕೆ ಮಾಡಲು ಲೋಕಸಭೆ ಚುನಾವಣೆಗಿಂತ ಉತ್ತಮ ಅವಕಾಶ ಬೇರೊಂದಿಲ್ಲ. ನಿಮ್ಮ ಆಯ್ಕೆ ದೇಶಕ್ಕೆ ಉತ್ತಮ ನಾಯಕತ್ವವನ್ನು ನೀಡಬಲ್ಲುದು. ಜಾತಿ, ಮತ, ಧರ್ಮ, ಭಾಷೆಯನ್ನು ನೋಡದೆ,  ಅರ್ಹ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದರು. 

ಪಾಲಿಕೆ ಆಯುಕ್ತ ಸಿ.ಎಲ್‌.ಆನಂದ್, ಬೋಳೂರು ಮೊಗವೀರ ಮಹಾಸಭಾದ ಉಪಾಧ್ಯಕ್ಷ ರಂಜನ್ ಕಾಂಚನ್‌, ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಯೋಗಿನಿ ಬಂಗೇರ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ದಿಲೀಪ್ ಕುಮಾರ್, ದಿವ್ಯಾ, ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ, ಸ್ವೀಪ್ ಅಧಿಕಾರಿ ಡೊಂಬಯ್ಯ ಇಡ್ಕಿದು ಮತ್ತಿತರರು ಭಾಗವಹಿಸಿದ್ದರು.

‘ಜಲಥಾನ್‌’  ಕಾರ್ಯಕ್ರಮದಲ್ಲಿ ದೋಣಿಯಲ್ಲಿ ಸಾಗಿದ ವಿದ್ಯಾರ್ಥಿನಿಯರು ಹಾಗೂ ಅಧಿಕಾರಿಗಳು ಮತದಾನದ ಮಹತ್ವ ಸಾರುವ ಫಲಕಗಳನ್ನು ಪ್ರದರ್ಶಿಸಿದರು - ಪ್ರಜಾವಾಣಿ ಚಿತ್ರ / ಫಕ್ರುದ್ಧೀನ್ ಎಚ್.
‘ಜಲಥಾನ್‌’  ಕಾರ್ಯಕ್ರಮದಲ್ಲಿ ದೋಣಿಯಲ್ಲಿ ಸಾಗಿದ ವಿದ್ಯಾರ್ಥಿನಿಯರು ಹಾಗೂ ಅಧಿಕಾರಿಗಳು ಮತದಾನದ ಮಹತ್ವ ಸಾರುವ ಫಲಕಗಳನ್ನು ಪ್ರದರ್ಶಿಸಿದರು - ಪ್ರಜಾವಾಣಿ ಚಿತ್ರ / ಫಕ್ರುದ್ಧೀನ್ ಎಚ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT