ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವೃತ್ತಿ ಜೊತೆ ಪತ್ರಕರ್ತರ ಪ್ರವೃತ್ತಿ ಬೆಳೆಯಲಿ: ತಾರಾನಾಥ ಗಟ್ಟಿ ಕಾಪಿಕಾಡ್

Published 31 ಮೇ 2024, 6:27 IST
Last Updated 31 ಮೇ 2024, 6:27 IST
ಅಕ್ಷರ ಗಾತ್ರ

ಮಂಗಳೂರು: ಪತ್ರಕರ್ತರು ಪತ್ರಿಕಾ ವರದಿಗಳ ಜೊತೆಯಲ್ಲಿ ಸೃಜನಶೀಲ ಬರವಣಿಗೆಯ ಕಡೆಗೂ ಗಮನ ನೀಡಬೇಕು ಎಂದು ಪತ್ರಕರ್ತ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಸಲಹೆ ನೀಡಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರ ತ್ರೈಮಾಸಿಕ ಆನ್‌ಲೈನ್ ಪತ್ರಿಕೆಯ ಎರಡನೇ ಸಂಚಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಹರ್ಮನ್ ಮೊಗ್ಲಿಂಗ್ ಅವರು ಆರಂಭಿಸಿದ ಮಂಗಳೂರು ಸಮಾಚಾರ ಪತ್ರಿಕೆಯ ಮೂಲಕ ಮಂಗಳೂರು ನಗರ, ಕರ್ನಾಟಕ ಮಾಧ್ಯಮ ಚರಿತ್ರೆಯಲ್ಲಿ ಹೆಸರು ಗಳಿಸಿದೆ. ಕನ್ನಡ ಪತ್ರಿಕೋದ್ಯಮದ ಮೈಲುಗಲ್ಲು ಇಲ್ಲೇ ಇದೆ. ಇಂಥ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ವೃತ್ತಿಯ ಜೊತೆ ಪ್ರವೃತ್ತಿಯನ್ನೂ ಬೆಳೆಸಿಕೊಂಡರೆ ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರದಂಥ ಆನ್‌ಲೈನ್ ಪತ್ರಿಕೆಯಲ್ಲಿ ಪ್ರಕಟಣೆ ಸುಲಭವಾಗಬಹುದು ಎಂದು ಅವರು ಹೇಳಿದರು.

ಸುದ್ದಿ ಮಾಧ್ಯಮ ಈಗ ಪ್ರತಿಯೊಬ್ಬರ ಅಂಗೈಯಲ್ಲಿ, ಮೊಬೈಲ್ ಫೋನ್‌ನಲ್ಲಿ ತೆರೆದುಕೊಳ್ಳುತ್ತದೆ. ಆದರೂ ಮುದ್ರಿತ ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಓದುವುದು ಒಂದು ಅನಭೂತಿ. ಪತ್ರಿಕೋದ್ಯಮದಲ್ಲಿ ಹೊಸ ಆವಿಷ್ಕಾರಗಳು ಆದರೂ ಪತ್ರಿಕೆಯನ್ನು ಓದುವವರು ಇನ್ನೂ ಸಾಕಷ್ಟು ಮಂದಿ ಇದ್ದಾರೆ. ಪತ್ರಿಕಾ ರಂಗ ಈ ಹಿಂದೆಯೂ ಅನೇಕ ಆತಂಕಗಳನ್ನು ಎದುರಿಸಿದೆ. ಅದನ್ನೆಲ್ಲ ಅದು ಮೀರಿ ನಿಂತಿದೆ. ಪ್ರಸಾರ ಸಂಖ್ಯೆ ಕಡಿಮೆಯಾಗಿದ್ದರೂ ಓದುಗರು ಇನ್ನೂ ಇದ್ದಾರೆ ಎಂಬುದು ಸಮಾಧಾನದ ಸಂಗತಿ ಎಂದು ಅವರು ನುಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ‌ ಮಂಗಳೂರು ಶಾಖೆಯ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಮಾತನಾಡಿ ಮುದ್ರಣ ಮಾಧ್ಯಮಕ್ಕಿಂತ ಆನ್‌ಲೈನ್ ಪತ್ರಿಕೆಗಳ ಸಂಖ್ಯೆ ಈಗ ಹೆಚ್ಚು ಇದೆ. ಈಗಿನ ಪೀಳಿಗೆ ಆನ್‌ಲೈನ್‌ನಲ್ಲೇ ಒದಲು ಬಯಸುತ್ತಾರೆ. ಡಿಜಿಟಲ್ ಮಾಧ್ಯಮದಲ್ಲಿ ಸುದ್ದಿಗಳನ್ನು ಓದಲು ಹೆಚ್ಚು ಅವಕಾಶವಿದೆ ನಿಜ. ಆದರೆ, ಮುದ್ರಣ ಮಾಧ್ಯಮವೂ ಉಳಿಯಬೇಕು ಎಂದು ಆಶಿಸಿದರು.

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ ಇದ್ದರು. ಆರ್.ಸಿ.ಭಟ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT