ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ನಿಘಂಟು ರಚನೆ ಮಾದರಿ ಕಾರ್ಯ: ಡಾ.ಕೆ.ಪದ್ಮನಾಭ

ಶ್ರದ್ಧಾಂಜಲಿ ಕಾರ್ಯಕ್ರಮ
Last Updated 21 ಆಗಸ್ಟ್ 2020, 7:04 IST
ಅಕ್ಷರ ಗಾತ್ರ

ಮಂಗಳೂರು: ‘ಬಹುಭಾಷಾ ವಿದ್ವಾಂಸ, ಸಂಶೋಧಕ, ತುಳು ನಿಘಂಟು ರಚನೆಕಾರ ಡಾ.ಉಳಿಯಾರು ಪದ್ಮನಾಭ ಉಪಾಧ್ಯಾಯ ಅವರು ಮಾಡಿದ ಸಾಧನೆ ಅಗ್ರಮಾನ್ಯ’ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ತುಳು ನಿಘಂಟು ಯೋಜನೆಯಲ್ಲಿ ಸಂಶೋಧಕರಾಗಿ ಕೆಲಸ ಮಾಡಿದ ಡಾ.ಕೆ.ಪದ್ಮನಾಭ ಕೇಕುಣ್ಣಾಯ ಹೇಳಿದರು.

ತುಳು ಸಾಹಿತ್ಯ ಅಕಾಡೆಮಿಯ ಸಿರಿಚಾವಡಿಯಲ್ಲಿ ನಡೆದ ಡಾ.ಯು.ಪಿ ಉಪಾಧ್ಯಾಯರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘ತಮ್ಮ ಭಾಷಾನುಭವ, ಅಧ್ಯಯನದ ಅನುಭವಗಳಿಂದಾಗಿ ಭಾರತೀಯ ಭಾಷೆಗಳಲ್ಲೂ ಇದುವರೆಗೂ ಬಂದಿರದ ವೈಶಿಷ್ಟ್ಯ ಪೂರ್ಣ, ವಿದ್ವತ್‌‍ಪೂರ್ಣ ತುಳು ನಿಘಂಟನ್ನು ತಯಾರಿಸಿಕೊಟ್ಟ ಡಾ.ಯು.ಪಿ ಉಪಾಧ್ಯಾಯರ ತಾಳ್ಮೆ,ಶಕ್ತಿ ಅದ್ಭುತವಾದುದು’ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಆಶೋಕ ಆಳ್ವ ಮಾತನಾಡಿ, ‘ಡಾ. ಯು.ಪಿ.ಉಪಾಧ್ಯಾಯರು ಎರಡು ದಶಕಗಳ ನಿಘಂಟು ರಚನೆಗೆ ಹಗಲು ರಾತ್ರಿ ಶ್ರಮಿಸಿದ್ದಾರೆ‘ ಎಂದು ತಿಳಿಸಿದರು.

ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ ಮಾತನಾಡಿ, ‘ಪ್ರತಿ ವರ್ಷ ತುಳು ಭಾಷೆಗೆ ಸಂಬಂಧಪಟ್ಟ ಕೆಲಸವನ್ನು ಮಾಡುವ ಮೂಲಕ ನಾವು ಡಾ.ಯು.ಪಿ.ಉಪಾಧ್ಯಾಯರನ್ನು ನೆನಪಿಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌‍ಸಾರ್ ಮಾತನಾಡಿ, ‘ಡಾ.ಯು.ಪಿ.ಉಪಾಧ್ಯಾಯ ಮತ್ತು ಸುಶೀಲಾ ಉಪಾಧ್ಯಾಯ ದಂಪತಿ ಈ ನೆಲಕ್ಕೆ ತೌಳವ ಮಾತೆ ಇತ್ತ ಪ್ರಸಾದ. ಅಹರ್ನಿಶಿ ತುಳು ನಿಘಂಟಿಗಾಗಿ ದುಡಿದು ಆರು ಸಂಪುಟವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪರಿಷ್ಕೃತ ತುಳು ನಿಘಂಟನ್ನು ಮುಂದುವರಿಸಲು ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಇವರ ಸಂಸ್ಮರಣೆ ಮಾಡುವುದು ಸರ್ವ ತುಳುವರ ಕರ್ತವ್ಯ’ ಎಂದು ಅಭಿಪ್ರಾಯಪಟ್ಟರು.

ಯಕ್ಷಗಾನ ಸಂಘಟಕ ರಘುರಾಂ ಶೆಟ್ಟಿ ಭಾಗವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ., ಅಕಾಡೆಮಿಯ ಸದಸ್ಯರಾದ ಚೇತಕ್ ಪೂಜಾರಿ, ನಿಟ್ಟೆ ಶಶಿಧರ್ ಶೆಟ್ಟಿ ಉಪಸ್ಥಿತರಿದ್ದರು. ಅಕಾಡೆಮಿಯ ಸದಸ್ಯ ನಾಗೇಶ್ ಕುಲಾಲ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT