ಭಾನುವಾರ, ಜೂನ್ 26, 2022
27 °C

ಮಳಲಿ ಮಸೀದಿಯಲ್ಲಿ ದೈವ ಸಾನ್ನಿಧ್ಯ: ಜ್ಯೋತಿಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ‌ಕನ್ನಡ ಜಿಲ್ಲೆಯ ತೆಂಕ ಉಳಿಪಾಡಿ ಮಳಲಿ ಪೇಟೆಯ ಜುಮ್ಮಾ ಮಸೀದಿ ನವೀಕರಣದ ವೇಳೆ ಒಳಗಡೆ ದೇವಾಲಯದ ರಚನೆಗಳು ಕಂಡುಬಂದ ಹಿನ್ನೆಲೆಯಲ್ಲಿ ವಿವಿಧ ಹಿಂದುತ್ವ ಸಂಘಟನೆಗಳು ಬುಧವಾರ ತಾಂಬೂಲ ಪ್ರಶ್ನೆ ಹಮ್ಮಿಕೊಂಡಿದ್ದವು. ಇದರಲ್ಲಿ ಪಾಲ್ಗೊಂಡಿದ್ದ ಕೇರಳದ ಜ್ಯೋತಿಷಿಗಳು, ‘ಇಲ್ಲಿ ದೇವರ ಸಾನ್ನಿಧ್ಯ ಇದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಸೀದಿ ಸಮೀಪದ ರಾಮಾಂಜನೇಯ ಭಜನಾ ಮಂದಿರದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಅವರು, ‘ಗ್ರಹಗತಿ ಆಧರಿಸಿ ಲೆಕ್ಕಾಚಾರ ಹಾಕಿದಾಗ ಇಲ್ಲಿ ಗುರುಮಠ ಇರುವುದು ಗೋಚರಿಸಿದೆ. ಇಲ್ಲಿ ಶಿವನ ಆರಾಧನೆಯೂ ನಡೆದಿರಬಹುದು. ಶೈವ- ವೈಷ್ಣವರ ವಿವಾದದಲ್ಲಿ ಇಲ್ಲಿನ ದೈವ ಸಾನ್ನಿಧ್ಯ ನಾಶವಾಗಿದೆ‌. ಹಾಗಾಗಿ ಇಲ್ಲಿ ಇದ್ದವರು ಕೂಡ ಸ್ಥಳಾಂತರಗೊಂಡಿದ್ದಾರೆ. ಆದರೆ ದೈವ ಸಾನ್ನಿಧ್ಯವು ಅಲ್ಲಿಂದ ಪೂರ್ತಿಯಾಗಿ ಹೋಗಿಲ್ಲ. ಯಾವ ಸ್ಥಳದಲ್ಲಿ ದೈವ ಸಾನ್ನಿಧ್ಯವಿದೆ ಎಂದು ಶೋಧಿಸಬೇಕು’ ಎಂದು ಜ್ಯೋತಿಷಿ ಹೇಳಿದ್ದಾರೆ. ಈ ಸಂಗತಿ ಈಗ ಚರ್ಚೆಯ ವಿಷಯವಾಗಿದೆ.

ಮಸೀದಿ ನವೀಕರಣದ ವೇಳೆ ದೇವಾಲಯ ರಚನೆಗಳು ಕಂಡುಬಂದ ಕಾರಣ ಕೆಲವು ಹಿಂದುತ್ವ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದವು. ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯವು ನವೀಕರಣಕ್ಕೆ ಸಂಬಂಧಿಸಿ, ಮುಂದಿನ ಆದೇಶದವರೆಗೆ ಯಾವುದೇ ನಿರ್ಮಾಣ ಕಾಮಗಾರಿ ಅಥವಾ ಯಾವುದೇ ಚಟುವಟಿಕೆ ನಡೆಸದಂತೆ ನಿರ್ದೇಶನ ನೀಡಿತ್ತು.

ಓದಿ... ಮಳಲಿ ಜುಮ್ಮಾ ಮಸೀದಿ ಗೊಂದಲ: ಇಂದು ತಾಂಬೂಲ ಪ್ರಶ್ನೆ, ಪೊಲೀಸ್ ಬಿಗಿ ಭದ್ರತೆ

ತಾಂಬೂಲ ಪ್ರಶ್ನೆಯ ಕಾರಣಕ್ಕೆ ಮಳಲಿ ಮಸೀದಿ ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ‌ಮೇ 24ರ ರಾತ್ರಿ 8 ಗಂಟೆಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಅದು ಮೇ 26ರ ಬೆಳಿಗ್ಗೆ 8 ಗಂಟೆಯವರೆಗೆ ಮುಂದುವರಿಯಲಿದೆ.

‘ಮಸೀದಿ ಆಡಳಿತ ಮಂಡಳಿಯವರು ಮತ್ತು ಪ್ರಮುಖರ ಸಭೆ ನಡೆಸಲಾಗಿದೆ. ನ್ಯಾಯಾಲಯದ ಆದೇಶ ಪಾಲಿಸುವುದರ ಜತೆಗೆ ಜಿಲ್ಲಾಡಳಿತದ ನಿರ್ದೇಶನಕ್ಕೆ ಪಾಲಿಸುವುದಾಗಿ ಮಸೀದಿ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ಜಿಲ್ಲೆಯ ಜನರು ಶಾಂತಿ ಕಾಪಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮನವಿ ಮಾಡಿದ್ದಾರೆ.

ಓದಿ... ಮಳಲಿ ಮಸೀದಿ ಸತ್ಯಾಸತ್ಯತೆ ಪರಿಶೀಲಿಸಲು ಅಷ್ಟಮಂಗಲ ಪ್ರಶ್ನೆ

ತಾಂಬೂಲ ಪ್ರಶ್ನೆ ಹೇಗೆ?
ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ, ದೈವಿ ಶಕ್ತಿ ಪತ್ತೆ ಕಾರ್ಯ ನಡೆಯುತ್ತದೆ. ತಾಂಬೂಲ ಪ್ರಶ್ನೆ ಇಡುವವರು ವೀಳ್ಯದೆಲೆಗಳನ್ನು ಜ್ಯೋತಿಷಿಗೆ ನೀಡುತ್ತಾರೆ. ಆ ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಅವರು ಫಲಗಳನ್ನು ಸ್ಥಳದಲ್ಲೇ ನಿರ್ಧರಿಸುತ್ತಾರೆ. ವೀಳ್ಯದೆಲೆಗಳ ಸಂಖ್ಯೆ ಆಧಾರದಲ್ಲಿ ದೇವರ ಸಾನ್ನಿಧ್ಯ ಗುರುತಿಸಲಾಗುತ್ತದೆ. ಹೆಚ್ಚಿನ ಪ್ರಶ್ನಾ ಚಿಂತನೆ ನಡೆಸಿ ಯಾವ ದಿಕ್ಕಿನಲ್ಲಿ ದೈವ ಸಾನ್ನಿಧ್ಯ ಇದೆ ಎಂಬುದನ್ನು ಜ್ಯೋತಿಷಿ ಹೇಳುತ್ತಾರೆ.

‘ತಾಂಬೂಲ ಪ್ರಶ್ನೆ’ ಅಲ್ಲಗಳೆಯಲ್ಲ: ಗೃಹ ಸಚಿವ
ತುಮಕೂರು:
‘ದಕ್ಷಿಣ ‌ಕನ್ನಡ ಜಿಲ್ಲೆಯ ತೆಂಕ ಉಳಿಪಾಡಿ ಮಳಲಿ ಪೇಟೆಯ ಜುಮ್ಮಾ ಮಸೀದಿ ಸಂಬಂಧ ‘ತಾಂಬೂಲ ಪ್ರಶ್ನೆ’ ಕೇಳಿರುವುದನ್ನು ನಾನು ಅಲ್ಲಗಳೆಯುವುದಿಲ್ಲ. ಅದು ಆ ಭಾಗದ ಜನರ ನಂಬಿಕೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ತಾಲ್ಲೂಕಿನ ಹರಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾನೂನು ಸುವ್ಯವಸ್ಥೆ ಕಾಪಾಡಲು ಮಂಗಳೂರು ಪೊಲೀಸರು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದಾರೆ. ತಾಂಬೂಲ ಪ್ರಶ್ನೆಯನ್ನು ನಾವು ಪ್ರಶ್ನಿಸುವುದಿಲ್ಲ. ಅದು ಅವರ ವೈಯಕ್ತಿಕ ವಿಚಾರ’ ಎಂದು ಸ್ಪಷ್ಟಪಡಿಸಿದರು.

ಓದಿ... ಮಳಲಿ ಮಸೀದಿ ನವೀಕರಣ ತಾತ್ಕಾಲಿಕ ಸ್ಥಗಿತ

**

ತಾಂಬೂಲ ಪ್ರಶ್ನೆ ಇಡುವುದು, ಅದರ ಆಧಾರದಲ್ಲಿ ಮಸೀದಿ ಹೌದೊ, ಅಲ್ಲವೊ ಎಂದು ನಿರ್ಧರಿಸಲು ಬಿಜೆಪಿಯ ಸಹೋದರ ಸಂಘಟನೆ ವಿಶ್ವಹಿಂದೂ ಪರಿಷತ್‌ನವರು ಯಾರು?
-ಮುನೀರ್ ಕಾಟಿಪಳ್ಳ, ಡಿವೈಎಫ್ಐ ರಾಜ್ಯಾಧ್ಯಕ್ಷ

**

ಸರ್ಕಾರ ಮಧ್ಯಪ್ರವೇಶಿಸುವ ಜತೆಗೆ ವೈಯಕ್ತಿಕ ನಂಬಿಕೆಗಳನ್ನು ಬೇರೆಯವರ ಮೇಲೆ ಹೇರುವುದನ್ನು ತಡೆಯಬೇಕು. ಸರ್ಕಾರದ ವಿಚಾರದಲ್ಲಿ ಭವಿಷ್ಯ ಹೇಳುವವರನ್ನೂ ಬಂಧಿಸಬೇಕು.
-ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು