ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು| ಬಾಣದ ಪಾಲ: ತಾಳಮದ್ದಲೆ ಸಂಪೂರ್ಣ ಅರೆಬಾಸೆಲಿ ಬಾತ್

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ
Last Updated 8 ನವೆಂಬರ್ 2020, 15:40 IST
ಅಕ್ಷರ ಗಾತ್ರ

ಮಂಗಳೂರು: ಭಾಗವತಿಕೆಯೂ ಸೇರಿದಂತೆ ಸಂಪೂರ್ಣವಾಗಿ ಅರೆಭಾಷೆಯಲ್ಲಿ ತಾಳಮದ್ದಳೆಯು ಭಾನುವಾರ ವರ್ಚುವಲ್‌ ವೇದಿಕೆ ಮೂಲಕ ಪ್ರದರ್ಶನಗೊಂಡಿತು.

ಭವ್ಯಶ್ರೀ ಕುಲ್ಕುಂದ ಅವರು ಬರೆದ ‘ಬಾಣದ ಪಾಲ’ (ಶರಸೇತು ಬಂಧನ ಪ್ರಸಂಗ) ತಾಳಮದ್ದಳೆಯನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಪ್ರಸ್ತುತ ಪಡಿಸಿತು.

ಭಾಗವತಿಕೆಯಲ್ಲಿ ಭವ್ಯಶ್ರೀ ಕುಲ್ಕುಂದ, ಮದ್ದಳೆಯಲ್ಲಿ ಅಕ್ಷಯ್‌ ರಾವ್ ವಿಟ್ಲ, ಚೆಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ, ಅರ್ಥಗಾರಿಕೆಯಲ್ಲಿ ಕೊಳ್ತಿಗೆ ನಾರಾಯಣ ಗೌಡ, ಜಬ್ಬಾರ್ ಸಮೊ, ಜಯಾನಂದ ಸಂಪಾಜೆ ಇದ್ದರು.

ಪುತ್ತೂರು ವಿವೇಕಾನಂದ ಕಾಲೇಜು ಪತ್ರಿಕೋದ್ಯಮ ವಿಭಾಗದ ಸ್ಟುಡಿಯೊದಲ್ಲಿ ಈಚೆಗೆ ರೆಕಾರ್ಡಿಂಗ್ ಮಾಡಲಾಗಿತ್ತು. ಭಾನುವಾರ ಯೂಟ್ಯೂಬ್‌ ಮೂಲಕ ಬಿತ್ತರಿಸಲಾಯಿತು.

‘ಅರೆಭಾಷೆಯ ಅರ್ಥಗಾರಿಕೆಯನ್ನು ಹೊಂದಿದ ಯಕ್ಷಗಾನ, ತಾಳಮದ್ದಳೆಗಳು ಈ ಹಿಂದೆಯೂ ಪ್ರದರ್ಶನ ಕಂಡಿವೆ. ಆದರೆ, ಭಾಗವತಿಕೆಯೂ ಅರೆಭಾಷೆಯಲ್ಲಿದ್ದ ತಾಳಮದ್ದಳೆ ನಡೆದಿರುವ ದಾಖಲೆ ಸಿಕ್ಕಿಲ್ಲ. ಹೀಗಾಗಿ, ಸಂಪೂರ್ಣ ಅರೆಭಾಷಾ ತಾಳಮದ್ದಳೆ ಇದೇ ಮೊದಲು. ಅದೂ ವರ್ಚುವಲ್‌ ವೇದಿಕೆಯಲ್ಲಿ ಬಿತ್ತರಗೊಂಡಿದೆ’ ಎಂದು ಅಕಾಡೆಮಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದೆ ಅರೆಭಾಷೆಯಲ್ಲಿ ಪ್ರದರ್ಶನ ಕಂಡ ಯಕ್ಷಗಾನ ಮತ್ತು ತಾಳಮದ್ದಳೆಗಳಲ್ಲಿ ಅರ್ಥಗಾರಿಕೆ ಕನ್ನಡದಲ್ಲಿ ಇರುತ್ತಿತ್ತು. ಏಕೆಂದರೆ, ಭಾಗವತಿಕೆ ಹಾಡನ್ನು ಬರೆಯಲು ಭಾಷೆ ಮತ್ತು ಛಂದಸ್ಸು ಎರಡೂ ಗೊತ್ತಿರಬೇಕು. ಎರಡರ ಜ್ಞಾನವನ್ನು ಹೊಂದಿದ್ದು, ಬರೆಯಬಲ್ಲವರು ನಮಗೆ ಸಿಕ್ಕಿರಲಿಲ್ಲ. ಮಡಿಕೇರಿ ಆಕಾಶವಾಣಿಯ ಸುಬ್ರಾಯ ಸಂಪಾಜೆ ಸಲಹೆಯಂತೆ ಭವಿಶ್ರೀ ಕುಲ್ಕುಂದ ಅವರನ್ನು ಬರೆಯಲು ಪ್ರೋತ್ಸಾಹಿಸಿದ್ದು, ಯಶಸ್ವಿಯಾಗಿ ನಿರ್ವಹಿಸಿದರು. ಸುಬ್ರಾಯ ಸಂಪಾಜೆ ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡಿದ್ದರು’ ಎಂದು ಅವರು ವಿವರಿಸಿದರು.

‘ಕೊರೊನಾ ಸಂದರ್ಭದಲ್ಲಿ ನಾವು ಹಾಡಿನ ಸಾಹಿತ್ಯ ಬರೆಯಬಲ್ಲವರ ಹುಡುಕಾಟ ನಡೆಸಿದ್ದೆವು. ಈಗ ಯಶಸ್ಸು ಕಂಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT