ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದ ಭಾಷೆಯಲ್ಲಿ ಬಾಂಧವ್ಯ: ಶಶಿಕುಮಾರ್

ಪೊಲೀಸ್: ಹೊರ ಜಿಲ್ಲೆಯವರಿಗೆ ತುಳು, ಬ್ಯಾರಿ ತರಗತಿ
Last Updated 22 ಸೆಪ್ಟೆಂಬರ್ 2021, 3:04 IST
ಅಕ್ಷರ ಗಾತ್ರ

ಮಂಗಳೂರು: ನೆಲದ ಭಾಷೆಯಲ್ಲಿ ಬಾಂಧವ್ಯವೂ ಗಾಢವಾಗಿರುತ್ತದೆ. ನೆಲದ ಭಾಷೆ, ಸಂಸ್ಕೃತಿ, ಮೌಲ್ಯಯುತ ಆಚರಣೆಗಳನ್ನು ಗೌರವಿಸಿದಾಗ ಕರ್ತವ್ಯವೂ ಸುಲಲಿತವಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ್ ಹೇಳಿದರು.

ಮಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ‘ತುಳು ಮತ್ತು ಬ್ಯಾರಿ ಭಾಷಾ ತರಬೇತಿ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾವು ಕೆಲಸ ಮಾಡುವ ಪ್ರದೇಶದ ಭಾಷೆ, ಆಚರಣೆ, ಸಂಸ್ಕೃತಿ ಮೊದಲಾದವನ್ನು ಕಲಿತು ಗೌರವಿಸಿದರೆ, ಕೆಲಸ ನಿರ್ವಹಣೆ ಸಮಸ್ಯೆಯಾಗದು. ಜತೆಗೆ ಆತ್ಮವಿಶ್ವಾಸವೂ ವೃದ್ಧಿಯಾಗುತ್ತದೆ ಎಂದರು.

‘ಮಂಗಳೂರು ಪೊಲೀಸ್‌ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಹೊರ ಜಿಲ್ಲೆಯ ಪೊಲೀಸ್‌ ಸಿಬ್ಬಂದಿಗೆ ಒಂದು ತಿಂಗಳ ಕಾಲ ತುಳು ಮತ್ತು ಬ್ಯಾರಿ ಭಾಷೆ ಕಲಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಈ ಮೂಲಕ ಜನಸ್ನೇಹಿ ಪೊಲೀಸರನ್ನು ರೂಪಿಸುವ ಪ್ರಯತ್ನ ನಮ್ಮದು’ ಎಂದರು.

ಕರ್ನಾಟಕತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್ ಮಾತನಾಡಿ, ‘ತುಳು ಭಾಷೆಯು ಸುಸಂಸ್ಕೃತರನ್ನಾಗಿಸುವ ಸಾಮರ್ಥ್ಯ ಹೊಂದಿದೆ. ಪೊಲೀಸರಿಗೆ ತುಳು ಮತ್ತು ಬ್ಯಾರಿ ಕಲಿಸುವ ಕಾರ್ಯ ಶ್ಲಾಘನೀಯ’ ಎಂದರು.

ಒಂದು ತಿಂಗಳ ಕಾಲ ನಡೆದ ತುಳು ಮತ್ತು ಬ್ಯಾರಿ ಭಾಷೆ ಕಲಿಕಾ ತರಬೇತಿ ಶಿಬಿರದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಇತರ ಜಿಲ್ಲೆಗಳ 55 ಪೊಲೀಸ್‌ ಸಿಬ್ಬಂದಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಆಸಕ್ತಿಯಿಂದ ಪಾಲ್ಗೊಂಡ ಪೊಲೀಸರ ಬಗ್ಗೆ ಶಿಕ್ಷಕರು ಮೆಚ್ಚುಗೆಯ ಮಾತುಗಳನ್ನಾಡಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಪಿ. ದಿನೇಶ್ ಕುಮಾರ್, ಸಿಎಆರ್ ಡಿಸಿಪಿ ಹಡಪದ ಇದ್ದರು.

ರಾಜೇಶ್ ಕದ್ರಿ, ಸುಧಾನ ನಾಗೇಶ್ ಅವರು ತುಳು ಭಾಷಾ ಶಿಕ್ಷಕರಾಗಿ, ಶಂಶೀರ್ ಬಂಡೋಳಿ, ರಜಾಕ್ ಅನಂತವಾಡಿ ಮತ್ತು ಅಶ್ರುದ್ದಿನ್ ಸತ್ರಾಬೈಲ್ ಬ್ಯಾರಿ ಭಾಷಾ ಶಿಕ್ಷಕರಾಗಿ ಪಾಲ್ಗೊಂಡಿದ್ದರು. ಸಂಚಾರ ವಿಭಾಗದ ಎಸಿಪಿ ಎಂ.ಎ. ನಟರಾಜ್ ಕಾರ್ಯಕ್ರಮ ನಿರ್ವಹಿಸಿದರು.

‘ತಾಸೆದ ಪೆಟ್ಟ್‌ಗೆ ನಲಿಪುನಾ...’ ಎಂಬ ತುಳು ಹಾಡನ್ನು ಖುದ್ದು ಹಾಡುವ ಮೂಲಕ ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ್ ಗಮನ ಸೆಳೆದರು. ಆಯುಕ್ತರ ಹಾಡಿಗೆ ಪೊಲೀಸರೂ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT